ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತಕ್ಕೆ ಬೇಕಾಗಿರುವ ಕ್ರಿಮಿನಲ್ ರಾಜಪಕ್ಷೆ ನಿಯೋಗದಲ್ಲಿ..!
(India | Sri Lankan President | Mahinda Rajapakse | Douglas Devananda)
ಭಾರತಕ್ಕೆ ಬೇಕಾಗಿರುವ ಕ್ರಿಮಿನಲ್ ರಾಜಪಕ್ಷೆ ನಿಯೋಗದಲ್ಲಿ..!
ನವದೆಹಲಿ, ಗುರುವಾರ, 10 ಜೂನ್ 2010( 11:43 IST )
ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿರುವ ಮತ್ತು ಬಂಧನಕ್ಕೊಳಗಾಗಬಹುದಾದ ಶ್ರೀಲಂಕಾ ಸಚಿವರೊಬ್ಬರು ಮಹೀಂದ್ರಾ ರಾಜಪಕ್ಷೆ ನಿಯೋಗದೊಂದಿಗೆ ದೇಶಕ್ಕೆ ಬಂದಿದ್ದಾರೆ. ಆದರೆ ಅವರು ರಾಜತಾಂತ್ರಿಕ ನಿಯೋಗದ ರಕ್ಷಣೆಯಲ್ಲಿರುವುದರಿಂದ ಅವರನ್ನು ವಶಕ್ಕೆ ತೆಗೆದುಕೊಳ್ಳುವುದು ಸಾಧ್ಯವಾಗುತ್ತಿಲ್ಲ.
ಪ್ರಸಕ್ತ ಭಾರತ ಪ್ರವಾಸದಲ್ಲಿರುವ ಶ್ರೀಲಂಕಾ ಅಧ್ಯಕ್ಷ ರಾಜಪಕ್ಷೆಯವರ ನಿಯೋಗದಲ್ಲಿರುವ ಈ ಸಚಿವರ ಹೆಸರು ಡಗ್ಲಾಸ್ ದೇವಾನಂದ. ಇವರು ಲಂಕಾದ ಸಾಂಪ್ರದಾಯಿಕ ಕೈಗಾರಿಕೆಗಳು ಮತ್ತು ಸಣ್ಣ ಕೈಗಾರಿಕೆಗಳ ಸಚಿವರಾಗಿದ್ದು, 1986ರಲ್ಲಿ ಚೆನ್ನೈಯಲ್ಲಿ ನಡೆದ ಶೂಟೌಟ್-ಹತ್ಯೆ ಪ್ರಕರಣ ಸೇರಿದಂತೆ ಒಟ್ಟು ಮೂರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವರಾಗಿದ್ದಾರೆ.
1986ರಲ್ಲಿ ಸೆಂಟ್ರಲ್ ಚೆನ್ನೈಯ ಚೂಲೆಂಮೇಡುವಿನಲ್ಲಿ ಸ್ಥಳೀಯರ ಮೇಲೆ ಮನಸೋ ಇಚ್ಛೆ ಗುಂಡು ಹಾರಿಸಿದ್ದಾರೆಂದು ಆಗಿನ ಪ್ರತ್ಯೇಕತಾವಾದಿ ಚಳವಳಿ ಶ್ರೀಲಂಕಾ ಈಳಂ ಪ್ಯೂಪಲ್ಸ್ ರೆವೊಲ್ಯೂಷನರಿ ಫ್ರಂಟ್ (ಇಪಿಆರ್ಎಲ್ಎಫ್) ಸದಸ್ಯ ಹಾಗೂ ಇತರ ಒಂಬತ್ತು ಮಂದಿಯ ವಿರುದ್ಧ ಆರೋಪಿಸಲಾಗಿತ್ತು.
ಘಟನೆಯಿಂದ ಐವರು ಗಾಯಗೊಂಡಿದ್ದರೆ, ತಿರುನವುಕ್ಕರಸು ಎಂಬಾತ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದ. ಈ ಹಿನ್ನೆಲೆಯಲ್ಲಿ ದೇವಾನಂದ ಮತ್ತು ಅವರ ಸಹಚರರ ಮೇಲೆ ಹತ್ಯೆ, ಹತ್ಯೆ ಯತ್ನ, ಹಿಂಸಾಚಾರ ಮತ್ತು ಕಾನೂನು ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಆರಂಭದಲ್ಲಿ ದೇವಾನಂದ ನ್ಯಾಯಾಲಯಗಳಿಗೆ ಹಾಜರಾಗಿ, ಜಾಮೀನು ಪಡೆದುಕೊಂಡಿದ್ದರು. ಆದರೆ ಅವರ ಸಹಚರರು ಆಗಲೇ ತಲೆ ಮರೆಸಿಕೊಂಡಿದ್ದರು. 1994ರಲ್ಲಿ ದೇವಾನಂದ ಕೂಡ ಭೂಗತರಾದ ಕಾರಣ ಚೆನ್ನೈಯ ಆರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಅವರನ್ನು ತಲೆಮರೆಸಿಕೊಂಡ ಅಪರಾಧಿ ಎಂದು ಘೋಷಿಸಿತು.
