ತನ್ನ ಹೆಸರಿಗೆ ಬರೆದಿದ್ದ ಆಸ್ತಿಯ ವೀಲುನಾಮೆಯನ್ನು ರದ್ದುಪಡಿಸಿದ ಮಾವನನ್ನೇ ಕೊಲ್ಲಿಸಿದ 27ರ ಹರೆಯದ ಗೃಹಿಣಿ ಮತ್ತು ಇತರ ಮೂವರಿಗೆ ಸ್ಥಳೀಯ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ. ಆರೋಪಿ ಶೆರಿನ್ ಎಂಬಾಕೆಗೆ 3 ಪಟ್ಟು ಜೀವಾವಧಿ ಶಿಕ್ಷೆ ಹಾಗೂ 6 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಉಳಿದ ಮೂವರಿಗೆ 2 ಪಟ್ಟು ಜೀವಾವಧಿ ಶಿಕ್ಷೆ ಹಾಗೂ 16 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
2009ರ ನವೆಂಬರ್ 8ರಂದು ಈ ಕೊಲೆ ನಡೆದಿತ್ತು. ಶೆರಿನ್ ಎಂಬಾಕೆ ಬಾಸಿತ್ ಅಲಿ (24), ನಿತಿನ್ ಅಲಿಯಾಸ್ ಉಣ್ಣಿ (25) ಮತ್ತು ಶಾನು ರಶೀದ್ (21) ಎಂಬವರ ಮೂಲಕ ಚೆರಿಯನಾಡು ಎಂಬಲ್ಲಿನ ಭಾಸ್ಕರ ಕರಣವರ್ ಎಂಬವರನ್ನು ಕೊಲೆ ಮಾಡಿಸಿದ್ದಳು. ತನ್ನ ಹೆಸರಿನಲ್ಲಿದ್ದ ಆಸ್ತಿಯ ವೀಲುನಾಮೆಯನ್ನು ಮಾವ ರದ್ದುಪಡಿಸಿದ್ದೇ ಈಕೆಯ ಕೋಪಕ್ಕೆ ಕಾರಣ.
ಮಾವೆಳ್ಳಿಕ್ಕರ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದು, ಮಹಿಳೆಗೆ 85 ಸಾವಿರ ರೂ. ಮತ್ತು ಉಳಿದವರಿಗೆ ತಲಾ 80 ಸಾವಿರ ರೂ. ದಂಡವನ್ನೂ ವಿಧಿಸಿದ್ದಾರೆ. ದಂಡ ನೀಡಲು ತಪ್ಪಿದಲ್ಲಿ ಹೆಚ್ಚುವರಿ ಮೂರುವರೆ ವರ್ಷ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ಇದು ಅತ್ಯಂತ ಅಪರೂಪದ ಪ್ರಕರಣ ಎಂದು ಪರಿಗಣಿಸಲ್ಪಡುವುದಿಲ್ಲವಾದುದರಿಂದ, ಮರಣ ದಂಡನೆ ವಿಧಿಸಲಾಗಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.