ಯೋಗಕ್ಕೆ ಹೆಚ್ಚುತ್ತಿರುವ ಅಪ್ಪಂದಿರು; ಎದ್ದು ಕೂತಿದೆ ಭಾರತ!
ನವದೆಹಲಿ, ಗುರುವಾರ, 10 ಜೂನ್ 2010( 09:29 IST )
PTI
ಯೋಗ ತಮ್ಮದೇ ಎಂದು ಹೇಳಿಕೊಳ್ಳುತ್ತಾ ಅದರ ಪೇಟೆಂಟ್ ಪಡೆಯಲು ಮುಂದಾಗುತ್ತಿರುವ ವಿದೇಶಗಳ ಸಂಖ್ಯೆಯೇನೂ ಕಡಿಮೆಯಿಲ್ಲ. ಹಲವಾರು ವರ್ಷಗಳಿಂದ ಕೆಲವು ಕಂಪನಿಗಳು ಹಣ ಮಾಡುವ ಉದ್ದೇಶದಿಂದ ಈ ಅಡ್ಡದಾರಿ ಹಿಡಿದಿರುವುದ ಹೊಸ ವಿಚಾರವೂ ಅಲ್ಲ. ಆದರೆ ಭಾರತವು ಕೊನೆಗೂ ಇದೀಗ ಪೇಟೆಂಟ್ ಪಡೆಯುವ ವಿಚಾರದಲ್ಲಿ ಗಂಭೀರವಾಗಿ ಯೋಚನೆ ಮಾಡುತ್ತಿದೆ.
ಇದಕ್ಕೆ ಭಾರತೀಯರಿಂದಲೇ ವಿರೋಧವೂ ವ್ಯಕ್ತವಾಗುತ್ತಿದೆ. ಕೆಲವರ ಪ್ರಕಾರ ಪೇಟೆಂಟ್ ಪಡೆದಲ್ಲಿ, ಅದನ್ನು ಬೇರೆಯವರು ಬಳಸಲು ಅನುಮತಿ ಪಡೆಯುವುದು ಅಗತ್ಯವಾಗುತ್ತದೆ. ಯೋಗ ಎನ್ನುವುದು ಜೀವನ ಶೈಲಿಗೆ ಸಂಬಂಧಪಟ್ಟ ವಿಚಾರವಾಗಿರುವುದರಿಂದ ಪೇಟೆಂಟ್ ಬೇಕಾಗಿಲ್ಲ ಎಂಬ ಅಭಿಪ್ರಾಯಗಳೂ ಕೇಳಿ ಬರುತ್ತಿವೆ.
ಈ ಹಿಂದೆ ಭಾರತ ಸರಕಾರವು ಯೋಗವನ್ನು ನಿರೂಪಿಸಲು ಪುರಾತನ ಗ್ರಂಥಗಳ ಅನುವಾದಿತ ಅಂಶಗಳನ್ನು ಒಪ್ಪಿಸಿದರೂ ಮಿಶ್ರ ಪ್ರತಿಕ್ರಿಯೆಯಷ್ಟೇ ಲಭಿಸಿದ್ದರ ಹಿನ್ನೆಲೆಯಲ್ಲಿ ಇದೀಗ ಭಾರತದ ಶ್ರೀಮಂತ ವೈದ್ಯಕೀಯ ಕಲೆಯಾಗಿ ಬೆಳೆದು ಬಂದಿರುವ ಯೋಗದ ಸಾವಿರಾರು ಭಂಗಿಗಳನ್ನು ವೀಡಿಯೋ ಚಿತ್ರೀಕರಣ ನಡೆಸಿ ಪೇಟೆಂಟ್ ಪಡೆಯಲು ಯತ್ನಿಸುವ ನಿರ್ಧಾರಕ್ಕೆ ಬರಲಾಗಿದೆ.
ಪೇಟೆಂಟ್ ಪಡೆಯುವ ವಿಚಾರದಲ್ಲಿ ತನ್ನದೇ ಆದ ರೀತಿಯಲ್ಲಿ ಉತ್ತರಿಸುತ್ತಾರೆ ಭಾರತದ ಜನಪ್ರಿಯ ಯೋಗ ಗುರುಗಳಲ್ಲೊಬ್ಬರಾದ ಸುನಿಲ್ ಸಿಂಗ್. 'ಇದೊಂದು ರೀತಿಯಲ್ಲಿ ಫುಟ್ಬಾಲ್ ಮತ್ತು ಬ್ರಿಟನ್ ಇದ್ದ ಹಾಗೆ. ಫುಟ್ಬಾಲನ್ನು ಜಗತ್ತಿಗೆ ಪರಿಚಯಿಸಿದ್ದು ಬ್ರಿಟನ್. ಆದರೆ ಜನ ಇದನ್ನು ತಾವು ಸಂಶೋಧಿಸಿದ್ದು ಎಂದರೆ ಎಷ್ಟು ನೋವಾಗಬೇಡ?' ಎನ್ನುತ್ತಾರೆ.
