ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯುಪಿಎ ಸರಕಾರದ್ದು ಸೂಪರ್ ಫ್ಲಾಪ್ ಶೋ: ಗಡ್ಕರಿ ವಾಗ್ದಾಳಿ (UPA govt | BJP | Nitin Gadkari | Sonia Gandhi)
Bookmark and Share Feedback Print
 
ಕೊಟ್ಟಿರುವ ಭರವಸೆಗಳನ್ನು ಈಡೇರಿಸಲು ವಿಫಲವಾಗಿರುವ ಸಂಯುಕ್ತ ಪ್ರಗತಿಪರ ಒಕ್ಕೂಟ (ಯುಪಿಎ) ವಿರುದ್ಧ ಹರಿಹಾಯ್ದಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಯುಪಿಎಯದ್ದು ಸಂಪೂರ್ಣ ವಿಫಲ ಪ್ರದರ್ಶನ ಎಂದು ಜರೆದಿದ್ದಾರೆ.

ಪಾಟ್ನಾದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಉದ್ಘಾಟಿಸಿದ ನಂತರ ಮಾತನಾಡುತ್ತಿದ್ದ ಅವರು, ಇತ್ತೀಚೆಗಷ್ಟೇ ವರ್ಷ ಪೂರೈಸಿದ ಯುಪಿಎ-II ಸರಕಾರವು ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಕುರಿತು ಅಪ್ರಬುದ್ಧ ರಾಜಕೀಯ ನಿರ್ಧಾರವನ್ನು ತೆಗೆದುಕೊಳ್ಳುವುದರ ಮೂಲಕ ಆರಂಭಿಸಿತ್ತು ಎಂದರು.

ಮಾವೋವಾದಿ ಸಮಸ್ಯೆಯನ್ನು ಹೇಗೆ ಬಗೆಹರಿಸುವಲ್ಲಿ ವಿಫಲವಾಗಿರುವುದು, ಮಹಿಳಾ ಮೀಸಲಾತಿ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸದೇ ಇರುವುದು, ಮಣಿಪುರ ಬಿಕ್ಕಟ್ಟು ನಿವಾರಿಸಲು ಸಾಧ್ಯವಾಗದೇ ಮುಂತಾದುವು ಕೇಂದ್ರ ಸರಕಾರದ ವೈಫಲ್ಯಗಳು ಎಂದು ಗಡ್ಕರಿ ಪಟ್ಟಿ ಮಾಡಿದ್ದಾರೆ.

ಅಗತ್ಯ ವಸ್ತುಗಳ ಬೆಲೆಯನ್ನು ನೂರೇ ದಿನದೊಳಗೆ ನಿಯಂತ್ರಿಸುವುದಾಗಿ ಸರಕಾರ ಭರವಸೆ ನೀಡಿತ್ತು. ಆದರೆ ದರಗಳು ಶೇ.100ರಷ್ಟು ಏರಿಕೆಯಾಗಿವೆ. ಪ್ರಗತಿ ದರವನ್ನು ಎರಡಂಕಿಗೆ ತಲುಪಿಸುವುದಾಗಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹೇಳಿದ್ದರು. ಅದರ ಬದಲು ಎರಡಂಕಿ ಹಣದುಬ್ಬರವನ್ನು ಸರಕಾರ ಸಾಧಿಸಿದೆ ಎಂದೂ ಗಡ್ಕರಿ ಬೆಟ್ಟು ಮಾಡಿ ತೋರಿಸಿದ್ದಾರೆ.

ಅದೇ ವೇಳೆ ಪ್ರಧಾನಿ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಪರೋಕ್ಷ ದಾಳಿ ನಡೆಸಿರುವ ಅವರು, ಯುಪಿಎ ಆಡಳಿತಾವಧಿಯಲ್ಲಿ ಕಣ್ಣಿಗೆ ರಾಚುತ್ತಿರುವ ಅಸಮಂಜಸ ಅಂಶವೆಂದರೆ ಅದರ ಆಡಳಿತ ನಾಯಕತ್ವವು ರಾಜಕೀಯ ಬದ್ಧತೆಯ ಕೊರತೆಯನ್ನು ಎದುರಿಸುತ್ತಿರುವುದು ಮತ್ತು ಅದು ರಾಜಕೀಯ ದೇವತೆಗೆ ಅಡಿಯಾಳಾಗಿ ಆಡಳಿತದ ಗೊಂದಲಗಳಿಗೆ ಕಾರಣವಾಗಿರುವುದು ಎಂದರು.

ಎಲ್.ಕೆ. ಅಡ್ವಾಣಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ವೆಂಕಯ್ಯ ನಾಯ್ಡು, ಅನಂತ್ ಕುಮಾರ್ ಮತ್ತು ಬಿಜೆಪಿ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳೂ ಸೇರಿದಂತೆ ಅಗ್ರ ನಾಯಕರು ಭಾಗವಹಿಸಿರುವ ಈ ಸಭೆ ಎರಡು ದಿನಗಳ ಕಾಲ ನಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