ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭೋಪಾಲ್ ದುರಂತ; ತಕ್ಷಣ ವರದಿಗೆ ಪ್ರಧಾನಿ ಸೂಚನೆ (Bhopal tragedy | Manmohan Singh | P Chidambaram | Warren Anderson)
Bookmark and Share Feedback Print
 
ಭೋಪಾಲ್ ಅನಿಲ ದುರಂತ ಪ್ರಕರಣವನ್ನು ಸರಕಾರವು ನಿಭಾಯಿಸಿದ ಬಗ್ಗೆ ಹತ್ತಾರು ಪ್ರಶ್ನೆಗಳು ಎದ್ದಿರುವ ಹಿನ್ನೆಲೆಯಲ್ಲಿ ಕೊನೆಗೂ ಎಚ್ಚೆತ್ತುಕೊಂಡಿರುವ ಪ್ರಧಾನಿ ಮನಮೋಹನ್ ಸಿಂಗ್, ಹತ್ತು ದಿನಗಳೊಳಗೆ ವರದಿ ಸಲ್ಲಿಸುವಂತೆ ಗೃಹ ಸಚಿವ ಪಿ. ಚಿದಂಬರಂ ನೇತೃತ್ವದ ಸಚಿವರ ಸಮೂಹಕ್ಕೆ ಸೂಚನೆ ನೀಡಿದ್ದಾರೆ.

ಸಚಿವರ ಸಮೂಹವು ತಕ್ಷಣವೇ ಸಭೆ ಸೇರಬೇಕು ಮತ್ತು ಹತ್ತು ದಿನಗಳೊಳಗೆ ಸಂಪುಟಕ್ಕೆ ವರದಿ ಸಲ್ಲಿಸಬೇಕು ಎಂದು ಪ್ರಧಾನಿಯವರು ಸೂಚನೆ ನೀಡಿದ್ದಾರೆ.

ಭೋಪಾಲ್ ದುರಂತಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗಷ್ಟೇ ನ್ಯಾಯಾಲಯ ನೀಡಿದ ತೀರ್ಪು ಮತ್ತು ಸಮಸ್ಯೆಗಳ ಪರಿಹಾರಕ್ಕೆ ಉಳಿದಿರುವ ಮಾರ್ಗಗಳು ಸೇರಿದಂತೆ ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕೆಂದು ಸಚಿವರ ಸಮೂಹವನ್ನು ರಚಿಸಿರುವ ಪ್ರಧಾನಿಯವರು ಆದೇಶ ನೀಡಿದ್ದಾರೆ ಎಂದು ಪ್ರಧಾನ ಮಂತ್ರಿಯವ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

25,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ದುರಂತ ನಡೆದು 26 ವರ್ಷಗಳ ನಂತರ ಯೂನಿಯನ್ ಕಾರ್ಬೈಡ್ ಮಾಜಿ ಅಧ್ಯಕ್ಷ ಕೇಶೂಭ್ ಮಹೀಂದ್ರಾ ಮತ್ತು ಇತರ ಆರು ಮಂದಿಗೆ ಇತ್ತೀಚೆಗಷ್ಟೇ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ಯೂನಿಯನ್ ಕಾರ್ಬೈಡ್ ಮುಖ್ಯಸ್ಥನಾಗಿದ್ದ ವಾರೆನ್ ಆಂಡರ್ಸನ್ ಅಮೆರಿಕಾ ಪರಾರಿಗೆ ಆಗಿನ ರಾಜ್ಯ ಮತ್ತು ಕೇಂದ್ರ ಸರಕಾರವು ಅವಕಾಶ ಮಾಡಿಕೊಟ್ಟಿತ್ತು ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೇಲೆ ವಿರೋಧ ಪಕ್ಷಗಳು ಹರಿಹಾಯುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿಯವರು ತನಿಖೆಗೆ ಆದೇಶ ನೀಡಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಧ್ಯಪ್ರದೇಶದ ಆಗಿನ ಮುಖ್ಯಮಂತ್ರಿ ಅರ್ಜುನ್ ಸಿಂಗ್ ವಿರುದ್ಧ ಸ್ವತಃ ಕಾಂಗ್ರೆಸ್ ಪಕ್ಷದವರಿಂದಲೇ ಟೀಕೆಗಳು ಬರುತ್ತಿದ್ದು, ವಿರೋಧ ಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಂಡಿವೆ.

ಆಂಡರ್ಸನ್ ಪರಾರಿಗೆ ಸ್ಥಳೀಯ ಆಡಳಿತ ಸಹಕರಿಸುವಂತೆ ಅರ್ಜುನ್ ಸಿಂಗ್ ಆದೇಶ ನೀಡಿದ್ದರು ಎಂದು ಇತ್ತೀಚೆಗಷ್ಟೇ ಬಹಿರಂಗವಾಗಿತ್ತು. ಆದರೆ ಅವರು ಕೇಂದ್ರ ಸರಕಾರದ ಆದೇಶವನ್ನಷ್ಟೇ ಪಾಲಿಸಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಸಮರ್ಥಿಸಿಕೊಂಡಿದ್ದರು.

ಅದೇ ಹೊತ್ತಿಗೆ ಆಂಡರ್ಸನ್ ಪ್ರಕರಣಕ್ಕೆ ಹೊಸ ತಿರುವ ನೀಡಿರುವ ವಿತ್ತ ಸಚಿವ ಪ್ರಣಬ್ ಮುಖರ್ಜಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಅರ್ಜುನ್ ಸಿಂಗ್ ಈ ನಿರ್ಧಾರಕ್ಕೆ ಬಂದಿದ್ದರು ಎಂದು ಸಮರ್ಥಿಸಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