ಎರಡನೇ ಪ್ರಕರಣ ದಾಖಲಾದದ್ದು 1989ರ ಮಾರ್ಚ್ 2ರಂದು. ಕಿಲ್ಪಾಕ್‌ನಲ್ಲಿನ ವ್ಯಕ್ತಿಯೊಬ್ಬರನ್ನು ಅಪಹರಿಸಿದ್ದ ದೇವಾನಂದ್, ಒತ್ತೆ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು.
1990ರಲ್ಲಿ ದೇವಾನಂದ ವಿರುದ್ಧ ಕೋಡಂಬಾಕಂನಲ್ಲಿನ ವಲ್ಲವನ್ ಎಂಬಾತನಿಗೆ ಹಲ್ಲೆ ಮತ್ತು ಜೀವ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಮೊಕದ್ದಮೆ ಹೂಡಲಾಗಿತ್ತು.
ದೇವಾನಂದ ಹಲವು ಪಕ್ಷಗಳಲ್ಲಿ ಈ ಹಿಂದೆ ಗುರುತಿಸಿಕೊಂಡವರು. ಆರಂಭದಲ್ಲಿ ಇಪಿಆರ್ಎಲ್ಎಫ್ ಜತೆಗೆ, ನಂತರ ಪ್ಯೂಪಲ್ ಲಿಬರೇಷನ್ ಆರ್ಗನೈಜೇಷನ್ ಆಫ್ ತಮಿಳ್ ಈಳಂ (ಪಿಎಲ್ಒಟಿಇ), ನಂತರ ಈಳಂ ನ್ಯಾಷನಲ್ ಡೆಮಾಕ್ರಟಿಕ್ ಲಿಬರೇಷನ್ ಫ್ರಂಟ್ (ಇಎನ್‌ಡಿಎಲ್ಎಫ್) ಹಾಗೂ ಪ್ರಸಕ್ತ ಈಳಂ ಪ್ಯೂಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಇಪಿಡಿಪಿ)ಯಲ್ಲಿದ್ದಾರೆ.
ಎಲ್‌ಟಿಟಿಇ ಮತ್ತು ಅದರ ಮುಖ್ಯಸ್ಥನಾಗಿದ್ದ ವಿ. ಪ್ರಭಾಕರನ್‌ನನ್ನು ತೀವ್ರವಾಗಿ ಟೀಕಿಸುತ್ತಿದ್ದುದರಿಂದ ದೇವಾನಂದ ಈ ಹಿಂದೆ ಹಲವು ಬಾರಿ ದಾಳಿಗಳಿಗೊಳಗಾದರೂ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. 2007ರ ನವೆಂಬರ್ 28ರಂದು ಅವರ ಕಚೇರಿ ಪಕ್ಕದಲ್ಲೇ ಮಾನವ ಬಾಂಬ್ ಸ್ಫೋಟಗೊಂಡಿದ್ದು ಇದರಲ್ಲಿ ಪ್ರಮುಖವಾದುದು.
ಭಾರತದ ಕಾನೂನುಗಳ ಪ್ರಕಾರ ಭೂಗತನಾಗಿರುವ ಅಪರಾಧಿಯೊಬ್ಬನನ್ನು ನ್ಯಾಯಾಲಯದ ಅನುಮತಿಯಿಲ್ಲದೆ ಬಂಧಿಸುವ ಅಧಿಕಾರ ಪೊಲೀಸ್ ಅಧಿಕಾರಿಗಳಿಗಿದೆ. ಅಲ್ಲದೆ ಅಂತವರಿಗೆ ಆಹಾರ, ವಸತಿ, ಹಣ, ಶಸ್ತ್ರಾಸ್ತ್ರಗಳನ್ನು ಭಾರತೀಯರು ಒದಗಿಸುವ ಮೇಲೂ ಕಾನೂನಾತ್ಮಕ ನಿರ್ಬಂಧಗಳಿವೆ.
ಪ್ರಸಕ್ತ ಅಧ್ಯಕ್ಷೀಯ ನಿಯೋಗದ ಪ್ರವಾಸದಲ್ಲಿ ಭಾರತಕ್ಕೆ ಬಂದಿರುವ ದೇವಾನಂದ್ ಅವರನ್ನು ಬಂಧಿಸುವುದು ಕಾನೂನಿನ ಪ್ರಕಾರ ಸಾಧ್ಯವಿಲ್ಲ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ವತಃ ಲಂಕಾ ಸಚಿವರು, ತನ್ನನ್ನು ಸೂಕ್ತ ಕಾನೂನಿನ ಮಾರ್ಗಗಳ ಮೂಲಕ ಸಂಪರ್ಕಿಸಿದಲ್ಲಿ ಸ್ಪಂದಿಸಲು ಸಿದ್ಧನಿದ್ದೇನೆ ಎಂದಿದ್ದಾರೆ.