ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಂಡರ್ಸನ್ ವಿರುದ್ಧ ಗಂಭೀರ ಆರೋಪ ಅಳಿಸಿದ್ದ ಪೊಲೀಸರು! (Warren Anderson | Bhopal Gas Tragedy | Union Carbide | Culpable Homicide)
Bookmark and Share Feedback Print
 
ಭೋಪಾಲ ಅನಿಲ ದುರಂತಕ್ಕೆ ಸಂಭವಿಸಿದಂತೆ ಆರೋಪಿಗಳಿಗೆ ಬರೇ 2 ವರ್ಷ ಶಿಕ್ಷೆ ಘೋಷಣೆಯಾಗಿರುವುದು ಒಂದೊಂದೇ ಐತಿಹಾಸಿಕ ಪ್ರಮಾದಗಳು ಹೊರಬರುವಂತೆ ಮಾಡಿದೆ. ಈ ದುರಂತ ಸಂಭವಿಸಿದ ಮೂರೇ ದಿನಗಳಲ್ಲಿ ಯೂನಿಯನ್ ಕಾರ್ಬೈಡ್ ಸಿಇಒ ವಾರೆನ್ ಆಂಡರ್ಸನ್ ಮತ್ತು ಇತರ ಇಬ್ಬರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಾಗ, ಅವರ ಮೇಲೆ ಐಪಿಸಿ ಸೆಕ್ಷನ್ ಅಡಿಯಲ್ಲಿ ದಾಖಲಾಗಿದ್ದ ಅತ್ಯಂತ ಗಂಭೀರ ಆರೋಪವನ್ನು ದೂರಿನಿಂದ ಅಳಿಸಿ ಹಾಕಲಾಗಿತ್ತು ಎಂಬ ಅಂಶವೊಂದು ಬಯಲಾಗಿದೆ.

ಕೇಂದ್ರ ಮತ್ತು ಮಧ್ಯಪ್ರದೇಶ ರಾಜ್ಯದಲ್ಲಿ ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರವು ಇದೀಗ ಆಂಡರ್ಸನ್‌ನನ್ನು ದೇಶದಿಂದ ಹೊರಗೆ ಕಳುಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂಬ ಆರೋಪಗಳು ಬಲವಾಗತೊಡಗಿರುವಂತೆಯೇ ಹೊಸ ಹೊಸ ಸತ್ಯಗಳು ಬೆಳಕಿಗೆ ಬರತೊಡಗಿವೆ. ಆಂಡರ್ಸನ್, ಆ ಕಂಪನಿಯ ಅಧ್ಯಕ್ಷ ಕೇಶುಬ್ ಮಹೀಂದ್ರ ಮತ್ತು ಹಿರಿಯ ಅಧಿಕಾರಿ ವಿಜಯ್ ಪ್ರಕಾಶ್ ಗೋಖಲೆಯನ್ನು 1984ರ ಡಿಸೆಂಬರ್ 7ರಂದು ಬೆಳಿಗ್ಗೆ 10.10ಕ್ಕೆ ಬಂಧಿಸಿದವರು ಹನುಮಾನ್‌ಗಂಜ್ ಪೊಲೀಸ್ ಠಾಣಾಧಿಕಾರಿ ಸುರೇಂದರ್ ಸಿಂಗ್. ಅವರ ವಿರುದ್ಧ ಐಪಿಸಿ ಸೆಕ್ಷನ್ 304 (ಕೊಲೆಗೆ ಹೇತುವಾಗದ ದಂಡನಾರ್ಹ ನರಹತ್ಯೆ) ಸೇರಿದಂತೆ ಹಲವಾರು ಕೇಸುಗಳನ್ನು ದಾಖಲಿಸಲಾಗಿತ್ತು.

ಅಂತೆಯೇ ಈ ಮೂವರ ವಿರುದ್ಧ 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ), 278 (ಆರೋಗ್ಯಕ್ಕೆ ವಿಷಕಾರಕ ವಾತಾವರಣ ಸೃಷ್ಟಿ), 284 (ವಿಷಕಾರಿ ವಸ್ತುವಿಗೆ ಸಂಬಂಧಿಸಿ ನಿರ್ಲಕ್ಷ್ಯದ ವರ್ತನೆ), 426 (ಕೇಡುಂಟುಮಾಡುವಿಕೆ) ಮತ್ತು 429 (ಜಾನುವಾರು ಮತ್ತಿತರ ಪ್ರಾಣಿಗಳ ಹತ್ಯೆ ಮೂಲಕ ಹಾನಿ) ಮುಂತಾದ ಆರೋಪಗಳನ್ನು ಹೊರಿಸಲಾಗಿತ್ತು.

ನಂತರ, 'ಮೇಲಿನಿಂದ' ಸೂಚನೆ ಬಂದ ಪ್ರಕಾರ ಪೊಲೀಸರು ಸೆಕ್ಷನ್ 304ರ ಅಡಿಯಲ್ಲಿನ ಆರೋಪವನ್ನು ಅಳಿಸಿ ಹಾಕಿ ಮೂವರನ್ನು ಬಿಡುಗಡೆ ಮಾಡಿದರು ಎಂದು ವಿಚಾರಣಾ ನ್ಯಾಯಾಲಯದ ಮೂಲಗಳು ತಿಳಿಸಿವೆ.

ಇಂತಹಾ ಆರೋಪಗಳನ್ನು ಅಳಿಸಿಬಿಡಲು ಪೊಲೀಸರಿಗೆ ಯಾವುದೇ ಅಧಿಕಾರವಿಲ್ಲ ಮತ್ತು ಈ ರೀತಿ ಮಾಡುವ ಮೂಲಕ ಅವರು ತಮ್ಮ ಮಿತಿಯನ್ನು ದಾಟಿದ್ದಾರೆ. ಈ ಆರೋಪವನ್ನು ಅಳಿಸದೇಹೋಗಿದ್ದರೆ, ಆಂಡರ್ಸನ್ ಈ ದೇಶದಿಂದ ಹೊರಹೋಗುವುದು ಸಾಧ್ಯವೇ ಇರುತ್ತಿರಲಿಲ್ಲ ಎಂದು ಕೋರ್ಟ್ ಮೂಲಗಳು ಹೇಳಿವೆ.

ಆನಂತರ ಸಿಬಿಐ ತನಿಖೆಯ ಸಂದರ್ಭ ಮಹೀಂದ್ರ ಮತ್ತು ಗೋಖಲೆ ವಿರುದ್ಧ ಸೆಕ್ಷನ್ 304ರ ಅಡಿ ಆರೋಪ ದಾಖಲಿಸಿಕೊಳ್ಳಲಾಯಿತು. ಈ ಆರೋಪ ಸಾಬೀತಾದರೆ ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆ ಇರುತ್ತದೆ. ಆದರೆ, ನಂತರ ವಿಚಾರಣೆ ಸಂದರ್ಭ ಸುಪ್ರೀಂ ಕೋರ್ಟ್ ಈ ಗಂಭೀರ ವಿಭಾಗವನ್ನು ಕೈಬಿಟ್ಟಿತು.
ಸಂಬಂಧಿತ ಮಾಹಿತಿ ಹುಡುಕಿ