ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮತ್ತಷ್ಟು ಆಂಡರ್ಸನ್‌ಗಳ ಸೃಷ್ಟಿ ತಡೆದೀತೇ ಕೇಂದ್ರ? (civil nuclear liability Bill | nuclear power plants | UPA govt | Veerappa Moily)
Bookmark and Share Feedback Print
 
ಭೋಪಾಲ ಅನಿಲ ದುರಂತದಲ್ಲಿ ಅಮೆರಿಕಾ ನಡೆದುಕೊಂಡ ರೀತಿ ಮತ್ತು ಕಂಪನಿ ನೀಡಿದ ಜುಜುಬಿ ಪರಿಹಾರಗಳನ್ನು ಗಮನದಲ್ಲಿಟ್ಟುಕೊಂಡು 'ಭಾರತೀಯರ ಜೀವವೂ ಅಮೂಲ್ಯ' ಎಂಬ ನಿರ್ಧಾರಕ್ಕೆ ಬರುವ ಮೂಲಕ ಮತ್ತು ಈ ಬಗ್ಗೆ ಎಡಪಕ್ಷಗಳು, ಬಿಜೆಪಿ ಕೂಗೆಬ್ಬಿಸಿರುವುದರಿಂದಾಗಿ, ವಿವಾದಿತ ಪರಮಾಣು ಬಾಧ್ಯತಾ ಮಸೂದೆಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಮರು ಪರಿಶೀಲನೆ ನಡೆಸಲಿದೆಯೇ?

ಅಂತಹ ಕೆಲವು ಸೂಚನೆಗಳು ಇದೀಗ ಕಾಂಗ್ರೆಸ್ ಮತ್ತು ಸರಕಾರದ ವಲಯದಿಂದಲೇ ಲಭ್ಯವಾಗುತ್ತಿದೆ. ಈ ಹಿಂದೆ ಬಿಜೆಪಿ ಮತ್ತು ಎಡಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳು ಎತ್ತಿದ್ದ ಹಲವು ಪ್ರಶ್ನೆಗಳನ್ನು ಕಸದ ಬುಟ್ಟಿಗೆ ಎಸೆದು ಲೋಕಸಭೆಯಲ್ಲಿ ಅಪಾಯಕಾರಿ ಪರಮಾಣು ಬಾಧ್ಯತಾ ಮಸೂದೆಯನ್ನು ಅಂಗೀಕಾರಕ್ಕೊಳಪಡಿಸಿದ್ದ ಪ್ರಧಾನಿ ಮನಮೋಹನ್ ಸಿಂಗ್ ಸರಕಾರ, ಭೋಪಾಲ ಪ್ರಕರಣದಲ್ಲಿ ನ್ಯಾಯ ಸಿಗದೇ ಇರುವುದನ್ನು ಕೊನೆಗೂ ಗಂಭೀರವಾಗಿ ಪರಿಗಣಿಸಿದಂತಿದೆ.

ಭಾರತ ಮತ್ತು ಅಮೆರಿಕಾ ನಡುವಿನ ಬಹುನಿರೀಕ್ಷಿತ 123 ನಾಗರಿಕ ಪರಮಾಣು ಒಪ್ಪಂದ ಜಾರಿಗೆ ಬರಬೇಕಾದರೆ ಪರಮಾಣು ಬಾಧ್ಯತಾ ಮಸೂದೆಗೆ ಅಂಕಿತ ಕಡ್ಡಾಯ.

