ಮಗನ ಮೊಬೈಲ್ ಫೋನಿನಿಂದ ಕರೆಯೊಂದನ್ನು ಮಾಡಿದ್ದನ್ನೇ ನೆಪ ಮಾಡಿಕೊಂಡ ಬಾಲಕನೊಬ್ಬ ತನ್ನ ತಂದೆಯನ್ನು ಸುತ್ತಿಗೆಯಿಂದ ಬಡಿದು ಕೊಲೆ ಮಾಡಿದ ಘಟನೆ ಪಶ್ಚಿಮ ಬಂಗಾಲದ ಬರ್ದ್ವಾನ್ ಜಿಲ್ಲೆಯಿಂದ ವರದಿಯಾಗಿದೆ.
ಸ್ಥಳೀಯವಾಗಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸುವ ಖೇಜ್ಮಾತ್ ಶೇಖ್ ಎಂಬಾತ ತನ್ನ ಪುತ್ರ ಮನ್ಸೂರ್ ಶೇಖ್ ಮೊಬೈಲ್ ಮೂಲಕ ಕರೆಯೊಂದನ್ನು ಮಾಡಿದ್ದ. ಆ ಹೊತ್ತಿನಲ್ಲಿ ಮಗ ಮನೆಯಲ್ಲಿರಲಿಲ್ಲ. ಮನೆಗೆ ಬಂದವನೇ ಕರೆ ಮಾಡಿದ್ದನ್ನು ದಾಖಲೆಗಳ ಮೂಲಕ ತಿಳಿದು ಜಗಳಕ್ಕೆ ಇಳಿದಿದ್ದ.
ಇದೇ ವಿಚಾರವಾಗಿ ಅಪ್ಪ-ಮಗನ ನಡುವೆ ಜಗಳ ನಡೆದಿದೆ. ಈ ಸಂದರ್ಭದಲ್ಲಿ ಖೇಜ್ಮಾತ್ ತನ್ನ ಮಗ ಮನ್ಸೂರ್ ಕೆನ್ನೆಗೆ ಒಂದೇಟನ್ನೂ ಹಾಕಿದ್ದ. ಆಕ್ರೋಶಗೊಂಡ ಅಪ್ರಾಪ್ತ ಪುತ್ರ ಸುತ್ತಿಗೆಯಿಂದ ತಂದೆಯ ತಲೆಗೆ ಪ್ರಜ್ಞೆ ತಪ್ಪುವವರೆಗೂ ಬಡಿದಿದ್ದಾನೆ.
ಆ ಹೊತ್ತಿಗೆ ಗಾಬರಿಗೊಳಗಾದ ಮನೆಯವರು ಖೇಜ್ಮಾತ್‌ನನ್ನು ಆಸ್ಪತ್ರೆಗೆ ದಾಖಲಿಸಿದರೂ, ಬದುಕಿಸಲು ಸಾಧ್ಯವಾಗಿಲ್ಲ.
ತನ್ನ ಗಂಡನನ್ನು ಮಗ ಕೊಲೆ ಮಾಡಿದ್ದಾನೆ ಎಂದು ತಾಯಿ ಇದೀಗ ಪೊಲೀಸರಿಗೆ ದೂರು ನೀಡಿದ್ದಾಳೆ. ಬಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಇಲ್ಲಿನ ಪೊಲೀಸ್ ಉಪ ವಿಭಾಗಾಧಿಕಾರಿ ರತೀಂದ್ರನಾಥ್ ಮುಖರ್ಜಿ ತಿಳಿಸಿದ್ದಾರೆ.