ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಂಡರ್ಸನ್ ಬಿಡುಗಡೆ: ರಾಜೀವ್ ಸೂಚನೆ ಕಾರಣ!
(Rajeev Gandhi | Bhopal Tragedy | Warren Anderson | Union Carbide | Congress | Arjun Singh)
1984ರ ಭೋಪಾಲ ಅನಿಲ ದುರಂತದಲ್ಲಿ 25 ಸಾವಿರಕ್ಕೂ ಹೆಚ್ಚು ಸಾವಿಗೆ ಹಾಗೂ ಲಕ್ಷಾಂತರ ಮಂದಿ ಅನಾರೋಗ್ಯಪೀಡಿತರಾಗಲು ಕಾರಣವಾದ ಯೂನಿಯನ್ ಕಾರ್ಬೈಡ್ ಸಂಸ್ಥೆಯ ಭಾರತೀಯ ಘಟಕದ ಮುಖ್ಯಸ್ಥ ವಾರೆನ್ ಆಂಡರ್ಸನ್‌ನನ್ನು ಮೂರೇ ದಿನಗಳಲ್ಲಿ ಬಂಧಿಸಲಾಗಿತ್ತಾದರೂ, ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರದ ಆದೇಶದ ಮೇರೆಗೆ, ಅಂದಿನ ಮಧ್ಯಪ್ರದೇಶದ ಕಾಂಗ್ರೆಸ್ ಸರಕಾರವು ಬಿಡುಗಡೆ ಮಾಡಿತ್ತು ಎಂಬ ಅಂಶವೀಗ ಬಯಲಾಗಿದೆ.
ಆಂಡರ್ಸನ್ ಭಾರತದಿಂದ ಪರಾರಿಯಾದ ದಿನವಾದ 1984ರ ಡಿಸೆಂಬರ್ 7ರ ಮರುದಿನದ ದಿನಾಂಕವಿರುವ ಸಿಐಎ (ಅಮೆರಿಕದ ತನಿಖಾ ಏಜೆನ್ಸಿ) ದಾಖಲೆಗಳು ಈ ವಿಷಯವನ್ನು ಉಲ್ಲೇಖಿಸಿವೆ.
ಬಹುರಾಷ್ಟ್ರೀಯ ಕಂಪನಿಗಳ ಒಲವಿನ ಪರಿಣಾಮ ಮಧ್ಯಪ್ರದೇಶದಲ್ಲಿ ಅಂದು ಚುನಾವಣೆಗಳು ಹತ್ತಿರವಾಗತೊಡಗಿದ್ದವು. ಹೀಗಾಗಿ ಅಂದಿನ ಅರ್ಜುನ್ ಸಿಂಗ್ ನೇತೃತ್ವದ ಮಧ್ಯಪ್ರದೇಶ ಕಾಂಗ್ರೆಸ್ ಸರಕಾರವು ಯೂನಿಯನ್ ಕಾರ್ಬೈಡ್ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿ, ಜನರ ಆಕ್ರೋಶ ಶಮನ ಮಾಡಲು ಪ್ರಯತ್ನಿಸಬಹುದು ಎಂಬ ಆತಂಕ ಕೇಂದ್ರ ಸರಕಾರದ್ದಾಗಿತ್ತು. ಅಂದರೆ, ಮುಂದೆ ಬರುವ ಸರಕಾರವು ಕೂಡ ಬಹುರಾಷ್ಟ್ರೀಯರೊಂದಿಗೆ, ವಿಶೇಷವಾಗಿ ಅಮೆರಿಕ ಕಂಪನಿಗಳ ವಿದೇಶೀ ಹೂಡಿಕೆ ಪಡೆದುಕೊಳ್ಳಲು ಹಿಂದುಮುಂದು ನೋಡಬಹುದಾಗಿತ್ತು ಎಂಬುದು ಆತಂಕವಾಗಿತ್ತು. ಚುನಾವಣೆಗಳ ಸಂದರ್ಭ, ಯೂನಿಯನ್ ಕಾರ್ಬೈಡ್ ಮೇಲೆಯೇ ಎಲ್ಲ ಹೊಣೆಯನ್ನೂ ಹೊರಿಸಿ, ಅದರ ಮಾತೃಸಂಸ್ಥೆಯಿಂದ ಹೆಚ್ಚಿನ ಪರಿಹಾರ ಧನ ಪಡೆಯಲು ಸಿದ್ಧತೆ ಮಾಡಿದಲ್ಲಿ, ಜಾಗತಿಕ ಹೂಡಿಕೆ ಮಾರುಕಟ್ಟೆಯಲ್ಲಿ ಇದು ಭಾರತದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂಬ ಆತಂಕವೂ ಅದಕ್ಕಿತ್ತು ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಹೀಗಾಗಿ ರಾಜೀವ್ ಗಾಂಧಿ ಸರಕಾರವು ಅರ್ಜುನ್ ಸಿಂಗ್ ಸರಕಾರಕ್ಕೆ ಆಂಡರ್ಸನ್ ಬಿಡುಗಡೆಗೆ ವ್ಯವಸ್ಥೆ ಮಾಡುವಂತೆ ಆದೇಶ ನೀಡಿತ್ತು ಎನ್ನಲಾಗಿದೆ. ಅಂದಿನ ರಾಜ್ಯ ಸರಕಾರವು ಕೇಂದ್ರದ ಆದೇಶವನ್ನು ಪಾಲಿಸಿತ್ತು ಎಂದು ಕಾಂಗ್ರೆಸ್ ವಕ್ತಾರ ದಿಗ್ವಿಜಯ್ ಸಿಂಗ್ ಈಗಾಗಲೇ ಒಪ್ಪಿಕೊಂಡಿದ್ದಾರೆ.
