ತಾಯಿಯ ಜತೆ ಜಗಳ ಮಾಡಿಕೊಂಡು ದೇವರ ದರ್ಶನಕ್ಕೆಂದು ತಿರುಪತಿಗೆ ಹೋಗಿದ್ದ ಕರ್ನಾಟಕದ ಯುವಕನೊಬ್ಬ ಕೈಗೆಟುಕುವಂತಿದ್ದ ಹುಂಡಿಗೆ ಕೈ ಹಾಕಿ ಸಾವಿರಾರು ರೂಪಾಯಿಗಳನ್ನು ಲಪಟಾಯಿಸಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಆರೋಪಿಯನ್ನು ಸುಮಾರು 35ರ ಹರೆಯದ ಕೋಲಾರದ ಬಂಗಾರಪೇಟೆ ನಿವಾಸಿ ಪ್ರಕಾಶ್ ಎಂದು ಗುರುತಿಸಲಾಗಿದೆ.
ಭಕ್ತನಂತೆ ದೇವಸ್ಥಾನಕ್ಕೆ ಹೋಗಿದ್ದ ಪ್ರಕಾಶ್ ಈ ಕೃತ್ಯ ಎಸಗಿದ್ದು, ಭದ್ರತಾ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈತ ಕಳ್ಳತನ ಮಾಡುತ್ತಿರುವುದು ಟಿಡಿಪಿ ದೇಗುಲದಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದನ್ನು ನೇರಪ್ರಸಾರದ ಮೂಲಕ ನೋಡುತ್ತಿದ್ದ ಅಧಿಕಾರಿಗಳು ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
5,137 ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದ್ದರೂ, ತಾನು ಕಳ್ಳನೆಂದು ಒಪ್ಪಿಕೊಳ್ಳಲು ಪ್ರಕಾಶ್ ನಿರಾಕರಿಸಿದ್ದಾನೆ. ಪರಿಸ್ಥಿತಿಯ ಕಾರಣದಿಂದ ತಾನು ಈ ಹಾದಿಯನ್ನು ಹಿಡಿದೆ ಎಂದು ಆತ ತಿಳಿಸಿದ್ದಾನೆ.
ಗರ್ಭಗುಡಿಯ ಹತ್ತಿರವಿರುವ ಸುಮಾರು ಏಳು ಅಡಿ ಎತ್ತರವಿರುವ ಹುಂಡಿಗೆ ಭಕ್ತರು ಹಣ ಸೇರಿದಂತೆ ತಮ್ಮ ಹರಕೆಗಳನ್ನು ಅರ್ಪಿಸುತ್ತಾರೆ. ಇಲ್ಲಿಂದ ಪ್ರಕಾಶ್ ನೋಟಿನ ಕಟ್ಟನ್ನೇ ಲಪಟಾಯಿಸಿದ್ದ.
ಊರಿನಲ್ಲಿ ತಾಯಿಯ ಜತೆ ಜಗಳ ಮಾಡಿಕೊಂಡು ನಾನು ತಿರುಮಲಕ್ಕೆ ಬಂದಿದ್ದೆ. ಆ ಹೊತ್ತಿಗೆ ನನ್ನಲ್ಲಿದ್ದ ಹಣವೆಲ್ಲ ಖರ್ಚಾಗಿ ಹೋಗಿತ್ತು. ಊಟಕ್ಕೂ ಹಣವಿರಲಿಲ್ಲ. ಹಾಗಾಗಿ ದೇವರ ಹುಂಡಿಗೆ ಕೈ ಹಾಕಿದ್ದೆ ಎಂದು ಪ್ರಕಾಶ್ ಹೇಳಿದ್ದಾನೆ.
ಪ್ರಕರಣ ದಾಖಲಿಸಿರುವ ತಿರುಮಲ ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.