ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಸಬ್ ಬಿಡುಗಡೆಗಾಗಿ ವಿಮಾನ ಅಪಹರಣ; ನಿಜವಾಗಲಿದೆಯೇ?
(Plane hijack | Mohammed Ajmal Amir Kasab | Mumbai attack | Pakistan)
ಸಂಸತ್‌ಗೆ ದಾಳಿ ಮಾಡಿ ಸಿಕ್ಕಿಬಿದ್ದಿರುವ ಅಫ್ಜಲ್ ಗುರು ಮತ್ತು ಮುಂಬೈ ದಾಳಿಯಲ್ಲಿ ಜೀವಂತ ಸೆರೆ ಸಿಕ್ಕಿರುವ ಏಕೈಕ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌ನನ್ನು ಹೆಚ್ಚು ಕಾಲ ಜೈಲುಗಳಲ್ಲಿಟ್ಟುಕೊಳ್ಳಬೇಡಿ, ಹಾಗೆ ಮಾಡಿದಲ್ಲಿ ಅವರ ಬಿಡುಗಡೆಗೆ ಒತ್ತಾಯಿಸಿ ಮತ್ತೆ ವಿಮಾನ ಅಪಹರಣ ಯತ್ನಗಳು ನಡೆಯಬಹುದು ಎಂದು ಈ ಹಿಂದೆ ತಜ್ಞರು ಎಚ್ಚರಿಕೆಗಳನ್ನು ನೀಡಿದ್ದರು.
ನಮ್ಮನ್ನು ಆಳುತ್ತಿರುವವರು ಇನ್ನೂ ಎಚ್ಚೆತ್ತುಕೊಳ್ಳದಿರುವುದರಿಂದ ಅದೀಗ ನಿಜವಾಗುವ ಸಾಧ್ಯತೆಗಳು ಕಾಣುತ್ತಿವೆ. ಕಸಬ್ ಬಿಡುಗಡೆಗಾಗಿ ವಿಮಾನ ಅಪಹರಣ ನಡೆಸುವ ಸಾಧ್ಯತೆಗಳಿರುವ ಬಗ್ಗೆ ನಮಗೆ ಮಾಹಿತಿ ಲಭಿಸಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಆರ್.ಆರ್. ಪಾಟೀಲ್ ಖಚಿತಪಡಿಸಿದ್ದಾರೆ.
ಭಾರತದ ಪ್ರಯಾಣಿಕ ವಿಮಾನವೊಂದನ್ನು ಅಪಹರಿಸಿ, ಅದರಲ್ಲಿದ್ದ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿಟ್ಟುಕೊಂಡು ಕಸಬ್‌ನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುವ ಯೋಜನೆ ಭಯೋತ್ಪಾದಕರದ್ದು. ಈ ಬೆದರಿಕೆಯ ಪ್ರಕಾರ ಮುಂದಿನ ಹತ್ತು ದಿನಗಳೊಳಗೆ ಅಥವಾ ಆಸುಪಾಸಿನಲ್ಲಿ ವಿಮಾನ ಅಪಹರಣ ನಡೆಸಲಾಗುತ್ತದೆ.
ಮೂಲಗಳ ಪ್ರಕಾರ ಬೆದರಿಕೆ ಬಂದಿರುವುದು ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಯೊಂದರಿಂದ. 1999ರಲ್ಲಿ ಜೈಶ್ ಇ ಮೊಹಮ್ಮದ್ ಎಂಬ ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆ ಮುಖ್ಯಸ್ಥ ಮೌಲಾನಾ ಅಜರ್ ಮಸೂದ್ ಬಿಡುಗಡೆಗೆ ಒತ್ತಾಯಸಿ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಕಂದಹಾರ್‌ಗೆ ಅಪಹರಿಸಿ ಯಶಸ್ವಿಯಾಗಿದ್ದ ಘಟನೆಯನ್ನು ಮತ್ತೆ ನಡೆಸುವುದಾಗಿ ಬೆದರಿಕೆ ಹಾಕಲಾಗಿದೆ.
ಮುಂಬೈ ದಾಳಿ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ವಿಶೇಷ ನ್ಯಾಯಾಲಯದಿಂದ ತೀರ್ಪು ಪಡೆದುಕೊಂಡಿರುವ ಕಸಬ್‌ಗೆ ಮರಣ ದಂಡನೆ ಶಿಕ್ಷೆ ಪ್ರಕಟಿಸಲಾಗಿದೆ. ಪ್ರಸಕ್ತ ಪ್ರಕರಣವು ಹೈಕೋರ್ಟ್ ಮೆಟ್ಟಿಲೇರುವ ಹಂತದಲ್ಲಿದ್ದು, ಪಾಕ್ ಉಗ್ರನನ್ನು ಮುಂಬೈ ಆರ್ಥರ್ ರೋಡ್ ಜೈಲಿನಲ್ಲಿಡಲಾಗಿದೆ.
ವಿಮಾನ ಅಪಹರಣ ಬೆದರಿಕೆ ಹಿನ್ನೆಲೆಯಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಪಡೆಗಳು ತಮ್ಮ ಭದ್ರತೆಯನ್ನು ಬಿಗುಗೊಳಿಸಿವೆ. 'ಮುಂಬೈಯಲ್ಲಿ ವಿಮಾನ ಅಪಹರಣ ನಡೆಯುವ ಸಾಧ್ಯತೆಗಳಿವೆ ಎಂದು ಮುಂಬೈ ಪೊಲೀಸರು ನಮಗೆ ಮಾಹಿತಿ ನೀಡಿದ್ದಾರೆ' ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಸಿಐಎಸ್ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆದರಿಕೆ ಹಿನ್ನೆಲೆಯಲ್ಲಿ ಮುಂಬೈ ಸೇರಿದಂತೆ ಮಹಾರಾಷ್ಟ್ರದ ಇತರ ವಿಮಾನ ನಿಲ್ದಾಣಗಳಲ್ಲಿ ಹಾಗೂ ದೇಶದಾದ್ಯಂತ ಇತರ ವಿಮಾನ ನಿಲ್ದಾಣಗಳಲ್ಲೂ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ಹೆಚ್ಚಿನ ತಪಾಸಣೆಗಳನ್ನು ನಡೆಸಲಾಗುತ್ತಿದೆ. ವಿಮಾನ ನಿಲ್ದಾಣ ಪ್ರವೇಶಿಸುವ ಸಂದರ್ಭದಲ್ಲಿ ಪ್ರಯಾಣಿಕರನ್ನು ತಪಾಸಣೆ ನಡೆಸಲು ಶ್ವಾನ ದಳಗಳನ್ನೂ ಬಳಸಿಕೊಳ್ಳಲಾಗುತ್ತಿದೆ ಎಂದು ಮೂಲಗಳು ಹೇಳಿವೆ.