ಪ್ರಸಕ್ತ ಸರಕಾರ ಸಿದ್ಧಪಡಿಸಿರುವ ಮಸೂದೆಯ ಪ್ರಕಾರ ಭಾರತದಲ್ಲಿ ಯಾವುದೇ ಪರಮಾಣು ಅವಘಡಗಳು ಸಂಭವಿಸಿದರೂ ಅದಕ್ಕೆ ರಿಯಾಕ್ಟರ್ ಸೇರಿದಂತೆ ಸಲಕರಣೆಗಳನ್ನು ಪೂರೈಸುವ ಅಮೆರಿಕಾ ಕಂಪನಿಗಳು ಯಾವುದೇ ಹೊಣೆಯನ್ನು ಹೊತ್ತುಕೊಳ್ಳಬೇಕಿಲ್ಲ. ಬದಲಿಗೆ ಭಾರತದಲ್ಲಿ ಅಣು ಸ್ಥಾವರಗಳನ್ನು ನಿರ್ವಹಿಸುವ ಕಂಪನಿಗಳು ಅವಘಡಕ್ಕೆ ಗರಿಷ್ಠ 500 ಕೋಟಿವರೆಗೆ ಪರಿಹಾರ ನೀಡಬಹುದು. ಇದನ್ನು 100 ಕೋಟಿ ರೂಪಾಯಿಗಳಿಗೆ ಇಳಿಸುವ ಹಕ್ಕು ಕೂಡ ಸರಕಾರದ ಬಳಿ ಇದೆ. ಆದರೆ ಹೆಚ್ಚು ಮಾಡುವ ಅಧಿಕಾರವಿಲ್ಲ.

ಅಂದರೆ ಅಮೆರಿಕಾ ಕಂಪನಿಗಳು ಪೂರೈಸುವ ರಿಯಾಕ್ಟರ್ ಮತ್ತು ಇನ್ನಿತರ ಸಲಕರಣೆಗಳಿಂದಾಗಿ ಭಾರತದಲ್ಲಿ ಅವಘಡ ಸಂಭವಿಸಿ ಲಕ್ಷಾಂತರ ಮಂದಿ ಮೃತಪಟ್ಟರೂ ಅದಕ್ಕೆ ಅಮೆರಿಕಾ ಹೊಣೆಯಲ್ಲ ಮತ್ತು ಯಾವುದೇ ಪರಿಹಾರವನ್ನು ನೀಡಬೇಕಾಗಿಲ್ಲ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಅವಕಾಶ ಮತ್ತು ಕಾನೂನು ಕ್ರಮ ಕೈಗೊಳ್ಳುವುದು ಕೂಡ ಸಾಧ್ಯವಿಲ್ಲ.

ಪರಮಾಣು ಸ್ಥಾವರ ನಡೆಸುವ ಭಾರತೀಯ ಕಂಪನಿ ನೀಡಬೇಕಾದ ಪರಿಹಾರ ಮೊತ್ತ ಕೇವಲ 500 ಕೋಟಿ ರೂಪಾಯಿ. ಒಂದು ಪರಮಾಣು ಅಪಘಾತದ ಒಟ್ಟು ಹಣಕಾಸು ಬಾಧ್ಯತೆ ಸುಮಾರು 2143 ಕೋಟಿ ರೂಪಾಯಿಗಳು. 500 ಕೋಟಿ ರೂಪಾಯಿಗಳನ್ನು ಕಂಪನಿಗಳು ನೀಡಿದರೆ, ಉಳಿದ 1643 ಕೋಟಿ ರೂಪಾಯಿಗಳ ಬಾಧ್ಯತೆ ಸರಕಾರದ್ದು. ಇದಕ್ಕಿಂತ ಹೆಚ್ಚಿನ ಪರಿಹಾರ ಘಟನೆಯಿಂದ ತೊಂದರೆಗೊಳಗಾದವರಿಗೆ ಯಾರಿಂದಲೂ ಸಿಗದು.

ಕಾಂಗ್ರೆಸ್ಸಿಗೂ ಮನವರಿಕೆಯಾಗುತ್ತಿದೆ...
ಭೋಪಾಲ ದುರಂತದಲ್ಲಿ ನ್ಯಾಯಾಂಗವು ಕೇವಲ ದಾಖಲಾತಿ ಏಜೆಂಟ್ ರೀತಿಯಲ್ಲಿ ನಡೆದುಕೊಂಡಿರುವುದರ ಜತೆಗೆ ಬಿಜೆಪಿ ಮತ್ತಿತರ ಪಕ್ಷಗಳ ಒತ್ತಡವು ಪರಮಾಣು ಬಾಧ್ಯತಾ ಮಸೂದೆ ಕುರಿತ ಕಾಂಗ್ರೆಸ್ ನಿಲುವಿನಲ್ಲೂ ಬದಲಾವಣೆ ತರುತ್ತಿರುವುದು ಕಾನೂನು ಸಚಿವ ವೀರಪ್ಪ ಮೊಯ್ಲಿ ಮತ್ತು ಕಾಂಗ್ರೆಸ್ ನಾಯಕ ಜನಾರ್ದನ ದ್ವಿವೇದಿ ಹೇಳಿಕೆಗಳಲ್ಲಿ ವ್ಯಕ್ತವಾಗಿದೆ.

