ಬಾಲಕಿ ರುಚಿಕಾ ಗಿರೋತ್ರಾಗೆ ಲೈಂಗಿಕ ಕಿರುಕುಳ ನೀಡಿ ಆಕೆಯ ಸಾವಿಗೆ ಕಾರಣನಾಗಿದ್ದ ಹರ್ಯಾಣದ ಮಾಜಿ ಡಿಜಿಪಿ ಎಸ್‌ಪಿಎಸ್ ರಾಥೋಡ್ ಒಂಟಿಯಲ್ಲ. ಅದೇ ರಾಜ್ಯದ ಮತ್ತೊಬ್ಬ ಅಗ್ರ ಮಾಜಿ ಪೊಲೀಸ್ ಅಧಿಕಾರಿ ಒಂಬತ್ತು ವರ್ಷಗಳ ಹಿಂದೆ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ವಿಧವೆಯೊಬ್ಬಳಿಗೆ ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಹಾಕಿದ್ದಾರೆಂದು ಪ್ರಕರಣ ದಾಖಲಿಸಲಾಗಿದೆ.
ಸೆಕ್ಷನ್ 327, 354 ಮತ್ತು 506ಗಳಡಿಯಲ್ಲಿ ಉದ್ದೇಶಪೂರ್ವಕ ತೊಂದರೆ, ಮಹಿಳೆಗೆ ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಹಾಕಿರುವ ಪ್ರಕರಣಗಳನ್ನು ಮಾಜಿ ಐಜಿಪಿ ಎಂ.ಎಸ್. ಅಹ್ಲಾವತ್ ಅವರ ಮೇಲೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮನೋಹರ್ ಲಾಲ್ ತಿಳಿಸಿದ್ದಾರೆ.
2001ರಲ್ಲೇ ದೂರು ನೀಡಲಾಗಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೇ ಸಂಬಂಧ ಕಳೆದ ವರ್ಷ ಕೌರ್ ಡಿಜಿಪಿ ಕಚೇರಿಯೆದುರು ಪ್ರತಿಭಟನೆ ನಡೆಸಿದ ನಂತರ ತನಿಖೆಗೆ ಆದೇಶ ನೀಡಲಾಗಿತ್ತು. ಕೆಲವು ತಿಂಗಳುಗಳ ಹಿಂದಷ್ಟೇ ನಿವೃತ್ತಿಯಾದ ನಂತರ ಇದೀಗ ಮಾಜಿ ಐಜಿಪಿ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಆರೋಪಗಳ ಕುರಿತು ಗಂಭೀರವಾಗಿ ತನಿಖೆ ನಡೆಸಲಾಗುತ್ತದೆ. ಈಗಾಗಲೇ ತನಿಖೆ ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.
ತಾನು ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಅಹ್ಲಾವತ್ ಅವರಿಂದ ತೊಂದರೆಗೊಳಗಾದಾಗ ರಾಥೋಡ್ ಹರ್ಯಾಣದ ಡಿಜಿಪಿಯಾಗಿದ್ದರು ಎಂದು ಮಹಿಳೆ ಅರವಿಂದರ್ ಕೌರ್ ಆರೋಪಿಸಿದ್ದಾರೆ.
ರಾಥೋಡ್ ಅವರು ಕಚೇರಿಯಲ್ಲಿ ಇಲ್ಲದೆ ಇದ್ದರೆ, ಅಹ್ಲಾವತ್ ಈ ರೀತಿ ನಡೆದುಕೊಳ್ಳುತ್ತಿರಲಿಲ್ಲ. ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಸಹಾಯ ಪಡೆಯಲೆಂದು ಹೋಗಿದ್ದ ಮಹಿಳೆಗೆ ಕಿರುಕುಳ ನೀಡಲು ಅಹ್ಲಾವತ್ ಧೈರ್ಯ ಹೊಂದಿರಲಿಲ್ಲ. ಆದರೆ ಅವರಿಗೆ ರಾಥೋಡ್ ಬೆಂಬಲವಿತ್ತು ಎಂದು ಕೌರ್ ಹೇಳುತ್ತಾರೆ.
ಅದೇ ಹೊತ್ತಿಗೆ ಅಹ್ಲಾವತ್ ವಿರುದ್ಧ ಪ್ರಕರಣ ದಾಖಲಿಸುವುದು ನನಗೆ ಸುಲಭದ ಕೆಲಸವಾಗಿರಲಿಲ್ಲ ಎಂದಿರುವ ಕೌರ್, ನ್ಯಾಯ ಸಿಗುವವರೆಗೆ ನಾನು ಎಲ್ಲಾ ಯತ್ನಗಳನ್ನೂ ಮಾಡುವುದಾಗಿ ಹೇಳಿದ್ದಾರೆ.