PTI
ಇದಕ್ಕಾಗಿ ಭಾರತದ ಆರೋಗ್ಯ ಮತ್ತು ವಿಜ್ಞಾನ ಸಚಿವಾಲಯವು ಸಾಂಪ್ರದಾಯಿಕ ಜ್ಞಾನದ ಡಿಜಿಟಲ್ ಲೈಬ್ರೆರಿಯನ್ನು ಸ್ಥಾಪಿಸಿದ್ದು, ಅದರ ಮುಖ್ಯಸ್ಥ ಡಾ. ವಿನೋದ್ ಕುಮಾರ್ ಗುಪ್ತಾ. ಅವರ ಪ್ರಕಾರ ಗ್ರಂಥಗಳ ಅನುವಾದವಿರುವ ಪ್ರತಿಗಳು ಯೋಗ ನಮ್ಮದೇ ಎಂದು ನಿರೂಪಿಸಲು ಸಾಲದು. ಕೆಲವು ವ್ಯಕ್ತಿಗಳು ತಾವು ಮೂಲ ಯೋಗಕ್ಕಿಂತ ಭಿನ್ನವಾದ ಯೋಗವನ್ನು ಮಾಡುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಾರೆ.
ಯೋಗದ ಮೂಲ ಭಾರತ. ಹಾಗಾಗಿ ಯಾವುದೇ ವ್ಯಕ್ತಿಗಳು ನೂತನ ಯೋಗವನ್ನು ನಾವು ಸಂಶೋಧಿಸಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ. ವಾಸ್ತವದಲ್ಲಿ ಅವರಲ್ಲಿ ಯಾವುದೇ ರೀತಿಯ ಹೊಸತನವಿರುವ ಯೋಗದ ಪ್ರಕಾರವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಗುಪ್ತಾ ಮತ್ತೊಂದು ಆಘಾತಕಾರಿ ಮಾಹಿತಿ ನೀಡಿದ್ದಾರೆ. ಈಗಾಗಲೇ ಕೆಲವು ದೇಶಗಳು ಸುಮಾರು 250 ಯೋಗದ ಭಂಗಿಗಳಿಗೆ ಪೇಟೆಂಟ್ ಪಡೆದುಕೊಂಡಿವೆ. ಇದನ್ನು ತಾವೇ ಪರಿಚಯಿಸಿದ್ದಾಗಿ ಹೇಳಿಕೊಳ್ಳುವ ಕಂಪನಿಗಳು ಮತ್ತು ವ್ಯಕ್ತಿಗಳು ಭಾರತಕ್ಕೆ ಮೋಸ ಮಾಡಿದ್ದಾರೆ ಎನ್ನುತ್ತಾರೆ.
ನಮ್ಮ ಚಿಕಿತ್ಸಾ ಸಂಪ್ರದಾಯದ ಭಾಗವಾಗಿರುವ ಆಸನಗಳನ್ನು ಬೇರೆಯವರು ಹೇಗೆ ತಮ್ಮದೇ ಎಂದು ಹೇಳಿಕೊಂಡು ಪೇಟೆಂಟ್ ಪಡೆಯುತ್ತಾರೆ? ಇದಕ್ಕೆ ನಾವು ಅವಕಾಶ ನೀಡಬಾರದು. ಈಗಾಗಲೇ ಹಲವು ಕಂಪನಿಗಳು ಕೆಲವು ಭಂಗಿಗಳು ತಮ್ಮದೇ ಎಂದು ಪೇಟೆಂಟ್ ಪಡೆದು ಹಣ ಮಾಡುತ್ತಿವೆ. ಇವುಗಳ ಪೇಟೆಂಟ್‌ಗಳನ್ನು ರದ್ದು ಮಾಡಲು ನಾವೀಗ ಯತ್ನಿಸುತ್ತಿದ್ದೇವೆ ಎಂದು ಗುಪ್ತಾ ತಿಳಿಸಿದ್ದಾರೆ.