ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನಿಧಿ ದುರ್ಬಳಕೆ ಆರೋಪದ ಹಿಂದೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಕೈವಾಡವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ದೇಶಪಾಂಡೆಯವರು ಬಹಿರಂಗವಾಗಿ ಹೇಳಿಕೆ ನೀಡುವಾಗ, ಪಕ್ಷದ ಯಾರ ಬಗೆಗೂ ತನಗೆ ಸಂಶಯವಿಲ್ಲ ಎಂದರೂ ಹೈಕಮಾಂಡ್ ಎದುರು ಮತ್ತು ತನ್ನ ಆಪ್ತರಲ್ಲಿ ಡಿಕೆಶಿ ಕೈವಾಡವಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ನೆರೆ ಸಂತ್ರಸ್ತರ ಪರಿಹಾರಕ್ಕೆಂದು ಕೆಪಿಸಿಸಿ ಸಂಗ್ರಹಿಸಿದ್ದ ಎರಡು ಕೋಟಿಗೂ ಅಧಿಕ ಹಣದಲ್ಲಿ ಅರ್ಧಕರ್ಧವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪಗಳು ಬಂದಿದ್ದವು. ಕಚೇರಿಯ ನವೀಕರಣ - ನಿರ್ವಹಣೆ ವೆಚ್ಚ, ವಿಮಾನ ಪ್ರಯಾಣದ ಟಿಕೆಟ್, ಕಾರ್ಯಕರ್ತರಿಗೆ ಟಿ-ಶರ್ಟ್, ಫಿಕ್ಸೆಡ್ ಡಿಪಾಸಿಟ್ ಮಾಡಿರುವುದು ಬ್ಯಾಂಕ್ ದಾಖಲೆಗಳ ಮೂಲಕ ಬಹಿರಂಗವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಸಮರ್ಥನೆ ನೀಡಲು ಯತ್ನಿಸಿದ್ದರು.
ಈ ಬಗ್ಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ವಿವರಣೆ ನೀಡಲು ರಾಜಧಾನಿಗೆ ತೆರಳಿರುವ ದೇಶಪಾಂಡೆಯವರಿಗೆ ಇನ್ನೂ ದರ್ಶನ ಭಾಗ್ಯ ಸಿಕ್ಕಿಲ್ಲ. ಬುಧವಾರದಿಂದಲೇ ಅವರು ನವದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ.
ಆದರೆ ಈ ನಡುವೆ ಅವರು ಕಾಂಗ್ರೆಸ್ ಮುಖಂಡರಾದ ಅಹ್ಮದ್ ಪಟೇಲ್ ಮತ್ತು ಗುಲಾಂ ನಬೀ ಆಜಾದ್ ಅವರನ್ನು ಭೇಟಿ ಮಾಡಿದ್ದು, ನಿಧಿ ದುರ್ಬಳಕೆ ಪ್ರಕರಣ ಡಿಕೆಶಿ ತಂತ್ರ ಎಂದು ದೂರಿದ್ದಾರೆ ಎಂದು ಹೇಳಲಾಗಿದೆ.
ಈ ರೀತಿಯ ಅಪಪ್ರಚಾರದಿಂದ ಆಡಳಿತ ಪಕ್ಷ ಬಿಜೆಪಿಗೆ ಮತ್ತಷ್ಟು ಲಾಭವಾಗುತ್ತದೆ. ದೇಶಪಾಂಡೆಯನ್ನು ಕೆಳಗಿಳಿಸಬೇಕು ಮತ್ತು ತನ್ನ ಪ್ರಭಾವವನ್ನು ಮೆರೆಸಬೇಕು ಎಂಬ ಪ್ರತಿಷ್ಠೆಯ ಕಾರಣಕ್ಕಾಗಿ ಡಿಕೆಶಿ ಹೀಗೆ ಮಾಡಿರಬಹುದು ಎಂದು ಕೆಪಿಸಿಸಿ ಅಧ್ಯಕ್ಷರು ಹೈಕಮಾಂಡ್‌ಗೆ ವಿವರಣೆ ನೀಡಿದ್ದಾರೆ.
ಸಂತ್ರಸ್ತರ ನಿಧಿ ದುರುಪಯೋಗ ಆರೋಪವು ಸ್ಪಷ್ಟವಾಗಿ ಪಕ್ಷದೊಳಗಿನವರದೇ ಪಿತೂರಿ. ನನ್ನನ್ನು ಗುರಿ ಮಾಡಿಕೊಂಡು ಪಕ್ಷದ ಹೆಸರನ್ನು ಕೆಡಿಸುವ ಯತ್ನವಿದು. ನನ್ನ ರಾಜಕೀಯ ಜೀವನದ ಇತಿಹಾಸದಲ್ಲಿನ ನಡವಳಿಕೆ ಮತ್ತು ಪ್ರಾಮಾಣಿಕತೆ ಬಗ್ಗೆ ಯಾರಿಂದಲೂ ಪ್ರಶ್ನೆ ಬಂದಿಲ್ಲ ಎಂದು ಕಾಂಗ್ರೆಸ್ ಬಾಸ್‌ಗಳಿಗೆ ದೇಶಪಾಂಡೆ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.
ನಿಧಿ ದುರ್ಬಳಕೆ ಆರೋಪದ ಸಮಗ್ರ ತನಿಖೆಯಾಗಲಿ. ತನಿಖೆಯಲ್ಲಿ ನಾನು ತಪ್ಪಿತಸ್ಥ ಎಂದು ಸಾಬೀತಾದಲ್ಲಿ ಪಕ್ಷವು ಗಲ್ಲಿಗೇರಿಸಬಹುದು. ನಾನು ಅದಕ್ಕೂ ಸಿದ್ಧನಿದ್ದೇನೆ. ನನ್ನ ವರ್ಚಸ್ಸು ಇಲ್ಲಿ ಮುಖ್ಯವಲ್ಲ. ಆದರೆ ನಾನು ತಪ್ಪಿತಸ್ಥನಲ್ಲ ಎಂದೂ, ಪಕ್ಷದ ಇತರರ ಕೆಲಸ ಇದೆಂದೂ ಸಾಬೀತಾದಲ್ಲಿ ಅವರಿಗೂ ಶಿಕ್ಷೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಳೆದೆರಡು ದಿನಗಳಿಂದ ಸೋನಿಯಾ ಗಾಂಧಿ ಮನೆ ಕದ ತಟ್ಟುತ್ತಿರುವ ದೇಶಪಾಂಡೆಯವರಿಗೆ ಇಂದಾದರೂ ದರ್ಶನ ಭಾಗ್ಯ ಸಿಗಬಹುದು ಎಂದು ಹೇಳಲಾಗುತ್ತಿದೆ.