ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೋಡಿಯ ಜಾಹೀರಾತಿನಿಂದ ಕೆಂಡಾಮಂಡಲರಾದ ನಂತರ ಇದೀಗ ನಿತೀಶ್ ಬಿಜೆಪಿ ಜತೆಗಿನ ಮೈತ್ರಿಯನ್ನು ಕೈಬಿಡುವಂತೆ ಜೆಡಿಯು ಒತ್ತಾಯಿಸಿದೆ.
ಜೆಡಿಯು ಸಂಸದಾರ ಮೊಂಜಾಯಿರ್ ಹಾಸನ್ ಮತ್ತು ರಾಜೀವ್ ರಂಜನ್ ಅವರು ನಿತೀಶ್ ಕುಮಾರ್‌ಗೆ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಳ್ಳುವಂತೆ ಸೂಚಿಸಿದ್ದಾರೆ.
ಬಿಹಾರದ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾದ ಜಾಹೀರಾತು ಗಮನಿಸಿದ ನಂತರ ನಿತೀಶ್ ಕುಮಾರ್ ನಗರದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಆಗಮಿಸಿದ ಮೋದಿ ಸೇರಿದಂತೆ ಬಿಜೆಪಿ ಹಿರಿಯ ಮುಖಂಡರಿಗೆ ಏರ್ಪಡಿಸಿದ್ದ ಔತಣಕೂಟವನ್ನೇ ಶನಿವಾರ ರದ್ದುಗೊಳಿಸಿದ್ದರು.
ಅಲ್ಲದೇ ತಮ್ಮ ಅನುಮತಿ ಇಲ್ಲದೇ ಭಾವಚಿತ್ರ ಬಳಸಿಕೊಂಡು ಜಾಹೀರಾತು ಪ್ರಕಟಿಸಿದ್ದಕ್ಕೆ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದರು. ಆ ನಿಟ್ಟಿನಲ್ಲಿ ನಿತೀಶ್ ಕುಮಾರ್ ಅವರ ಆಪ್ತ ಬೇಗುಸಾರೈ ಸಂಸದ ಮೊನಾಜಿರ್ ಹಾಸನ್, ಬಿಜೆಪಿಯ ಇಂತಹ ಜಾಹೀರಾತುಗಳಿಂದ ಜೆಡಿಯು ಅಧಿಕಾರಕ್ಕೆ ಬರುವ ಅವಕಾಶದಿಂದ ವಂಚಿತವಾಗಲಿದೆ. ಆದ್ದರಿಂದ ಇದೇ ಸರಿಯಾದ ಸಂದರ್ಭ ಎಂದು ನಿರ್ಧರಿ ಕೇಸರಿ ಪಡೆಯೊಂದಿಗಿನ ಮೈತ್ರಿ ಖತಂಗೊಳಿಸಿ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಯೋಚನೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
ಏತನ್ಮಧ್ಯೆ, ಜೆಡಿಯು ಸಂಸದ ರಾಜೀವ್ ರಂಜನ್ ಅಲಿಯಾಸ್ ಲಲನ್ ಸಿಂಗ್, ನಿತೀಶ್ ಕುಮಾರ್‌ಗೆ ಬಿಜೆಪಿಯೊಂದಿಗಿನ ಸಖ್ಯ ತೊರೆಯಲು ದೇವರೇ ಮಾಡಿಕೊಟ್ಟ ಅವಕಾಶವಿದು. ಪತ್ರಿಕೆಗಳಲ್ಲಿ ಪ್ರಕಟವಾದ ಜಾಹೀರಾತು ಬಿಹಾರಕ್ಕೆ ಮೋದಿ ಮತ್ತು ವರುಣ್ ಭೇಟಿ ಎಲ್ಲವನ್ನೂ ಜೆಡಿಯು ವಿರೋಧಿಸಿದ್ದರೂ ಕೂಡ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.