ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪುರಿ ಜಗನ್ನಾಥ ದೇವಳ ಪ್ರವೇಶಿಸಿದ ವಿದೇಶಿಗನ ಬಂಧನ
(British national | Sri Jagannath temple | Steven Galaro | Hindu)
ವಿದೇಶೀಯರು ಸೇರಿದಂತೆ ಹಿಂದೂಯೇತರರಿಗೆ ಬಹುತೇಕ ನಿಷೇಧವಿರುವ ಪುರಿ ಶ್ರೀ ಜಗನ್ನಾಥ ದೇವಳದ ಆವರಣ ಪ್ರವೇಶಿಸಿದ ಬ್ರಿಟೀಷ್ ಪ್ರಜೆಯೊಬ್ಬನನ್ನು ಮಂಗಳವಾರ ಬಂಧಿಸಲಾಗಿದ್ದು, ಕೆಲ ಕಾಲ ಇಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
25ರ ಹರೆಯದ ಸ್ಟೀವನ್ ಗ್ಯಾಲರೊ ಎಂಬಾತನೇ ಅಕ್ರಮವಾಗಿ ದೇವಸ್ಥಾನ ಪ್ರವೇಶಿಸಲು ಯತ್ನಿಸಿದವನು. ತಕ್ಷಣವೇ ದೇವಸ್ಥಾನದ ಸೇವಕರು ಈತನನ್ನು ವಶಕ್ಕೆ ತೆಗೆದುಕೊಂಡು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
PR
ವಿಸ್ತೃತ ತನಿಖೆ ಮತ್ತು ಪರಿಶೀಲನೆ ನಡೆಸಿದ ನಂತರ ಈ ವಿದೇಶಿ ಪ್ರವಾಸಿಯನ್ನು ದೇವಸ್ಥಾನದ ಆಡಳಿತಕ್ಕೆ ಪೊಲೀಸರು ಒಪ್ಪಿಸಿದ್ದು, ನಂತರ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ರೀತಿಯಾಗಿ ದೇವಳ ಪ್ರವೇಶಿಸಲು ಯತ್ನಿಸಿದವರಿಗೆ ಇದಕ್ಕೂ ಮೊದಲು ಯಾವುದೇ ಶಿಕ್ಷೆ ನೀಡಿದ ಅಥವಾ ಪ್ರಕರಣ ದಾಖಲಿಸಿದ ಉದಾಹರಣೆ ಇಲ್ಲದೆ ಇರುವುದರಿಂದ ಆತನನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡಲಾಗಿದೆ ಎಂದು ದೇವಸ್ಥಾನದ ಹಿರಿಯ ಅಧಿಕಾರಿ ಡಿ.ಪಿ. ಪಾಂಡಾ ತಿಳಿಸಿದ್ದಾರೆ.
ಗ್ಯಾಲರೊ ಪವಿತ್ರ ಗರ್ಭಗುಡಿಯನ್ನು ಪ್ರವೇಶಿಸಿರದ ಕಾರಣ ದೇವಳದ ದೈನಂದಿನ ಪೂಜಾಕೈಂಕರ್ಯಗಳಿಗೆ ಯಾವುದೇ ತೊಂದರೆಯಾಗಿಲ್ಲ.
ದೇವಸ್ಥಾನ ಮತ್ತು ಇದರ ಸುತ್ತಮುತ್ತ ವಿದೇಶೀಯರಿಂದ ಆಕ್ರಮಣ ನಡೆದ ಹಲವು ಉದಾಹರಣೆಗಳಿರುವುದರಿಂದ ಹಿಂದೂಗಳಲ್ಲದ ವಿದೇಶೀಯರಿಗೆ ಈ ದೇವಳದಲ್ಲಿ ಪ್ರವೇಶ ನಿಷಿದ್ಧ. ಭಾರತ ಮೂಲವೆಂದು ರುಜುವಾತು ಪಡಿಸಿದಲ್ಲಿ ಬೌದ್ಧ ಮತ್ತು ಜೈನ ಮತದವರಿಗೆ ಪ್ರವೇಶಾವಕಾಶವಿದೆ.