ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಂಡರ್ಸನ್ ಪರಾರಿಗೆ ಕಾಂಗ್ರೆಸ್ ಸರಕಾರದಿಂದಲೇ ಕುಮ್ಮಕ್ಕು (Bhopal gas tragedy | Digvijaya Singh | USA | Congress)
Bookmark and Share Feedback Print
 
ಇದು ಬೇರೆ ಯಾವುದೋ ಪಕ್ಷದವರು ಆರೋಪಿಸುತ್ತಿರುವುದಲ್ಲ. ಸ್ವತಃ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್. ನೇರವಾಗಿ ಹೇಳದಿದ್ದರೂ, ಅಮೆರಿಕಾ ಒತ್ತಡದಿಂದ ಭಾರತ ಹೀಗೆ ಮಾಡಿರುವುದರಿಂದ ಇದಕ್ಕೆ ಮಧ್ಯಪ್ರದೇಶದ ಅರ್ಜುನ್ ಸಿಂಗ್ ನೇತೃತ್ವದ ಸರಕಾರ ಹೊಣೆಯಲ್ಲ ಎಂದಿದ್ದಾರೆ.

ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿರುವುದು ಆಗಿನ ಭೋಪಾಲ್ ಜಿಲ್ಲಾಧಿಕಾರಿ ಮತ್ತು ಮಧ್ಯಪ್ರದೇಶದ ಆಗಿನ ವಿಮಾನಯಾನ ಸೇವೆಗಳ ನಿರ್ದೇಶಕರು. ತಮಗೆ ಅರ್ಜುನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರವು ಯೂನಿಯನ್ ಕಾರ್ಬೈಡ್ ಮುಖ್ಯಸ್ಥ ವಾರೆನ್ ಆಂಡರ್ಸನ್ ಅವರನ್ನು ಪರಾರಿಯಾಗಲು ಸಹಕರಿಸುವಂತೆ ಸ್ಪಷ್ಟ ಸೂಚನೆ ನೀಡಿತ್ತು ಎಂದಿದ್ದಾರೆ.

ಆಂಡರ್ಸನ್ ಭೋಪಾಲ್‌ನಿಂದ ಹೊರ ಹೋಗಲು ಅವಕಾಶ ನೀಡಬೇಕೆಂದು ಆಗಿನ ಮುಖ್ಯಮಂತ್ರಿ ಅರ್ಜುನ್ ಸಿಂಗ್ ಅವರಿಂದ ನಮಗೆ ಸ್ಪಷ್ಟ ನಿರ್ದೇಶನ ನೀಡಲಾಗಿತ್ತು ಎಂದು ನಾಗರಿಕ ವಿಮಾನಯಾನ ಸೇವೆಗಳ ನಿರ್ದೇಶಕ ಆರ್.ಎಸ್. ಸೋಂದಿ ತಿಳಿಸಿದ್ದಾರೆ.

ಇದನ್ನು ತಳ್ಳಿ ಹಾಕುವ ಗೋಜಿಗೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಕೂಡ ಹೋಗಿಲ್ಲ. ಬದಲಿಗೆ ಅರ್ಜುನ್ ಸಿಂಗ್ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಆ ಮೂಲಕ ಕಾಂಗ್ರೆಸ್ ಸರಕಾರ ಅಮೆರಿಕಾಕ್ಕೆ ಶರಣಾಗಿದ್ದುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ರಾಜ್ಯ ಸರಕಾರವು ಮಹತ್ವದ ಪಾತ್ರವಹಿಸಿಲ್ಲ. ಪ್ರಕರಣವನ್ನು ತನಿಖೆ ನಡೆಸಿದ್ದು ಸಿಬಿಐ. ಸಂತ್ರಸ್ತರಿಗೆ ಪರಿಹಾರವನ್ನು ನಿರ್ಧರಿಸಿದ್ದು ನ್ಯಾಯಾಂಗ. ವಾರೆನ್ ಆಂಡರ್ಸನ್ ಇಲ್ಲಿಂದ ಪರಾರಿಯಾಗಿದ್ದು ಅಮೆರಿಕಾದ ಒತ್ತಡದಿಂದ ಎಂದು ಅವರು ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ಭೋಪಾಲ್ ಅನಿಲ ಸೋರಿಕೆ ಸಂಬಂಧ ಕೇಂದ್ರ ಸರಕಾರವೇ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಆದೇಶಗಳನ್ನು ಪಾಲಿಸುವ ಕಾರ್ಯ ಮಾತ್ರ ಮಧ್ಯಪ್ರದೇಶ ರಾಜ್ಯ ಸರಕಾರದ್ದಾಗಿತ್ತು ಎಂದು ದಿಗ್ವಿಜಯ್ ವಿವರಣೆ ನೀಡಿದರು.

1980-84ರ ಅವಧಿಯಲ್ಲಿ ಮಧ್ಯಪ್ರದೇಶದಲ್ಲಿದ್ದ ಅರ್ಜುನ್ ಸಿಂಗ್ ನೇತ್ವತ್ವದ ಕಾಂಗ್ರೆಸ್ ಸರಕಾರದಲ್ಲಿ ದಿಗ್ವಿಜಯ್ ಕೂಡ ಸಚಿವರಾಗಿದ್ದರು. ಇದೇ ಸಂದರ್ಭದಲ್ಲಿ ಭೋಪಾಲ್ ಅನಿಲ ದುರಂತ ಸಂಭವಿಸಿತ್ತು. ನಂತರ ಎರಡು ಅವಧಿಗೆ ದಿಗ್ವಿಜಯ್ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಂಪನಿಯ ಮುಖ್ಯಸ್ಥ ವಾರೆನ್ ಆಂಡರ್ಸನ್ ತನ್ನ ತವರು ಅಮೆರಿಕಾಕ್ಕೆ ಪರಾರಿಯಾಗಲು ಭಾರತವೇ ಕುಮ್ಮಕ್ಕು ನೀಡಿತ್ತು ಎಂಬ ಆರೋಪಗಳಿಗೆ ಇವುಗಳಿಂದ ಸಾಕಷ್ಟು ಪುಷ್ಠಿ ದೊರೆತಿದ್ದು, ಕಾಂಗ್ರೆಸ್ ತೀವ್ರ ಮುಜುಗರ ಅನುಭವಿಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