ರೆಡ್ಡಿಗಳ ಗಣಿ ಸಿಬಿಐ ತನಿಖೆ ಆಂಧ್ರ ಹೈಕೋರ್ಟ್
ನಿಂದ ರದ್ದು
ಹೈದರಾಬಾದ್, ಸೋಮವಾರ, 14 ಜೂನ್ 2010( 16:33 IST )
ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆ ನಡೆಸುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ಆದೇಶಿಸಿದ್ದ ಆಂಧ್ರಪ್ರದೇಶಕ್ಕೆ ತೀವ್ರ ಹಿನ್ನಡೆಯುಂಟಾಗಿದೆ. ಈ ಸಂಬಂಧ ಒಎಂಸಿ ಮನವಿಗೆ ಓಗೊಟ್ಟಿರುವ ಹೈಕೋರ್ಟ್, ಸರಕಾರದ ಅರ್ಜಿಯನ್ನು ವಜಾಗೊಳಿಸಿದೆ.
ಆಂಧ್ರಪ್ರದೇಶದ ಗಡಿಯಲ್ಲಿ ಕರ್ನಾಟಕದ ಸಚಿವರುಗಳಾದ ಜನಾರ್ದನ ರೆಡ್ಡಿ ಮತ್ತು ಕರುಣಾಕರ ರೆಡ್ಡಿ ಮಾಲಕತ್ವದ ಒಎಂಸಿ ಸಂಸ್ಥೆಯು ಅಕ್ರಮ ಗಣಿಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿದ್ದ ತೆಲುಗು ದೇಶಂ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು, ಸಿಬಿಐ ತನಿಖೆಗೆ ಒತ್ತಾಯಿಸಿದ್ದರು.
ಅದರಂತೆ ಆಂಧ್ರಪ್ರದೇಶ ಕಾಂಗ್ರೆಸ್ ಸರಕಾರವು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತ್ತು. ಇದರ ವಿರುದ್ಧ ಒಎಂಸಿ ಆಂಧ್ರ ಹೈಕೋರ್ಟ್ ಮೆಟ್ಟಿಲೇರಿ ಸಿಬಿಐ ತನಿಖೆಗೆ ತಡೆಯಾಜ್ಞೆ ಪಡೆದುಕೊಂಡಿತ್ತು.
ಇದೀಗ ಆಂಧ್ರಪ್ರದೇಶ ಸರಕಾರದ ಬೇಡಿಕೆಯನ್ನು ತಳ್ಳಿ ಹಾಕಿರುವ ಹೈಕೋರ್ಟ್, ಒಎಂಸಿ ಅರ್ಜಿಯನ್ನು ಪುರಸ್ಕರಿಸಿದೆ. ಸರಕಾರದ ಕ್ರಮವನ್ನು ಪ್ರಶ್ನಿಸಿದ್ದ ರೆಡ್ಡಿಗಳ ಮಾಲಕತ್ವದ ಓಬಳಾಪುರಂ ಗಣಿಗಾರಿಕಾ ಕಂಪನಿಗೆ ಜಯ ಲಭಿಸಿದೆ.
ಓಬಳಾಪುರಂ ಗಣಿಗಾರಿಕೆ ಕುರಿತ ಪ್ರಕರಣವು ಪ್ರಸಕ್ತ ಸುಪ್ರೀಂ ಕೋರ್ಟ್‌ನಲ್ಲಿದ್ದು, ಸರ್ವೇ ಆಫ್ ಇಂಡಿಯಾವು ಗಣಿ ಒತ್ತುವರಿ ಕುರಿತು ತನಿಖೆ ನಡೆಸುತ್ತಿದೆ. ಇತ್ತೀಚೆಗಷ್ಟೇ ಅದು ತನ್ನ ವರದಿಯನ್ನು ಸಲ್ಲಿಸಿತ್ತು. ಅದರಂತೆ ಎರಡೂ ರಾಜ್ಯಗಳು ಗಡಿ ಗುರುತಿಸುವಿಕೆ ಕಾರ್ಯವನ್ನು ಮತ್ತೊಮ್ಮೆ ನಡೆಸಬೇಕು ಎಂದು ಶಿಫಾರಸು ಮಾಡಿತ್ತು.