ಉತ್ತರ ಪ್ರದೇಶದಲ್ಲಿ ಇನ್ನು ಮುಂದೆ ರಾಜಕೀಯ ಪಕ್ಷಗಳು ನಗರ ಪಾಲಿಕೆ ಅಥವಾ ಇನ್ನಿತರ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ. ಹಾಗೆಂದು ಬಿಎಸ್‌ಪಿ ಅಧಿನಾಯಕಿ ಹಾಗೂ ಮುಖ್ಯಮಂತ್ರಿ ಮಾಯಾವತಿಯವರ ಸರಕಾರವು ಅಧಿಸೂಚನೆ ಹೊರಡಿಸಿದೆ.
ಸರಕಾರದ ಅಧಿಸೂಚನೆ ಹೊರಬೀಳುತ್ತಿದ್ದಂತೆ ರಾಜಕೀಯ ವಲಯಗಳಲ್ಲಿ ಬಿರುಗಾಳಿ ಎದ್ದಿದೆ. ಇದರ ಪ್ರಕಾರ ಸ್ಥಳೀಯ ಚುನಾವಣೆಗಳಲ್ಲಿ ರಾಜಕೀಯ ನಾಯಕರು ಸ್ಪರ್ಧಿಸಲು ಅವಕಾಶವಿದೆ. ಆದರೆ ಅವರು ತಮ್ಮ ರಾಜಕೀಯ ಪಕ್ಷದ ಹೆಸರಿನಲ್ಲಿ ಸ್ಪರ್ಧಿಸುವಂತಿಲ್ಲ.
ಸ್ಥಳೀಯ ಚುನಾವಣೆಗಳಲ್ಲಿ ತಮ್ಮ ಸಾಮರ್ಥ್ಯ ಅಥವಾ ದುರ್ಬಲತೆಯನ್ನು ತೋರಿಸುವ ಯತ್ನಗಳಿಂದ ರಾಜಕೀಯ ಪಕ್ಷಗಳನ್ನು ದೂರ ಉಳಿಸಲು ಮಾಯಾವತಿ ಸ್ಪಷ್ಟವಾಗಿ ಯತ್ನಿಸಿರುವುದರ ಜತೆ ತನ್ನ ಬಹುಜನ ಸಮಾಜ ಪಕ್ಷವು ಮುಂದಿನ ಉಪ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದ್ದಾರೆ. ಅವರ ಪ್ರಮುಖ ಗುರಿಯಿರುವುದು 2012ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ.
ಸಮಾಜವಾದಿ ಪಕ್ಷದ ಶಾಸಕರು ಸಾವನ್ನಪ್ಪಿರುವ ಕಾರಣ ಇಟಾ ಮತ್ತು ಲಖೀಂಪುರ್-ಖೇರಿ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದ್ದು, ಇಲ್ಲಿ ಬಿಎಸ್ಪಿ ಸ್ಪರ್ಧಿಸುವುದಿಲ್ಲ ಎಂದು ಇತ್ತೀಚೆಗಷ್ಟೇ ದೊಮರಿಯಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ ಪಕ್ಷವು ಘೋಷಿಸಿದೆ.
ಈ ಹಿಂದೆಯೂ ಇದೇ ರೀತಿಯ ಕ್ರಮಗಳಿಗೆ ಮಾಯಾವತಿ ಮುಂದಾಗಿದ್ದನ್ನು ಇದೀಗ ಸ್ಮರಿಸಬಹುದಾಗಿದೆ. 2007ರ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡಿದ್ದ ಅವರು ಅದಕ್ಕೂ ಮೊದಲು ಸ್ಥಳೀಯ ಚುನಾವಣೆಗಳಲ್ಲಿ ಬಿಎಸ್‌ಪಿ ಸ್ಪರ್ಧಿಸದಂತೆ ನೋಡಿಕೊಂಡಿದ್ದರು. ಆ ಮೂಲಕ ರಾಜ್ಯದಲ್ಲಿ ಬಿಎಸ್‌ಪಿ ತನ್ನ ಬಲವನ್ನು ಹೆಚ್ಚಿಸಿಕೊಂಡಿತ್ತು.
ಪ್ರಸಕ್ತ ಮಾಯಾವತಿಯವರು ಗುರಿ ಮಾಡುತ್ತಿರುವ ಪಕ್ಷಗಳು ಸಮಾಜವಾದಿ ಮತ್ತು ಕಾಂಗ್ರೆಸ್. ಇದರ ಜತೆ ಬಿಜೆಪಿಯೂ ಪ್ರತಿ ಹೋರಾಟ ನೀಡಲು ಯತ್ನಿಸುತ್ತಿದೆ. ಹಾಗಾಗಿ ವಿವಿಧ ತಂತ್ರಗಳ ಮೂಲಕ ಈ ಎಲ್ಲಾ ಪಕ್ಷಗಳನ್ನು ಬಗ್ಗು ಬಡಿಯಬೇಕೆಂದು ಅವರು ಪಣ ತೊಟ್ಟಿರುವುದು ಇತ್ತೀಚಿನ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತಿದೆ.