ಜಾರ್ಖಂಡ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಕನಿಷ್ಠ 10 ಮಂದಿ ಮಾವೋವಾದಿಗಳನ್ನು ಕೊಂದು ಹಾಕಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜಾರ್ಖಂಡ್‌ನ ಪಶ್ಚಿಮ ಸಿಂಗಾಬುಂ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಕಾರ್ಯಾಚರಣೆ ಸಂದರ್ಭದಲ್ಲಿ ಆರು ಮಂದಿ ಸಿಬ್ಬಂದಿಗಳು ಕೂಡ ಗಾಯಗೊಂಡಿದ್ದಾರೆ. ನಮ್ಮ ಪ್ರಕಾರ ಡಜನ್‌ಗಳಷ್ಟು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಅಖಿಲೇಶ್ ಝಾ ತಿಳಿಸಿದ್ದಾರೆ.
ಇದುವರೆಗೂ ಯಾವುದೇ ಮೃತದೇಹಗಳು ಪತ್ತೆಯಾಗಿಲ್ಲ. ಬಂಡ್ಗಾನ್ ಪ್ರದೇಶದಲ್ಲಿ ಅಂತ್ಯಗೊಂಡ ಸುಮಾರು 24 ಗಂಟೆಗಳ ಕಾಲ ನಡೆದ ಈ ಎನ್‌ಕೌಂಟರ್‌ನಲ್ಲಿ ನಮ್ಮ ಸಿಬ್ಬಂದಿಗಳೂ ಗಾಯಗೊಂಡಿದ್ದಾರೆ ಎಂದು ಅವರು ವಿವರಣೆ ನೀಡಿದ್ದಾರೆ.
ಗಾಯಗೊಂಡಿರುವ ಭದ್ರತಾ ಸಿಬ್ಬಂದಿಗಳನ್ನು ರಾಂಚಿಯಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ವಯಂಘೋಷಿತ ಮಾವೋವಾದಿ ಕಮಾಂಡರ್ ಕೆಪಿ ಮತ್ತು ಆತನ ಸಹಚರರಾದ ಅನಮೋಲ್ ಮತ್ತು ಅನಿಮೇಶ್ ಸೇರಿದಂತೆ ಹಲವು ನಕ್ಸಲರು ಎನ್‌ಕೌಂಟರ್ ಸಂದರ್ಭದಲ್ಲಿ 5,000 ಸುತ್ತುಗಳಿಗೂ ಹೆಚ್ಚು ಫೈರಿಂಗ್ ನಡೆಸಿದ್ದಾರೆ ಎಂದು ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ರಾಜ್ಯ ಪೊಲೀಸ್, ಸಿಆರ್‌ಪಿಎಫ್, ವಿಶೇಷ ಪಡೆಗಳು ಜಂಟಿಯಾಗಿ ನಡೆಸಿದ್ದವು. ಸುಮಾರು 2,000 ಭದ್ರತಾ ಸಿಬ್ಬಂದಿಗಳು ಇದರಲ್ಲಿ ಪಾಲ್ಗೊಂಡಿದ್ದರು. 900ಕ್ಕೂ ಹೆಚ್ಚು ನಕ್ಸಲರು ಭದ್ರತಾ ಪಡೆಗಳ ವಿರುದ್ಧ ಗುಂಡು ಹಾರಿಸಿದ್ದವು ಎಂದು ವರದಿಗಳು ಹೇಳಿವೆ.
ಕಾರ್ಯಾಚರಣೆಗೆ ಮೂರು ಹೆಲಿಕಾಪ್ಟರುಗಳನ್ನು ಬಳಸಲಾಗಿತ್ತು. ನಕ್ಸಲರ ಸುಮಾರು ಎಂಟು ಕ್ಯಾಂಪುಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಹೇಳಲಾಗಿದೆ.