ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಚಿವಾಲಯದ ಇಂಧನ 'ಉಳಿತಾಯ'ಕ್ಕೆ 35 ಕೋಟಿ ರೂ.! (Petrolium | Oil Ministry | UPA | Fuel consumption | Central Government)
Bookmark and Share Feedback Print
 
ಜಾಗತಿಕ ಹಣಕಾಸು ಬಿಕ್ಕಟ್ಟು ಕುರಿತು ಬಹಿರಂಗವಾಗಿ ಕಳವಳ ವ್ಯಕ್ತಪಡಿಸಿ, ವಿಮಾನ ಪ್ರಯಾಣ ಬೇಡ ಎಂಬುದೇ ಮುಂತಾದ ಹಲವಾರು 'ಉಳಿತಾಯ' ಉಪಕ್ರಮಗಳನ್ನು ಘೋಷಿಸಿ ಈಗಾಗಲೇ ಟೀಕೆಗೆ ಗುರಿಯಾಗಿರುವ ಕೇಂದ್ರ ಸಚಿವಾಲಯಗಳ ಸಾಲಿಗೆ ಇದೀಗ ಪೆಟ್ರೋಲಿಯಂ ಸಚಿವಾಲಯ ಹೊಸ ಸೇರ್ಪಡೆ. ಕಳೆದ ಹದಿಮೂರೇ ತಿಂಗಳಲ್ಲಿ ಅದು ಇಂಧನ ಉಳಿತಾಯ ಮಾಡಿ ಎಂದು ಸಾರುವುದಕ್ಕೆ 35 ಕೋಟಿ ರೂಪಾಯಿ ಸಾರ್ವಜನಿಕರ ಹಣ ವ್ಯಯಿಸಿದೆ!

ಖಾಸಗಿ ವಾಹನ ಬಳಸುವಾಗ ತೈಲ ಉಳಿತಾಯವಾಗುವಂತೆ, ವಾಹನಗಳನ್ನು ದುರಸ್ತಿ ಮಾಡಿಟ್ಟುಕೊಳ್ಳಿ, ಮೈಲೇಜ್ ಹೆಚ್ಚು ಸಿಗುವಂತೆ ನೋಡಿಕೊಳ್ಳಿ ಎಂದೆಲ್ಲಾ ಪ್ರಜೆಗಳಿಗೆ ದೊಡ್ಡ ದೊಡ್ಡ ಸಲಹೆಗಳು ಅಧಿಕಾರಸ್ಥರಿಂದ ಬರುತ್ತದೆ. ಆದರೆ ಪೆಟ್ರೋಲಿಯಂ ಸಚಿವಾಲಯವು ಏಳು ಅಂಬಾಸಿಡರ್ ಕಾರುಗಳನ್ನು ಬಳಸುತ್ತಿದ್ದು, ಅವುಗಳ ತಲಾ ಮೈಲೇಜ್ ಲೀಟರಿಗೆ 7.4 ಕಿ.ಮೀ. ಮಾತ್ರ!

ಇನ್ನೊಂದೆಡೆ, ಇಂಧನದ ಸಮರ್ಪಕ ಬಳಕೆ ಹಾಗೂ ಪರಿಸರ ಸಂರಕ್ಷಣೆಯ ಜವಾಬ್ದಾರಿಯಿರುವ ಪೆಟ್ರೋಲಿಯಂ ಸಚಿವಾಲಯದ ಭಾಗವಾಗಿರುವ ಪೆಟ್ರೋಲಿಯಂ ಬಳಕೆ ಸಂಶೋಧನಾ ಸಂಸ್ಥೆ (ಪಿಸಿಆರ್ಎ), ಕಳೆದ 13 ತಿಂಗಳಲ್ಲಿ ಈ ಕುರಿತು ಜನಜಾಗೃತಿ ಮೂಡಿಸಲು ಅಲ್ಲಲ್ಲಿ ಜಾಹೀರಾತು ಇತ್ಯಾದಿ ಪ್ರಚಾರ ಕಾರ್ಯಕ್ರಮಗಳಿಗಾಗಿ ವ್ಯಯಿಸಿದ್ದು 35 ಕೋಟಿ ರೂಪಾಯಿ!

ಇವೆಲ್ಲವೂ ಬಹಿರಂಗಗೊಂಡಿರುವುದು ಸಂತ್ ನಗರ್ ನಿವಾಸಿ ಜಗಜೀತ್ ಸಿಂಗ್ ಎಂಬವರು ಸಲ್ಲಿಸಿದ್ದ ಆರ್‌ಟಿಐ (ಮಾಹಿತಿ ಹಕ್ಕು ಕಾಯಿದೆ) ಅರ್ಜಿಯ ಮೂಲಕ.

ಸರಿಯಾದ ನಿರ್ವಹಣೆಯಲ್ಲಿರುವ ಪೆಟ್ರೋಲ್ ಅಂಬಾಸಿಡರ್ ಕಾರೊಂದು ಲೀಟರಿಗೆ 13ಕ್ಕಿಂತ ಹೆಚ್ಚು ಕಿ.ಮೀ. ಮೈಲೇಜ್ ಕೊಡುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

ಕೇವಲ 13 ತಿಂಗಳಲ್ಲಿ 35 ಕೋಟಿ ರೂಪಾಯಿಗಳನ್ನು ಪಿಸಿಆರ್ಎ ಜಾಹೀರಾತಿಗಾಗಿಯೇ ವ್ಯಯಿಸಿದ್ದು, ಅದರಲ್ಲಿ ಟಿವಿ ಜಾಹೀರಾತುಗಳಿಗೆ 22 ಕೋಟಿ ರೂ., ರೇಡಿಯೋ ಜಾಹೀರಾತುಗಳಿಗೆ 6 ಕೋಟಿ ಮತ್ತು ಪತ್ರಿಕಾ ಜಾಹೀರಾತಿಗೆ 7 ಕೋಟಿ ರೂ. ಚೆಲ್ಲಲಾಗಿದೆಯಂತೆ.

ಮತ್ತು ಭಾರತ ಸರಕಾರದ ಪೆಟ್ರೋಲಿಯಂ ಸಚಿವಾಲಯದ ಮೂಲಕ ಕೆಲಸ ಮಾಡುತ್ತಿರುವ ಪಿಸಿಆರ್ಎಯ ಪ್ರಮುಖ ಉದ್ದೇಶವೆಂದರೆ, ಇಂಧನ ಉಳಿತಾಯ, ಪರಿಸರ ಸಂರಕ್ಷಣೆ ಮತ್ತು ಇಂಧನದ ಸಮರ್ಪಕ ಬಳಕೆ!

ಇಷ್ಟೆಲ್ಲ ಇರುವಾಗ, ತೈಲ ವಿತರಣಾ ಕಂಪನಿಗಳಿಗೆ ಬೆಲೆ ನಿಗದಿಯ ಸ್ವಾತಂತ್ರ್ಯ ನೀಡುವುದು, ಪೆಟ್ರೋಲ್, ಡೀಸೆಲ್ ಜತೆಗೆ ಅಡುಗೆ ಅನಿಲದ ಬೆಲೆ ಏರಿಸುವುದು... ಇತ್ಯಾದಿ ಪ್ರಕ್ರಿಯೆಯಲ್ಲಿ ಸರಕಾರವು ಎಗ್ಗಿಲ್ಲದೆ ಮುಂದುವರಿಯುತ್ತಿರುವುದು ಕಾಕತಾಳೀಯ.
ಸಂಬಂಧಿತ ಮಾಹಿತಿ ಹುಡುಕಿ