ಅಫ್ಜಲ್ ಗುರು ಗಲ್ಲು; ಸೋನಿಯಾ, ಸಿಂಗ್ ಕ್ಷಮೆ ಕೇಳಲಿ: ಬಿಜೆಪಿ
ನವದೆಹಲಿ, ಬುಧವಾರ, 9 ಜೂನ್ 2010( 15:48 IST )
ಸಂಸತ್ ದಾಳಿಗೆ ಸಂಬಂಧಪಟ್ಟಂತೆ ಮರಣ ದಂಡನೆಗಾಗಿ ಕಾಯುತ್ತಿರುವ ಭಯೋತ್ಪಾದಕ ಅಫ್ಜಲ್ ಗುರುವಿಗೆ ಶಿಕ್ಷೆ ಜಾರಿಗೊಳಿಸಲು ವಿಳಂಬ ನೀತಿ ಅನುಸರಿಸುತ್ತಿರುವುದಕ್ಕಾಗಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದ್ದು, ತ್ವರಿತ ಗತಿಯಲ್ಲಿ ಕ್ಷಮಾದಾನ ಅರ್ಜಿ ವಿಲೇವಾರಿ ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದೆ.
ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಿದ ನಂತರ ಅವುಗಳು ಅನುಕ್ರಮವಾಗಿ ಸಾಗಬೇಕೆಂದು ಹೇಳುವ ಕಾನೂನನ್ನು ತೋರಿಸುವಂತೆ ನಾನು ಕೇಂದ್ರ ಗೃಹ ಸಚಿವಾಲಯಕ್ಕೆ ಸವಾಲು ಹಾಕುತ್ತಿದ್ದೇನೆ ಎಂದು ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.
ಮುಂಬೈ ಭಯೋತ್ಪಾದನಾ ದಾಳಿ ತಪ್ಪಿತಸ್ಥ ಮೊಹಮ್ಮದ್ ಅಜ್ಮಲ್ ಕಸಬ್‌ನನ್ನು ತ್ವರಿತ ಗತಿ ವಿಚಾರಣೆಗೊಳಪಡಿಸಬಹುದಾದರೆ, ಅದೇ ರೀತಿ ಸಂಸತ್ ದಾಳಿ ಆರೋಪಿಯ ಕ್ಷಮಾದಾನ ಅರ್ಜಿಯನ್ನು ಶೀಘ್ರವೇ ವಿಲೇವಾರಿ ಮಾಡಲು ಯಾಕೆ ಸಾಧ್ಯವಿಲ್ಲ? ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಯುಪಿಎ ಸರಕಾರ ಹೀಗೆ ಮಾಡುತ್ತಿದೆ ಎಂದು ಕಾಂಗ್ರೆಸ್ ನೇತೃತ್ವದ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಅಫ್ಜಲ್ ಗುರು ಕ್ಷಮಾದಾನ ಅರ್ಜಿ 22ನೇ ಸ್ಥಾನದಲ್ಲಿದ್ದು, ಒಟ್ಟು 28 ಅರ್ಜಿಗಳು ಸರಕಾರದ ಮುಂದಿವೆ ಎಂದು ಗೃಹ ಸಚಿವ ಪಿ. ಚಿದಂಬರಂ ಈ ಹಿಂದೆ ವಿವರಣೆ ನೀಡಿದ್ದರು. ರಾಷ್ಟ್ರಪತಿಯವರು ಅನುಕ್ರಮವಾಗಿ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. ಅದರಂತೆ ಅಫ್ಜಲ್ ಅರ್ಜಿಯೂ ಸಾಗಲಿದೆ. ಕ್ರಮ ತಪ್ಪಿಸಿ ಅರ್ಜಿ ಕೈಗೆತ್ತಿಕೊಳ್ಳುವುದು ಸಾಧ್ಯವಿಲ್ಲ ಎಂದಿದ್ದರು.
ಸೋನಿಯಾ, ಸಿಂಗ್ ಕ್ಷಮೆ ಕೇಳಲಿ... ಇದಕ್ಕೂ ಮೊದಲು ಹೈದರಾಬಾದ್‌ನಲ್ಲಿ ಮಾತನಾಡಿದ್ದ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಅಫ್ಜಲ್ ಗುರು ಮರಣ ದಂಡನೆ ಶಿಕ್ಷೆ ಜಾರಿಗೊಳಿಸಲು ವಿಫಲವಾಗಿರುವ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದರು.
ಸಿಂಗ್ ಮತ್ತು ಗಾಂಧಿ ಎಂಟು ದಿನಗಳೊಳಗೆ ಕ್ಷಮೆ ಯಾಚಿಸಬೇಕು. ಇಲ್ಲದೇ ಇದ್ದರೆ ನ್ಯಾಯ ಮತ್ತು ಅಫ್ಜಲ್ ಗುರು ಅರ್ಜಿ ಬಾಕಿ ಉಳಿದಿರುವ ಹಿಂದಿನ ಕಾರಣಗಳ ಬಹಿರಂಗಕ್ಕಾಗಿ ಒತ್ತಾಯಿಸಿ ಬಿಜೆಪಿ ರಾಷ್ಟ್ರವ್ಯಾಪಿ ಮುಷ್ಕರ ಆರಂಭಿಸಲಿದೆ ಎಂದು ಬೆದರಿಕೆ ಹಾಕಿದರು.
ಭಯೋತ್ಪಾದಕರೊಂದಿಗೆ ಹೋರಾಡಿ ವೀರ ಮರಣವನ್ನಪ್ಪಿದ ಭದ್ರತಾ ಪಡೆಗಳ ಕುಟುಂಬಗಳಿಗೆ ಸೋನಿಯಾ ಮತ್ತು ಸಿಂಗ್ ವಿವರಣೆ ನೀಡಬೇಕು. ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಾಲ್ಕು ವರ್ಷಗಳ ನಂತರವೂ ಅದನ್ನು ಜಾರಿಗೊಳಿಸಲು ಸಾಧ್ಯವಾಗದೇ ಇರುವುದು ನಮ್ಮ ದುರದೃಷ್ಟ. ಇದಕ್ಕೆ ಕಾಂಗ್ರೆಸ್ ಸರಕಾರವೇ ನೇರ ಹೊಣೆ ಎಂದರು.