ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರನ್ನು ಕಳೆದ ಎರಡು ಮೂರು ದಿನಗಳಿಂದ ಭೇಟಿಯಾಗಲು ಕಾಯುತ್ತಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಆರ್.ವಿ. ದೇಶಪಾಂಡೆಯವರಿಗೆ ಕೊನೆಗೂ ಶುಕ್ರವಾರ ದರ್ಶನ ಭಾಗ್ಯ ದೊರೆತಿದ್ದು, ನೆರೆ ಸಂತ್ರಸ್ತರ ನಿಧಿ ದುರ್ಬಳಕೆ ಕುರಿತು ವಿವರಣೆ ನೀಡಿದ್ದಾರೆ.
ಇಂದು ಮಧ್ಯಾಹ್ನ ರಾಜಧಾನಿಯಲ್ಲಿನ ಸೋನಿಯಾ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದ ದೇಶಪಾಂಡೆಯವರು, ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನಿಧಿಯನ್ನು ಬಳಸಿರುವ ಕುರಿತು ವಿಸ್ತೃತ ವರದಿಯನ್ನು ಸಲ್ಲಿಸಿದರು ಎಂದು ವರದಿಗಳು ಹೇಳಿವೆ.
NRB
ಹೈಕಮಾಂಡ್ ಬಯಸಿದರೆ ನಾನು ರಾಜೀನಾಮೆಗೂ ಸಿದ್ಧನಿದ್ದೇನೆ. ಪಕ್ಷಕ್ಕಿಂತ ವ್ಯಕ್ತಿ ದೊಡ್ಡವನಲ್ಲ ಎಂದು ಅವರು ಹೇಳಿದ್ದಾರೆಂದು ಸುದ್ದಿವಾಹಿನಿಗಳು ವರದಿ ಮಾಡಿವೆ.
ಭೇಟಿಯ ನಂತರ ಪ್ರತಿಕ್ರಿಯಿಸಿರುವ ದೇಶಪಾಂಡೆಯವರು ಸಂತೋಷ ವ್ಯಕ್ತಪಡಿಸಿದ್ದು, 'ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಬೇಕಾಗಿ ಬಂದರೆ ಅದಕ್ಕೆ ನಾನು ಹೆದರುವುದಿಲ್ಲ. ಈ ಕುರಿತು ಯಾವುದೇ ಬಹಿರಂಗ ಚರ್ಚೆಯನ್ನು ನಾನು ನಡೆಸುವುದಿಲ್ಲ' ಎಂದಷ್ಟೇ ತಿಳಿಸಿದ್ದಾರೆ.
ಕಳೆದ ವರ್ಷದ ಭೀಕರ ನೆರೆ ಸಂದರ್ಭದಲ್ಲಿ ಬೀದಿ ಬೀದಿ ಸುತ್ತಿ ಕಾಂಗ್ರೆಸ್ ರಾಜ್ಯ ಘಟಕ ಸಂಗ್ರಹಿಸಿದ್ದ ಪರಿಹಾರದ ಹಣವನ್ನು ಬೇರೆ ಕೆಲಸಗಳಿಗೆ ವಿನಿಯೋಗಿಸುವ ಮೂಲಕ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪ ಕೆಪಿಸಿಸಿ ಅಧ್ಯಕ್ಷ ದೇಶಪಾಂಡೆಯವರ ಮೇಲೆ ಬಂದಿತ್ತು.
ಇದರ ಹಿಂದೆ ಸ್ವತಃ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕೈವಾಡವಿದೆ ಎಂದೂ ದೇಶಪಾಂಡೆಯವರು ಅಹ್ಮದ್ ಪಟೇಲ್ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಗುಲಾಂ ನಬೀ ಅಜಾದ್ ಅವರಿಗೆ ದೇಶಪಾಂಡೆ ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೇ ಸೋನಿಯಾ ಬಳಿಯೂ ದೇಶಪಾಂಡೆ ಪುನರುಚ್ಛರಿಸಿದ್ದಾರೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.