ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಕುಟುಂಬವೊಂದಕ್ಕೆ ಮೀಸಲು: ಗಡ್ಕರಿ
ಹೈದರಾಬಾದ್, ಬುಧವಾರ, 9 ಜೂನ್ 2010( 10:56 IST )
ಜವಾಹರ್‌ಲಾಲ್ ನೆಹರೂ ವಿರುದ್ಧ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕಿಡಿ ಕಾರಿದ ಬೆನ್ನಿಗೆ ಇದೀಗ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಕಾಂಗ್ರೆಸ್ ಅಧ್ಯಕ್ಷೀಯ ಪದವಿಯ ಬಗ್ಗೆ ವ್ಯಂಗ್ಯವಾಡಿದ್ದಾರೆ. ಅದು ಕುಟುಂಬವೊಂದಕ್ಕೆ ಮೀಸಲಾಗಿದ್ದು, ಹಿರಿಯ ನಾಯಕರಾದ ಮನಮೋಹನ್ ಸಿಂಗ್ ಅವರಂತವರಿಗೂ ಅಧ್ಯಕ್ಷರಾಗುವುದು ಅಸಾಧ್ಯ ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.
ನಾನೊಬ್ಬ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿದ್ದೆ. ರಾಜಧಾನಿ ದೆಹಲಿಯ ರಸ್ತೆಗಳ ಪರಿಚಯ ನನಗಿರಲಿಲ್ಲ. ದೆಹಲಿ ಜನತೆಯ ಬಗ್ಗೆ ನನಗೆ ತಿಳಿದಿರಲಿಲ್ಲ. ಆದರೂ ನನ್ನನ್ನು ಪಕ್ಷವು ಚುನಾಯಿಸಿ, ನಾಯಕನನ್ನಾಗಿ ಆಯ್ಕೆಗೊಳಿಸಿತು. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಖಂಡಿತಾ ಕಾಂಗ್ರೆಸ್‌ನಲ್ಲಿ ಈ ರೀತಿ ನಡೆಯದು. ಒಂದು ವೇಳೆ ಮನಮೋಹನ್ ಸಿಂಗ್ ತಾನು ಪಕ್ಷದ ಅಧ್ಯಕ್ಷನಾಗಬೇಕೆಂದು ಕನಸು ಕಂಡರೆ, ಅದು ನನಸಾಗದು. ಯಾಕೆಂದರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಕುಟುಂಬವೊಂದಕ್ಕೆ ಮೀಸಲಾಗಿದೆ ಎಂದರು.
ಗಡ್ಕರಿಯವರು ನೆಹರೂ ಕುಟುಂಬದ ಮೇಲೆ ನೇರವಾದ ದಾಳಿ ಮಾಡದಿದ್ದರೂ, ಪರೋಕ್ಷವಾಗಿ ಉದ್ಘರಿಸಿದ್ದು 'ಗಾಂಧಿ' ಕುಟುಂಬ ರಾಜಕಾರಣವನ್ನು. ಮೋತಿಲಾಲ್ ನೆಹರೂ, ಅವರ ಪುತ್ರ ಜವಾಹರ್‌ಲಾಲ್ ನೆಹರೂ, ಅವರ ಪುತ್ರಿ ಇಂದಿರಾ ಗಾಂಧಿ, ಅವರ ಪುತ್ರ ರಾಜೀವ್ ಗಾಂಧಿ ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದವರು. ರಾಜೀವ್ ಪತ್ನಿ ಸೋನಿಯಾ ಗಾಂಧಿ ಕಳೆದ 12 ವರ್ಷಗಳಿಂದ ಎಐಸಿಸಿ ಅಧಿನಾಯಕಿಯಾಗಿ ಮುಂದುವರಿಯುತ್ತಿದ್ದಾರೆ.
ಆಂಧ್ರಪ್ರದೇಶದ ಬಿಜೆಪಿ ಘಟಕದ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಗಡ್ಕರಿ ಈ ರೀತಿಯಾಗಿ ಟೀಕಿಸಿದ್ದಾರೆ.
ನಂತರ ಮಾತು ಬದಲಾಯಿಸಿದ ಅವರು, 'ಮುಂದುವರಿಯುತ್ತಿರುವ ರೈತರ ಆತ್ಮಹತ್ಯೆಗಳು, ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣ, ಅಗತ್ಯ ವಸ್ತುಗಳ ದರ ಗಗನಕ್ಕೇರಿರುವುದು ಮುಂತಾದುವುಗಳು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವೈಫಲ್ಯಕ್ಕೆ ಸಾಕ್ಷಿ' ಎಂದರು.
ಅದೇ ಹೊತ್ತಿಗೆ ರಾಜ್ಯ ಕಾಂಗ್ರೆಸ್ ಮೇಲೂ ಗಡ್ಕರಿ ಹರಿ ಹಾಯ್ದಿದ್ದಾರೆ. ಆಡಳಿತ ಪಕ್ಷದಲ್ಲಿನ ಅಂತಃಕಲಹಗಳು ಆಂಧ್ರವನ್ನು ನಲುಗಿಸುತ್ತಿದೆ. ಅಲ್ಲದೆ ಜನ ಕಲ್ಯಾಣ ಯೋಜನೆಗಳು ಮತ್ತು ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವಲ್ಲೂ ರಾಜ್ಯ ವಿಫಲವಾಗಿದೆ ಎಂದರು.