ಉತ್ತರ ಭಾರತದ ಗಂಗಾ ನದಿಯಲ್ಲಿ ನಡೆದಿರುವ ಭೀಕರ ದೋಣಿ ದುರಂತದಲ್ಲಿ ಕನಿಷ್ಠ 50 ಮಂದಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದ್ದು, ಇದುವರೆಗೆ 12 ಶವಗಳನ್ನು ಮೇಲೆತ್ತಲಾಗಿದೆ.
ಪ್ರಾರ್ಥನಾ ಕಾರ್ಯಕ್ರಮವೊಂದಕ್ಕಾಗಿ ಉತ್ತರ ಪ್ರದೇಶದ ದುಬಾಹರ್ ಪ್ರದೇಶದಲ್ಲಿನ ದೋಣಿಯೊಂದನ್ನು ಬಾಡಿಗೆ ಪಡೆಯಲಾಗಿತ್ತು. ಈ ದೋಣಿಯಲ್ಲಿ 60 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಇಲ್ಲಿನ ಜಿಲ್ಲಾದಿಕಾರಿ ಸೆಂಥಿಲ್ ಪಾಂಡ್ಯನ್ ತಿಳಿಸಿದ್ದಾರೆ.
ಒಜಾವಾಲಿಯಾ ಘಾಟ್ ಪ್ರದೇಶದಿಂದ ಕಾರ್ಯಕ್ರಮವೊಂದಕ್ಕಾಗಿ ನದಿಯನ್ನು ದಾಟಿ ಮತ್ತೊಂದು ಬದಿಗೆ ಹೋಗಲು ದೋಣಿಯನ್ನು ಬಾಡಿಗೆ ಪಡೆಯಲಾಗಿತ್ತು. ಈ ಸಂದರ್ಭದಲ್ಲಿ ದುರಂತ ಸಂಭವಿಸಿದ್ದು, ನಿರ್ದಿಷ್ಟ ಕಾರಣಗಳು ತಿಳಿದು ಬಂದಿಲ್ಲ ಎಂದು ವರದಿಗಳು ಹೇಳಿವೆ.
ಇದರಲ್ಲಿ ಪ್ರಯಾಣಿಸುತ್ತಿದ್ದ ಮಂದಿ ನಾಲ್ಕು ಕುಟುಂಬಗಳಿಗೆ ಮಾತ್ರ ಸೇರಿದವರಾಗಿದ್ದಾರೆ. ದೋಣಿ ಮಗುಚಿ ಬಿದ್ದುದರಿಂದ ದುರಂತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.