ಭೋಪಾಲ ದುರಂತದ ತೀರ್ಪು ಹೊರ ಬೀಳುತ್ತಿದ್ದಂತೆ ಪರಮಾಣು ಬಾಧ್ಯತಾ ಮಸೂದೆ ಕುರಿತು ಚರ್ಚಿಸಲು ಮೊಯ್ಲಿ ಸಭೆ ಕರೆದಿದ್ದು, ನಿರ್ಧಾರದಲ್ಲಿ ಬದಲಾವಣೆ ಸಾಧ್ಯತೆಗಳನ್ನು ಅವರು ಅಲ್ಲಗಳೆದಿಲ್ಲ.

ಅತ್ತ ಕಾಂಗ್ರೆಸ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಇಲ್ಲಿರುವ ಕೆಲವು ಕಳವಳಗಳನ್ನು ಯಾರು ಕೂಡ ನಿರಾಕರಿಸುತ್ತಿಲ್ಲ. ಪರಿಹಾರ ಕುರಿತ ವಿಚಾರ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಸಮಾಲೋಚನೆ ನಡೆಯಬೇಕಿದೆ. ದೇಶವು ಭೋಪಾಲ ದುರಂತದಿಂದ ಪಾಠ ಕಲಿಯಬೇಕು ಎಂದು ವಕ್ತಾರ ದ್ವಿವೇದಿ ಹೇಳಿದ್ದಾರೆ.

ಪ್ರಸಕ್ತ ಇರುವ ಪರಮಾಣು ಬಾಧ್ಯತಾ ಮಸೂದೆಯು ಜಾರಿಗೊಂಡರೆ, ಇನ್ನಷ್ಟು ವಾರೆನ್ ಆಂಡರ್ಸನ್‌ಗಳಿಗೆ ಸಹಕಾರವಾಗಲಿದೆ. ಇದು ನಮ್ಮ ಸಂವಿಧಾನಕ್ಕೆ ವಿರುದ್ಧವಾದುದು. ಪರಿಹಾರದ ಮೊತ್ತವನ್ನು ಈ ಮಸೂದೆ ಸೀಮಿತಗೊಳಿಸುತ್ತದೆ. ಭಾರತೀಯರ ಸುರಕ್ಷತೆ ಮತ್ತು ಹಿತಾಸಕ್ತಿಗಳನ್ನು ಸರಕಾರ ರಕ್ಷಿಸಬೇಕು ಎಂದು ಸಿಪಿಐಎಂ ಒತ್ತಾಯಿಸಿದ್ದು, ಬಿಜೆಪಿ ಕೂಡ, ಭೋಪಾಲ ತೀರ್ಪು ಪರಮಾಣು ಬಾಧ್ಯತಾ ಮಸೂದೆಯ ಪುನರ್ವಿಮರ್ಶೆಯಾಗಬೇಕೆಂಬ ಪ್ರತಿಪಕ್ಷಗಳ ಒತ್ತಾಯಕ್ಕೆ ಪುಷ್ಟಿ ನೀಡಿದೆ ಎಂದು ಹೇಳಿದೆ.

ಇವೆಲ್ಲ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡು ಪರಮಾಣು ಬಾಧ್ಯತಾ ಮಸೂದೆಯಲ್ಲಿ ಅಮೆರಿಕಾ ಕಂಪನಿಗಳನ್ನು ಹೊಣೆಗಾರರನ್ನಾಗಿ ಮಾಡುವ ಮತ್ತು ಭಾರತೀಯ ಕಂಪನಿಗಳ ಪರಿಹಾರ ಮೊತ್ತವನ್ನು ಹೆಚ್ಚಿಸುವ ನಿರ್ಧಾರಕ್ಕೆ ಕೇಂದ್ರ ಬರಲಿದೆಯೇ ಎನ್ನುವುದು ಕೊನೆಗೆ ಉಳಿಯುವ ಪ್ರಶ್ನೆ.
ಸಂಬಂಧಿತ ಮಾಹಿತಿ ಹುಡುಕಿ