ಹಳಿ ಸ್ಫೋಟ ನಡೆಸಲಾಗಿದೆ ಎಂಬ ಪೂರ್ವ ಮಾಹಿತಿ ಹಿನ್ನೆಲೆಯಲ್ಲಿ ಚೆನ್ನೈಗೆ ಬರುತ್ತಿದ್ದ ರಾಕ್‌ಫೋರ್ಟ್ ಎಕ್ಸ್‌ಪ್ರೆಸ್ ರೈಲಿನ ಚಾಲಕ ತಕ್ಷಣ ಕಾರ್ಯಪ್ರವೃತ್ತನಾಗಿ ರೈಲನ್ನು ತಡೆದು ನಿಲ್ಲಿಸಿದ ಕಾರಣ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿ ಹೋಗಿದೆ ಎಂದು ವರದಿಗಳು ಹೇಳಿದ್ದು, ತನಿಖೆಗಳ ಪ್ರಕಾರ ಇದು ಎಲ್‌ಟಿಟಿಇ ಪರ ಸಂಘಟನೆಗಳ ಕೃತ್ಯ ಎಂದು ತಿಳಿದು ಬಂದಿದೆ.
ತಿರುಚನಾಪಳ್ಳಿ-ಚೆನ್ನೈ ನಡುವಿನ ರೈಲು ಇಂದು ಮುಂಜಾನೆ 2.10ಕ್ಕೆ ಚೆನ್ನೈಯಿಂದ 160 ಕಿಲೋ ಮೀಟರ್ ದೂರದಲ್ಲಿನ ತಿಂಡಿವಾನಮ್ ಎಂಬಲ್ಲಿನ ಪೆರಾನಿ ರೈಲ್ವೇ ನಿಲ್ದಾಣ ಸಮೀಪ ಬರುತ್ತಿದ್ದ ಹೊತ್ತಿನಲ್ಲಿ ರೈಲ್ವೇ ಮೂಲಗಳಿಂದ ಬಂದ ಮಾಹಿತಿಗಳ ಹಿನ್ನೆಲೆಯಲ್ಲಿ ಚಾಲಕ ರೈಲನ್ನು ನಿಲ್ಲಿಸಿದ್ದ. ಇದರಿಂದಾಗಿ ಭಾರೀ ಅನಾಹುತ ತಪ್ಪಿ ಹೋದಂತಾಗಿದೆ.
ಇಲ್ಲೇ ನಡೆದಿರುವ ಸ್ಫೋಟದಲ್ಲಿ ಸುಮಾರು ಮೂರು ಅಡಿಗಳಷ್ಟು ಹಳಿ ಧ್ವಂಸಗೊಂಡಿದೆ. ನಾಲ್ಕು ಅಡಿಗಳಷ್ಟು ಆಳದ ಕಂದಕ ಇಲ್ಲಿ ನಿರ್ಮಾಣವಾಗಿದೆ. ಸ್ಫೋಟಕ್ಕೆ ಯಾವ ವಸ್ತುಗಳನ್ನು ಬಳಸಲಾಗಿತ್ತು ಎಂಬುದು ಇನ್ನೂ ತಿಳಿದು ಬಂದಿಲ್ಲ ಎಂದು ವಿಲ್ಲುಪುರಂ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಿರುಚನಾಪಳ್ಳಿ ಮತ್ತು ಚೆನ್ನೈ ರೈಲ್ವೇ ಅಧಿಕಾರಿಗಳು ತಕ್ಷಣವೇ ಮಾಹಿತಿ ರವಾನಿಸಿದ ಹಿನ್ನೆಲೆಯಲ್ಲಿ ಹಳಿ ಸ್ಫೋಟ ನಡೆದಿರುವ ಸ್ಥಳದಿಂದ 200 ಅಡಿ ದೂರದಲ್ಲಿ ಚಾಲಕ ರೈಲನ್ನು ತುರ್ತು ಬ್ರೇಕ್ ಹಾಕುವ ಮೂಲಕ ತಡೆ ಹಿಡಿದಿದ್ದಾನೆ ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.
ಈ ಸ್ಫೋಟದ ಹಿಂದೆ ಮಾವೋವಾದಿಗಳ ಕೈವಾಡ ಇರಬಹುದೆಂದ ಶಂಕೆಗಳನ್ನು ತನಿಖಾಧಿಕಾರಿಗಳು ತಳ್ಳಿ ಹಾಕಿದ್ದು, ಇದು ಎಲ್‌ಟಿಟಿಇ ಪರ ಸಂಘಟನೆಗಳ ಕೃತ್ಯ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದ್ದು, ಆರೋಪಿಗಳನ್ನು ಬಂಧಿಸುವ ವಿಶ್ವಾಸವನ್ನು ಅಧಿಕಾರಿಗಳು ಹೊಂದಿದ್ದಾರೆ.
ತಕ್ಷಣವೇ ರೈಲ್ವೇ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಪೊಣ್ ಮನಿಕಾವೆಲ್ ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಶೀಘ್ರದಲ್ಲೇ ಹಳಿಯನ್ನು ಸರಿಪಡಿಸುವುದಾಗಿ ತಿಳಿಸಿದ್ದಾರೆ.
ಸ್ಫೋಟ ಹಿನ್ನೆಲೆಯಲ್ಲಿ ತಮಿಳುನಾಡಿನ ದಕ್ಷಿಣ ಜಿಲ್ಲೆಗಳಿಂದ ಚೆನ್ನೈಗೆ ಬರುವ ರೈಲುಗಳನ್ನು ತಡೆ ಹಿಡಿಯಲಾಗಿದೆ.
ರಾಕ್‌ಫೋರ್ಟ್ ಎಕ್ಸ್‌ಪ್ರೆಸ್, ಪರ್ಲ್ ಸಿಟಿ ಎಕ್ಸ್‌ಪ್ರೆಸ್, ಕನ್ಯಾಕುಮಾರಿ ಎಕ್ಸ್‌ಪ್ರೆಸ್, ಮುಂಬೈ-ಮಧುರೈ ಎಕ್ಸ್‌ಪ್ರೆಸ್ ಮತ್ತು ಇತರ ರೈಲುಗಳನ್ನು ತಕ್ಷಣವೇ ದಾರಿ ಮಧ್ಯದಲ್ಲಿಯೇ ತಡೆ ಹಿಡಿಯಲಾಗಿದೆ. ಗುರುವಾಯೂರ್, ಪುದುಚೇರಿ ಮತ್ತು ಇತರ ಕಡೆಗಳಿಂದ ಬರುವ ರೈಲುಗಳೂ ವಿಳಂಬವಾಗಲಿವೆ ಎಂದು ಇಲಾಖೆ ತಿಳಿಸಿದೆ.