ಭೋಪಾಲ್ ಅನಿಲ ದುರಂತ ತೀರ್ಪಿನ ಹಿನ್ನೆಲೆಯಲ್ಲಿ ಪರಮಾಣು ಬಾಧ್ಯತಾ ಮಸೂದೆಯನ್ನು ಕಾಂಗ್ರೆಸ್ ಪುನರ್ ಪರಿಶೀಲನೆ ನಡೆಸಬೇಕೆಂದು ಆಗ್ರಹಿಸಿರುವ ಬಿಜೆಪಿ, ಇದನ್ನು ಸಂಸತ್ ಒಳಗೆ ಮತ್ತು ಹೊರಗೆ ಎರಡೂ ಕಡೆ ವಿರೋಧಿಸುವುದಾಗಿ ಹೇಳಿದೆ.
ಪರಮಾಣು ಬಾಧ್ಯತಾ ಮಸೂದೆಯನ್ನು ನಾವು ಸಂಸತ್ ಒಳಗೆ ಮತ್ತು ಹೊರಗಡೆ ವಿರೋಧಿಸುತ್ತೇವೆ. ದೇಶದ ಜನರ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರಸಕ್ತ ಮರು ಯೋಚನೆ ನಡೆಸಲು ಇದು ಸಕಾಲ ಎಂದು ಬಿಜೆಪಿ ನಾಯಕ ಮುರಳಿ ಮನೋಹರ ಜೋಷಿ ತಿಳಿಸಿದ್ದಾರೆ.
ರಷ್ಯಾದ ಚೆರ್ನೊಬಿಲ್ ಪರಮಾಣು ದುರಂತವನ್ನು ಉಲ್ಲೇಖಿಸಿರುವ ಅವರು, ರಷ್ಯಾದಂತಹ ಕಡಿಮೆ ಜನಸಂಖ್ಯೆಯಿರುವ ದೇಶದಲ್ಲಿ ಈ ಘಟನೆ ನಡೆದಿತ್ತು; ಅದೇ ಭಾರತದಂತಹ ಅತೀ ಹೆಚ್ಚು ಜನಸಂಖ್ಯೆಯಿರುವ ದೇಶದಲ್ಲಿ ಆ ದುರ್ಘಟನೆ ನಡೆಯುತ್ತಿದ್ದರೆ ಪರಿಣಾಮ ಭೀಕರವಾಗಿರುತ್ತಿತ್ತು ಎಂದರು.
ಹಾಗಾಗಿ ಅಂತಹ ಸ್ಥಾವರಗಳ ಸುರಕ್ಷತೆ ಮತ್ತು ಭದ್ರತೆಯತ್ತ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಹೇಳಿದ ಜೋಷಿ, ಭಾರತವನ್ನು ಪ್ರಗತಿ ಹೊಂದಿದ ದೇಶ ಅಥವಾ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ಪರಿಗಣಿಸಲು ಹಿಂದೇಟು ಹಾಕುತ್ತಿರುವ ಅಮೆರಿಕಾ ವಿರುದ್ಧವೂ ವಾಗ್ದಾಳಿ ನಡೆಸಿದರು.
ಒಂದು ಚಿಕ್ಕ ಅನಿಲ ಸೋರಿಕೆಯಿಂದಾಗಿ ಸಾವಿರಾರು ಮಂದಿ ಸಾವನ್ನಪ್ಪಬಹುದು ಮತ್ತು ಸಾವಿರಾರು ಮಂದಿ ಅನುವಂಶಿಕ ತೊಂದರೆಗಳನ್ನು ಅನುಭವಿಸಬಹುದು. ಆದರೆ ಪರಮಾಣು ದುರಂತವೊಂದು ಸಂಭವಿಸಿದರೆ ಅದರ ಸಾವಿನ ಪ್ರಮಾಣ ಲಕ್ಷಗಳಲ್ಲಿರುತ್ತದೆ ಎಂದು ಎಚ್ಚರಿಸಿರುವ ಬಿಜೆಪಿ ನಾಯಕ, ಇಂತಹ ಅಪಾಯಕಾರಿ ಮಸೂದೆಗಳನ್ನು ಅಂಗೀಕರಿಸುವಾಗ ಹೆಚ್ಚಿನ ಮುಂಜಾಗ್ರತೆ ಅಗತ್ಯವಿದೆ ಎಂದಿದ್ದಾರೆ.
ಅದೇ ಹೊತ್ತಿಗೆ ಭೋಪಾಲ್ ಅನಿಲ ದುರಂತವನ್ನು ಉಲ್ಲೇಖಿಸಿರುವ ಜೋಷಿ, ವಾರೆನ್ ಆಂಡರ್ಸನ್ ದೇಶ ಬಿಟ್ಟು ಪರಾರಿಯಾಗಲು ಕಾಂಗ್ರೆಸ್ ಸರಕಾರವೇ ಕಾರಣ. ಇದು ಅಮೆರಿಕಾ ಒತ್ತಡದಿಂದ ನಡೆದುಕೊಂಡಿದ್ದಾಗಿದೆ ಎಂದು ಆರೋಪಿಸಿದ್ದಾರೆ.