ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭೋಪಾಲ್ ದುರಂತ; ಅರ್ಜುನ್ ಸಿಂಗ್ ಮೇಲೆ ಕ್ರಿಮಿನಲ್ ಕೇಸ್
(Arjun Singh | Madhya Pradesh | Warren Anderson | Bhopal gas tragedy)
1984ರ ಭೋಪಾಲ್ ಅನಿಲ ದುರಂತದ ನಂತರ ಯೂನಿಯನ್ ಕಾರ್ಬೈಡ್ ಮುಖ್ಯಸ್ಥ ವಾರೆನ್ ಆಂಡರ್ಸನ್‌ರನ್ನು ದುರುದ್ದೇಶಪೂರಿತವಾಗಿ ಬಿಡುಗಡೆ ಮಾಡಿದ್ದರೆಂದು ಆರೋಪಿಸಿ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಅರ್ಜುನ್ ಸಿಂಗ್ ವಿರುದ್ಧ ಇಲ್ಲಿನ ಸ್ಥಳೀಯ ನ್ಯಾಯಾಲಯವೊಂದರಲ್ಲಿ ಕ್ರಿಮಿನಲ್ ದೂರು ನೀಡಲಾಗಿದೆ.
ಆಂಡರ್ಸನ್ ಸುರಕ್ಷಿತ ಪರಾರಿಗೆ ಅನುಕೂಲ ಮಾಡಿಕೊಟ್ಟ ಆರೋಪವನ್ನು ಭೋಪಾಲ್‌ನ ಆಗಿನ ಜಿಲ್ಲಾಧಿಕಾರಿ ಮೋತಿ ಸಿಂಗ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸ್ವರಾಜ್ ಪುರಿ ಮೇಲೆ ಹೊರಿಸಲಾಗಿದ್ದು, ಮತ್ತೊಂದು ಪ್ರತ್ಯೇಕ ದೂರು ನೀಡಲಾಗಿದೆ.
PR
ಇಲ್ಲಿನ ಮುಖ್ಯ ನ್ಯಾಯಿಕ ದಂಡಾಧಿಕಾರಿ ಆರ್.ಜಿ. ಸಿಂಗ್ ಅವರಲ್ಲಿ ಮೊದಲ ಖಾಸಗಿ ದೂರನ್ನು ನೀಡಿರುವುದು ನ್ಯಾಯವಾದಿ ಫರ್ಖಾನ್ ಖಾನ್. ಆಂಡರ್ಸನ್ ಬಿಡುಗಡೆಗೆ ಅವಕಾಶ ಮಾಡಿಕೊಟ್ಟ ಕಾರಣಕ್ಕಾಗಿ ಅರ್ಜುನ್ ಸಿಂಗ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಅವರು ತನ್ನ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಈ ಪ್ರಕರಣವನ್ನು ಜೂನ್ 29ರಂದು ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ. ಮೋತಿ ಸಿಂಗ್ ಮತ್ತು ಸ್ವರಾಜ್ ಪುರಿ ವಿರುದ್ಧ 'ಅನಿಲ ಪೀಡಿತ ಮಹಿಳಾ ಉದ್ಯೋಗ ಸಂಘಟನೆ'ಯ ಸಂಚಾಲಕ ಅಬ್ದುಲ್ ಜಬ್ಬಾರ್ ದೂರು ನೀಡಿದ್ದು, ಕ್ರಿಮಿನಲ್ ಆರೋಪಗಳನ್ನು ಹೊರಿಸಬೇಕೆಂದು ಬೇಡಿಕೆಯಿಟ್ಟಿದ್ದಾರೆ. ಇದನ್ನು ಜೂನ್ 24ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುತ್ತದೆ.
ವಾದವಿವಾದಗಳನ್ನು ಆಲಿಸಲಿರುವ ನ್ಯಾಯಾಲಯವು, ಈ ದೂರುಗಳು ವಿಚಾರಣೆಗೆ ಅರ್ಹವೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲಿವೆ.
ಇದೇ ಸಂಬಂಧ ಅರ್ಜುನ್ ಸಿಂಗ್, ಮೋತಿ ಸಿಂಗ್ ಮತ್ತು ಸ್ವರಾಜ್ ಪುರಿ ವಿರುದ್ಧ ಭಾರತೀಯ ಕಮ್ಯೂನಿಸ್ಟ್ ಪಕ್ಷದ (ಸಿಪಿಐ) ರಾಜ್ಯ ಕಾರ್ಯದರ್ಶಿ ಶೈಲೇಂದ್ರ ಶೈಲಿಯವರು ಇಲ್ಲಿನ ಹನುಮಾನ್ ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಸಾಂವಿಧಾನಿಕವಾಗಿ ಆಂಡರ್ಸನ್ ಬಿಡುಗಡೆಗೆ ಕಾರಣರಾಗಿರುವ ಈ ಮೂವರ ವಿರುದ್ಧ ಪ್ರಕರಣ ದಾಖಲಿಸುವಂತೆ ಅವರು ಒತ್ತಾಯಿಸಿದ್ದಾರೆ.
1984ರಲ್ಲಿ ಯೂನಿಯನ್ ಕಾರ್ಬೈಡ್ ಕಂಪನಿಯಲ್ಲಿ ನಡೆದಿದ್ದ ಅನಿಲ ದುರಂತದ ಪರಿಣಾಮ 25,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಪ್ರಕರಣದ ಪ್ರಮುಖ ಆರೋಪಿ ಆಂಡರ್ಸನ್‌ನನ್ನು ಬಂಧಿಸಲಾಗಿತ್ತಾದರೂ, ಕೆಲವೇ ಗಂಟೆಗಳಲ್ಲಿ ಬಿಡುಗಡೆ ಮಾಡಿ ಅಮೆರಿಕಾಕ್ಕೆ ಕಳುಹಿಸುವಲ್ಲಿ ಕಾಂಗ್ರೆಸ್ ಸರಕಾರ ಪ್ರಮುಖ ಪಾತ್ರವಹಿಸಿತ್ತು ಎಂದು ಆರೋಪಿಸಲಾಗಿದೆ.