ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲರ ವಿರುದ್ಧ ಮಿಲಿಟರಿ ಬಳಸುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ (Army | Naxals | CCS | Manmohan Singh)
Bookmark and Share Feedback Print
 
ಮಿಲಿಟರಿ ಬಳಕೆ ಸೇರಿದಂತೆ ನಕ್ಸಲರ ವಿರುದ್ಧದ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸುವ ಕುರಿತು ಗುರುವಾರ ನವದೆಹಲಿಯಲ್ಲಿ ಭದ್ರತಾ ಸಂಪುಟ ಸಮಿತಿ ಸಭೆ ನಡೆಯಲಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ಹೊರ ಬೀಳುವ ನಿರೀಕ್ಷೆಗಳಿವೆ.

ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮಾವೋವಾದಿಗಳ ವಿರುದ್ಧದ ಹೋರಾಟಕ್ಕೆ ಮಿಲಿಟರಿ ಮತ್ತು ವಾಯು ಪಡೆಯನ್ನು ಬಳಸುವ ಕುರಿತು ಪರ-ವಿರೋಧ ಚರ್ಚೆಗಳು ನಡೆಯುವ ಸಾಧ್ಯತೆಗಳಿವೆ.

ಪ್ರಸಕ್ತ ಪರಿಸ್ಥಿತಿಯಲ್ಲಿ ಭಾರೀ ಪ್ರತಿರೋಧ ತೋರಿಸುತ್ತಾ ಅನಾಹುತಗಳನ್ನು ಸೃಷ್ಟಿಸುತ್ತಿರುವ ಮಾವೋವಾದಿಗಳನ್ನು ಹತ್ತಿಕ್ಕಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಗೃಹ ಸಚಿವ ಪಿ. ಚಿದಂಬರಂ ತನ್ನ ಅಭಿಪ್ರಾಯವನ್ನು ತಿಳಿಸಲಿದ್ದಾರೆ.

ರಕ್ಷಣಾ ಸಚಿವಾಲಯವು ನಕ್ಸಲರ ವಿರುದ್ಧ ಮಿಲಿಟರಿ ಬಳಸುವ ಬಗ್ಗೆ ಒಲವು ತೋರಿಸುತ್ತಿಲ್ಲ. ಆದರೆ ಅರೆಸೇನಾ ಪಡೆಗಳಿಗೆ ತರಬೇತಿ ನೀಡಲು ಮಿಲಿಟರಿಯನ್ನು, ಸಾರಿಗೆ ವ್ಯವಸ್ಥೆ, ವೈದ್ಯಕೀಯ ನೆರವು, ಸಲಕರಣೆಗಳ ಸಾಗಾಟ ಮತ್ತು ಇತರ ಸಹಾಯಕ ಕಾರ್ಯಗಳಿಗಾಗಿ ವಾಯು ಪಡೆಯನ್ನು ಬಳಸುವ ಚಿಂತನೆಯೂ ನಡೆಯುತ್ತಿದೆ.

ಕೇವಲ ಮೇ ತಿಂಗಳೊಂದರಲ್ಲೇ 172 ನಾಗರಿಕರು ಮತ್ತು 29 ಭದ್ರತಾ ಸಿಬ್ಬಂದಿಗಳನ್ನು ಕೊಂದು ಹಾಕಿರುವ ನಕ್ಸಲರ ವಿರುದ್ಧದ ಕಾರ್ಯಾಚರಣೆಗಾಗಿ ಸಶಸ್ತ್ರ ಪಡೆಗಳನ್ನು ಬಳಸುವ ಬಗ್ಗೆ ಕೇಂದ್ರ ಸರಕಾರವು ಗಂಭೀರ ಯೋಚನೆ ಮಾಡುತ್ತಿದೆ.

ಮೇ ತಿಂಗಳಲ್ಲಿ ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಪ್ರಯಾಣಿಕ ರೈಲೊಂದನ್ನು ಉರುಳಿಸುವ ಮೂಲಕ 148 ಪ್ರಯಾಣಿಕರ ಸಾವಿಗೆ ಕಾರಣರಾಗಿದ್ದ ಮಾವೋವಾದಿಗಳು, ಏಪ್ರಿಲ್ ತಿಂಗಳಲ್ಲಿ 76 ಭದ್ರತಾ ಸಿಬ್ಬಂದಿಗಳನ್ನು ಛತ್ತೀಸ್‌ಗಢದ ದಾಂತೇವಾಡದಲ್ಲಿ ಕೊಂದು ಹಾಕಿದ್ದನ್ನು ಸ್ಮರಿಸಬಹುದಾಗಿದೆ.

ಇವೆಲ್ಲದರ ಹೊರತಾಗಿಯೂ ಸರಕಾರವು ಮಿಲಿಟರಿ ಬಳಕೆ ಮಾಡುವುದಿಲ್ಲ ಎಂದೇ ಹೇಳುತ್ತಾ ಬಂದಿತ್ತು. ಇದಕ್ಕಿದ್ದ ಪ್ರಮುಖ ಕಾರಣ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ. ಅವರು ನಕ್ಸಲರ ವಿರುದ್ಧದ ಕಾರ್ಯಾಚರಣೆಯನ್ನು ಆರಂಭದಿಂದಲೇ ವಿರೋಧಿಸುತ್ತಾ ಬಂದವರು.

ಆದರೆ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವುದನ್ನು ಮನಗಂಡಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಮಿಲಿಟರಿ ಬಳಕೆಯ ಕುರಿತು ಮಹತ್ವದ ನಿರ್ಧಾರ ಕೈಗೊಂಡರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