ಬಿಜೆಪಿ ಆಡಳಿತವಿರುವ ಗುಜರಾತಿನ ಮುಸ್ಲಿಮರು ಎಡಪಕ್ಷಗಳ ಆಡಳಿತವಿರುವ ಪಶ್ಚಿಮ ಬಂಗಾಳಕ್ಕಿಂತಲೂ ಹೆಚ್ಚು ಅಭಿವೃದ್ಧಿ ಹೊಂದಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ರವಿಶಂಕರ್ ಪ್ರಸಾದ್ ಘೋಷಿಸಿದ್ದಾರೆ.
ಮುಸ್ಲಿಮರ ಶ್ರೀಮಂತಿಕೆಯನ್ನು ಪರಿಗಣಿಸಿದರೆ, 'ಜಾತ್ಯತೀತ'ರು ಎಂದು ಹೇಳಿಕೊಳ್ಳುತ್ತಿರುವ ಶಕ್ತಿಗಳಿಂದ ಆಳ್ವಿಕೆಯಿರುವ ಪಶ್ಚಿಮ ಬಂಗಾಳ ಅತ್ಯಂತ ಹಿಂದಿದ್ದು, ಗುಜರಾತ್‌ನಲ್ಲಿ ಇದು ಗರಿಷ್ಠವಾಗಿದೆ ಎಂದು ಅವರು ಸುದ್ದಿಗಾರರಿಗೆ ಹೇಳಿದರು.
ಬಿಹಾರದ ವಿವಿಧ ಹಿಂದಿ, ಉರ್ದು ಪತ್ರಿಕೆಗಳಲ್ಲಿ ಪೂರ್ಣಪುಟದಲ್ಲಿ ಪ್ರಕಟವಾದ ಜಾಹೀರಾತುಗಳಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಮುಸ್ಲಿಮರ ಮಿತ್ರ ಎಂದು ಬಿಂಬಿಸಲಾಗಿದೆ. ಈ ಜಾಹೀರಾತಿನ ಪ್ರಕಾರ, ಗುಜರಾತಿನಲ್ಲಿ ಶೇ.73.5 ಮುಸ್ಲಿಮರು ಸುಶಿಕ್ಷಿತರು. ಇದು ರಾಷ್ಟ್ರೀಯ ಸರಾಸರಿಗಿಂತ (ಶೇ.59.1) ಸಾಕಷ್ಟು ಹೆಚ್ಚು ಮಾತ್ರವಲ್ಲ, ಗುಜರಾತಿನ ಒಟ್ಟಾರೆ ಸರಾಸರಿಗಿಂತಲೂ (ಶೇ.69.1) ಹೆಚ್ಚು. ಮುಸ್ಲಿಮರ ಉದ್ಯೋಗಾವಕಾಶವೂ ಇತರ ರಾಜ್ಯಗಳಿಂದ ಗುಜರಾತಿನಲ್ಲಿ ಹೆಚ್ಚಿದೆ. ಗುಜರಾತಿನಲ್ಲಿ ಇದು ಶೇ.5.4 ಆಗಿದ್ದರೆ, ಎಡರಂಗ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ ಇದು ಕೇವಲ ಶೇ.2.1 ಮತ್ತು ಕಾಂಗ್ರೆಸ್ ಆಡಳಿತದ ದೆಹಲಿಯಲ್ಲಿ ಇದು ಶೇ.3.2 ಮಾತ್ರ.
ಅಂತೆಯೇ, ಗುಜರಾತ್ ಮುಸ್ಲಿಮರು ಶ್ರೀಮಂತಿಕೆಯಲ್ಲಿ, ಬ್ಯಾಂಕು ಠೇವಣಿಗಳಲ್ಲಿ, ಶೈಕ್ಷಣಿಕ ಅವಕಾಶಗಳಲ್ಲಿ, ವೈದ್ಯಕೀಯ ಸೌಲಭ್ಯಗಳಲ್ಲಿ ಇತರ ರಾಜ್ಯಗಳಿಗಿಂತ ಮುಂದಿದ್ದಾರೆ ಎಂದೂ ಅಂಕಿ ಅಂಶ ಸಹಿತ ಈ ಜಾಹೀರಾತುಗಳಲ್ಲಿ ವಿವರಿಸಲಾಗಿದೆ.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿರುವ ಬಿಹಾರಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ಈ ಮಾಹಿತಿ ನೀಡಿದರು. ಮೋದಿ ಅವರು ಈ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಷಣ ಮಾಡಲಿದ್ದಾರೆ ಮತ್ತು ಜೂನ್ 13ರಂದು ಐತಿಹಾಸಿಕ ಗಾಂಧಿ ಮೈದಾನದಲ್ಲಿ ರ‌್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದೂ ರವಿಶಂಕರ್ ಪ್ರಸಾದ್ ಸ್ಪಷ್ಟಪಡಿಸಿದರು.