ಹಣದ ಆಸೆಗಾಗಿ ತನ್ನನ್ನು ಏಡ್ಸ್ ಪೀಡಿತ ವ್ಯಕ್ತಿಗೆ ಮದುವೆ ಮಾಡಿಕೊಟ್ಟ ಅಂಕಲ್ ಮತ್ತು ಆತನ ಪತ್ನಿ ವಿರುದ್ಧ 24ರ ಹರೆಯದಲ್ಲೇ ವಿಧವೆಯ ಪಟ್ಟ ಅಲಂಕರಿಸಿದ್ದ ಮತ್ತು ಸ್ವತಃ ಎಚ್‌ಐವಿ ಅಂಟಿಸಿಕೊಂಡು ದಿನ ದೂಡುತ್ತಿರುವ ಯುವತಿಯೊಬ್ಬಳು ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ.
ಈಗ ಅಂಕಲ್ ಕುಟುಂಬವು ತನ್ನನ್ನು ಮತ್ತು ತಾಯಿಯನ್ನು ಖಾರ್ ದಂಡಾದಲ್ಲಿನ ಮನೆಯಿಂದ ಹೊರಗೆ ಹೋಗುವಂತೆ ಕಿರುಕುಳ ನೀಡುತ್ತಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಯುವತಿ ರೂಪಾ (ಹೆಸರು ಬದಲಾಯಿಸಲಾಗಿದೆ) ಬಾಂಬೆ ಹೈಕೋರ್ಟ್‌ನಲ್ಲಿ ದೂರು ದಾಖಲಿಸಿ ನ್ಯಾಯಕ್ಕಾಗಿ ಎದುರು ನೋಡುತ್ತಿದ್ದಾಳೆ.
ತನ್ನ ಅಂಕಲ್ ಮತ್ತು ಆಂಟಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ರೂಪಾ ಹೈಕೋರ್ಟ್‌ಗೆ ತೆರಳಿದ್ದಾಳೆ. ಪ್ರಕರಣ ಕೈಗೆತ್ತಿಕೊಂಡಿರುವ ವಿಭಾಗೀಯ ಪೀಠದ ನ್ಯಾಯಮೂರ್ತಿಗಳು ಸಂಬಂಧಪಟ್ಟ ಪೊಲೀಸ್ ಅಧಿಕಾರಿಯ ಜತೆ ಮಾತುಕತೆ ನಡೆಸಿ ಎರಡು ವಾರದೊಳಗೆ ಉತ್ತರಿಸುವಂತೆ ಸರಕಾರಿ ವಕೀಲರಿಗೆ ಸೂಚಿಸಿದ್ದಾರೆ.
ಅವರದ್ದು ಬರೇ ಎರಡು ವರ್ಷದ ಸಂಸಾರ... ಅಂಕಲ್ ಇಂದ್ರ ಪಾದ್ರಿ 2002ರಲ್ಲಿ ಎಚ್ಐವಿ ಪಾಸಿಟಿವ್ ಹೊಂದಿದ್ದ ವ್ಯಕ್ತಿಗೆ ರೂಪಾಳನ್ನು ಮದುವೆ ಮಾಡಿಕೊಟ್ಟಿದ್ದ. ಆದರೆ ಮದುವೆಯಾಗುವ ವ್ಯಕ್ತಿಗೆ ರೋಗ ಇರುವ ವಿಚಾರ ಯುವತಿಗೆ ತಿಳಿದಿರಲಿಲ್ಲ. ಅಲ್ಲದೆ ರೂಪಾಳ ತಾಯಿ ತೀರಾ ಬಡತನದಲ್ಲಿದ್ದುದರಿಂದ ಹೆಚ್ಚು ಯೋಚನೆ ಮಾಡುವ ಅವಕಾಶವಿರಲಿಲ್ಲ.
ತನ್ನ ಗಂಡನಿಗೆ ಏಡ್ಸ್ ಇದೆ ಮತ್ತು ಅದು ತನಗೂ ಬಂದಿದೆ ಎನ್ನುವುದು ರೂಪಾಳಿಗೆ ತಿಳಿದದ್ದು 2004ರಲ್ಲಿ. ಅದಾದ ಸ್ವಲ್ಪವೇ ಸಮಯದಲ್ಲಿ ಅಂದರೆ ಜೂನ್ ತಿಂಗಳಲ್ಲಿ ಗಂಡ ಸಾವನ್ನಪ್ಪಿದ್ದ. ಬಳಿಕ ರೂಪಾ ತನ್ನ ತಾಯಿಯ ಮನೆಗೆ ಮರಳಿದ್ದಳು.
ಹಣಕ್ಕಾಗಿ ಏನನ್ನಾದರೂ ಮಾಡುವ ವ್ಯಕ್ತಿತ್ವ ಹೊಂದಿರುವ ತನ್ನ ಅಂಕಲ್ ಇದೀಗ ತಾಯಿ ಮತ್ತು ನಾನು ಮನೆ ಬಿಟ್ಟು ಹೊರಗೆ ಹೋಗಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಅವರು ಕಿರುಕುಳ ಕೂಡ ನೀಡುತ್ತಿದ್ದಾರೆ ಎಂದು ರೂಪಾ ನ್ಯಾಯಾಲಯದಲ್ಲಿ ತೋಡಿಕೊಂಡಿದ್ದಾಳೆ.
ಈ ನಡುವೆ ತನ್ನ ದೈಹಿಕ ಆರೋಗ್ಯ ದಿನೇದಿನೇ ಕುಸಿತ ಕಾಣುತ್ತಿದೆ. ಅಂಕಲ್ ಮತ್ತು ಆಂಟಿ ಮಾನಸಿಕ ಕಿರುಕುಳ ನೀಡುತ್ತಿರುವುದರಿಂದ ಬದುಕು ಸಾಗಿಸುವುದು ಕಷ್ಟವಾಗುತ್ತಿದೆ ಎಂದೂ ರೂಪಾ ತಿಳಿಸಿದ್ದಾಳೆ.