ಆಂಡರ್ಸನ್ ಬಿಡುಗಡೆ ಆದೇಶವು ಮುಖ್ಯಮಂತ್ರಿಯಾಗಿದ್ದ ಅರ್ಜುನ್ ಅವರಿಂದಲೇ ಬಂದಿತ್ತು, ಆದರೆ ಅವರು ಕೂಡ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಆದೇಶವನ್ನು ಪಾಲಿಸಿದರು ಎಂದು ಮಧ್ಯಪ್ರದೇಶದ ಸರಕಾರದ ಕೃಷಿ ಕಾರ್ಯದರ್ಶಿಯಾಗಿದ್ದ ಆರ್.ಸಿ.ಜೈನ್ ಕೂಡ ಖಚಿತಪಡಿಸಿದ್ದಾರೆ.
ರಾಜೀವ್ ಮೇಲೆ ರೊನಾಲ್ಡ್ ರೇಗನ್ ಸರಕಾರ ಒತ್ತಡ ರಾಜೀವ್ ಸೂಚನೆ ಅನುಸಾರ ಅರ್ಜುನ್ ಅವರು ಮುಖ್ಯ ಕಾರ್ಯದರ್ಶಿಗೆ ಆದೇಶ ರವಾನಿಸಿದ್ದರಾದರೂ, ರಾಜೀವ್ ಗಾಂಧಿ ಅಮೆರಿಕ ಸರಕಾರದಿಂದ ತೀವ್ರ ಒತ್ತಡಕ್ಕೆ ತಲೆಬಾಗಿ ವರ್ತಿಸಿದರು ಎಂದು ಜೈನ್ ಅವರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅಂದು ರೊನಾಲ್ಡ್ ರೇಗನ್ ಅಮೆರಿಕ ಅಧ್ಯಕ್ಷರಾಗಿದ್ದರು.
ತತ್ಪರಿಣಾಮವಾಗಿ, ಆಂಡರ್ಸನ್‌ನನ್ನು ಸರಕಾರಿ ವಿಮಾನದಲ್ಲಿಯೇ ಮಧ್ಯಪ್ರದೇಶದಿಂದ ದೆಹಲಿಗೆ ಕರೆದೊಯ್ಯಲಾಯಿತು. ಅಲ್ಲಿಂದ ಆತ ಅಮೆರಿಕಕ್ಕೆ ವಿಮಾನದಲ್ಲಿ ಮರಳಿದ. ಮತ್ತೆಂದೂ ಭಾರತಕ್ಕೆ ಕಾಲಿಡಲಿಲ್ಲ!
ಅದು ಕೂಡ, ಮುಂಬಯಿಯಿಂದ ಬಂದಿಳಿದ ಆಂಡರ್ಸನ್‌ನನ್ನು ಸರಕಾರಿ ಕಾರಿನಲ್ಲೇ ಯೂನಿಯನ್ ಕಾರ್ಬೈಡ್ ಗೆಸ್ಟ್ ಹೌಸ್‌ಗೆ ಕರೆದೊಯ್ದು, ಅಲ್ಲಿ ಕಾಯುತ್ತಿದ್ದ ಪತ್ರಕರ್ತರ ಕಣ್ಣು ತಪ್ಪಿಸಿ, ಹಿಂಬಾಗಿಲಿನಿಂದ ಕರೆದೊಯ್ಯಲಾಗಿತ್ತು. ಆತನನ್ನು ಗೆಸ್ಟ್ ಹೌಸಿನಲ್ಲೇ 'ಬಂಧಿಸಿ', ಕೇಂದ್ರ-ರಾಜ್ಯದಿಂದ ಸೂಚನೆ ಬಂದ ತಕ್ಷಣವೇ, ಸರಕಾರಿ ವಿಮಾನದಲ್ಲಿ ದೆಹಲಿಗೆ ಕರೆದೊಯ್ಯಲಾಯಿತು.
ಒಟ್ಟಿನಲ್ಲಿ, ಅಂದು ಬಯಲಾಗದ ಈ ದೇಶದ 'ನೈಜ ಇತಿಹಾಸ' ಒಂದೊಂದೇ ಈಗ ಹೊರಬರುತ್ತಿವೆ. ಆರೋಪ-ಪ್ರತ್ಯಾರೋಪಗಳು ಕೇಂದ್ರದಿಂದ ರಾಜ್ಯಕ್ಕೆ-ರಾಜ್ಯದಿಂದ ಕೇಂದ್ರಕ್ಕೆ ಹರಿದಾಡುತ್ತಲೇ ಇವೆ. ಏನೇ ಆದರೂ, ಭೋಪಾಲ ದುರಂತದಿಂದ ಮಡಿದವರಿಗೆ, ಈಗಲೂ ನರಳಾಡುತ್ತಿರುವವರಿಗೆ ಪರಿಹಾರ ಸಿಕ್ಕಿದೆಯೇ? ಎಂಬುದೇ ಈಗಿರುವ ಪ್ರಶ್ನೆ.