ರಾಜ್ ಠಾಕ್ರೆಯಲ್ಲ, ಧನಾಜಿರಾವ್; ಕುಟುಕಿದ ಬಾಳಾ ಠಾಕ್ರೆ..!
ಮುಂಬೈ, ಸೋಮವಾರ, 14 ಜೂನ್ 2010( 15:15 IST )
ಇದು ರಾಜ್ ಠಾಕ್ರೆ 43ನೇ ಹುಟ್ಟುಹಬ್ಬಕ್ಕೆ ದೊಡ್ಡಪ್ಪ ಬಾಳಾ ಠಾಕ್ರೆ ನೀಡಿರುವ ಉಚಿತ ಉಡುಗೊರೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥನನ್ನು ಶಿವಸೇನೆ ವರಿಷ್ಠ 'ಧನಾಜಿರಾವ್' ಎಂದು ಮರುನಾಮಕರಣ ಮಾಡುವ ಮೂಲಕ ವ್ಯಂಗ್ಯವಾಡಿದ್ದಾರೆ.
ಸಿರಿವಂತಿಕೆ ಹೊಂದಿರುವ ವ್ಯಕ್ತಿಯನ್ನು ಹೊಗಳಲು ಅಥವಾ ಹಣಕ್ಕಾಗಿ ಹಂಬಲಿಸುವವರನ್ನು 'ಧನಾಜಿರಾವ್' ಎಂದು ಕರೆಯಲಾಗುತ್ತದೆ.
ಎಂಎನ್ಎಸ್ ಶಾಸಕರ ಅಮಾನತು ರದ್ದುಗೊಳಿಸುವ ನಿಟ್ಟಿನಲ್ಲಿ ಕಳೆದ ವಾರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಧನಾಜಿರಾವ್ (ರಾಜ್ ಠಾಕ್ರೆ) ಮತ ಚಲಾಯಿಸುವಂತೆ ತನ್ನ ಎಂಎನ್ಎಸ್ ಶಾಸಕರಿಗೆ ಸೂಚಿಸಿರುವುದನ್ನು ಒಪ್ಪಿಕೊಂಡಿದ್ದಾರೆ. ಚುನಾವಣೆಯು ಎಷ್ಟು ಪಾರದರ್ಶಕವಾಗಿತ್ತು ಎನ್ನುವುದು ಎಲ್ಲರಿಗೂ ಗೊತ್ತು ಎಂದು ಶಿವಸೇನೆ ಮುಖವಾಣಿ 'ಸಾಮ್ನಾ'ದಲ್ಲಿ ಠಾಕ್ರೆ ಬರೆದುಕೊಂಡಿದ್ದಾರೆ.
ಚುನಾವಣೆ ನಂತರ ಪ್ರತಿಕ್ರಿಯಿಸಿದ್ದ ಠಾಕ್ರೆ, ಎಂಎನ್ಎಸ್ ಶಾಸಕರನ್ನು ಕಾಂಗ್ರೆಸ್ ಖರೀದಿಸಿದೆ ಎಂದು ಆರೋಪಿಸಿದ್ದನ್ನೂ ಇದೀಗ ಸ್ಮರಿಸಬಹುದಾಗಿದೆ.
83ರ ಹರೆಯದ ಸೇನಾ ಮುಖ್ಯಸ್ಥ ಕಳೆದ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಹಲವರಿಗೆ ಅಡ್ಡ ಹೆಸರುಗಳನ್ನು ಇಡುತ್ತಾ ಬಂದಿದ್ದು, ಇದೀಗ ತನ್ನ ತಮ್ಮನ ಮಗನಿಗೂ ಅದೇ ರೀತಿಯಲ್ಲಿ ಮರುನಾಮಕರಣ ಮಾಡಿದ್ದಾರೆ.
ಈ ಹಿಂದೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಮರಾಠಿ ಗಟ್ಟಿಗನಿಗೆ ಹೋಲಿಸುತ್ತಾ 'ಹಿಟ್ಟಿನ ಗೋಣಿ' ಎಂದು ಠಾಕ್ರೆ ಬಣ್ಣಿಸಿದ್ದರು.
ನಂತರ 90ರ ದಶಕದಲ್ಲಿ ಸೇನೆ ಬಿಟ್ಟು ಕಾಂಗ್ರೆಸ್ ಸೇರಿದ ಛಗನ್ ಭುಜಬಲ್ ಅವರನ್ನು 'ಲೋಖೋಬಾ' ಎಂದೂ, 2005ರಲ್ಲಿ ಕಾಂಗ್ರೆಸ್ ಸೇರಿದ ನಾರಾಯಣ ರಾಣೆಯವರನ್ನು 'ನರೋಬಾ' ಎಂದೂ ಜರೆದಿದ್ದರು.