ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಪ್ಪ ಗೊತ್ತಿಲ್ಲ, ಅಮ್ಮನೂ ಈಗಿಲ್ಲ; ಮೂರು ಹೆಣ್ಮಕ್ಕಳು ಬೀದಿಗೆ (New Delhi | Preeti | Dinesh Tanwar | Meenakshi)
Bookmark and Share Feedback Print
 
ಆ ಮಗುವಿನ ಹೆಸರು ಪ್ರೀತಿ, ಬರೇ ಐದು ವರ್ಷವಷ್ಟೇ ಅವಳ ಪ್ರಾಯ. ಅವಳಿಗಿಬ್ಬರು ಮರಿ ತಂಗಿಯರು. ಈ ಮೂವರು ಮಕ್ಕಳಿಗೂ ಅಪ್ಪನನ್ನು ನೋಡಿದ ನೆನಪಿಲ್ಲ. ಸಲಹುತ್ತಿದ್ದ ಅಮ್ಮನೆಂಬ ಹಿರಿ ಜೀವ ಎಂಟು ದಿನಗಳಾದರೂ ಬಂದಿರಲಿಲ್ಲ. ಫೋನ್ ಮಾಡಿ ಸಾಕಾಗಿ ಹೋಗಿತ್ತು. ಕೊನೆಗೊಂದು ದಿನ ಪೊಲೀಸರಿಂದ ಬಂದ ಉತ್ತರ, ನಿಮ್ಮ ಅಮ್ಮ ಸತ್ತು ಹೋಗಿದ್ದಾಳೆಂದು.

ನಾಲ್ವರಿದ್ದ ಆ ಕುಟುಂಬಕ್ಕೀಗ ಮೂವರಲ್ಲಿ ಹಿರಿಯವಳಾದ ಐದರ ಹರೆಯದ ಪ್ರೀತಿಯೇ ಯಜಮಾನಿ. ಮತ್ತಿಬ್ಬರು ಶಿವಂ (2) ಮತ್ತು ಸೈನಾ (1) ಹಸಿದಾಗಲೆಲ್ಲ ಅಳುವುದನ್ನು ಬಿಟ್ಟರೆ ಬೇರೇನನ್ನೂ ಅರಿಯಲಾರದವರು. ಏನೂ ಇಲ್ಲದ ಈ ಮೂರೂ ಮಕ್ಕಳೀಗ ಅನಾಥವಾಗಿವೆ. ಅಚ್ಚರಿಯ ವಿಚಾರವೆಂದರೆ ಅಪಘಾತಕ್ಕೆ ಕಾರಣನಾದವನು ವಿದೇಶಕ್ಕೆ ಹಾರಿ ಹೋಗಿದ್ದಾನೆ.

ಅದೊಂದು ಕೆಟ್ಟ ದಿನ...
ಇದೇ ಜೂನ್ ತಿಂಗಳಾರಂಭದಲ್ಲಿನ ಕೆಟ್ಟ ಘಳಿಗೆಯೊಂದರಲ್ಲಿ ಈ ಮಕ್ಕಳ ಹೆತ್ತಬ್ಬೆ ಮೀನಾಕ್ಷಿ (27) ಹೋಗುತ್ತಿದ್ದ ಟ್ಯಾಕ್ಸಿಗೆ ಮರ್ಸಿಡೆಸ್ ಬೆಂಜ್ ಕಾರು ಢಿಕ್ಕಿ ಹೊಡೆದು ಪುಡಿಗೈದಿತ್ತು. ಸ್ಥಳದಲ್ಲೇ ಮೀನಾಕ್ಷಿ ಸಾವನ್ನಪ್ಪಿದ್ದಳು.

ಈ ಅಪಘಾತಕ್ಕೆ ಕಾರಣನಾದವನು ದಿನೇಶ್ ತನ್ವರ್ ಎಂಬಾತ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ಶ್ರೀಮಂತ ಅಭ್ಯರ್ಥಿ ಎಂದು ಗುರುತಿಸಿಕೊಂಡಿದ್ದ ಕಾಂಗ್ರೆಸ್ ನಾಯಕ ಕನ್ವರ್ ಸಿಂಗ್ ತನ್ವರ್ ಪುತ್ರನೀತ. ಘಟನೆ ನಡೆಯುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿ ಪೊಲೀಸ್ ಠಾಣೆಗೆ ಶರಣಾಗಿದ್ದ. ಜಾಮೀನು ಪಡೆದುಕೊಂಡು ಗಂಟೆಯಲ್ಲೇ ಬಿಡುಗಡೆಯಾಗಿದ್ದ ಮಗ ಊರಲ್ಲಿದ್ದರೆ ಅಪಾಯ ಎಂದುಕೊಂಡ ಆತನ ಅಪ್ಪ, ಆತನನ್ನು ವಿದೇಶಕ್ಕೆ ಕಳುಹಿಸಿದ್ದಾನೆ!

ಅನಾಥ ಶವವಾಗಿದ್ದಳು ಮೀನಾಕ್ಷಿ...
ಮೀನಾಕ್ಷಿಯ ಜತೆ ವಿಳಾಸ ಅಥವಾ ಯಾವುದೇ ಗುರುತು ಸಿಗದೇ ಇದ್ದುದರಿಂದ ಅಪರಿಚಿತ ಶವವೆಂದು ಶವಾಗಾರದಲ್ಲಿ ಎಸೆಯಲಾಗಿತ್ತು. ಅಪಘಾತದ ರಭಸಕ್ಕೆ ಮೀನಾಕ್ಷಿ ಕೈಯಲ್ಲಿದ್ದ ಮೊಬೈಲ್ ಕೂಡ ನಜ್ಜುಗುಜ್ಜಾಗಿತ್ತು. ಆದರೂ ಕೊನೆಗೂಂದು ದಿನ ಪ್ರೀತಿ ಮಾಡಿದ ಕರೆಯನ್ನು ಪೊಲೀಸನೊಬ್ಬ ಸ್ವೀಕರಿಸಿ, ಅಮ್ಮ ಹೋಗಿರುವ ಆಘಾತಕಾರಿ ಸುದ್ದಿಯನ್ನು ತಿಳಿಸಿದ್ದ.

ಐದರ ಹರೆಯದ ಪ್ರೀತಿಗೆ ಏನೆಲ್ಲ ಅರ್ಥವಾಗಿದೆಯೋ ತಿಳಿದಿಲ್ಲ. ತನ್ನ ತಾಯಿ ಜತೆಗಿಲ್ಲ ಮತ್ತು ಆಕೆ ಶಾಶ್ವತವಾಗಿ ಹೊರಟು ಹೋಗಿದ್ದಾಳೆ ಎಂಬುದನ್ನು ಅಲ್ಪ-ಸ್ವಲ್ಪವಾದರೂ ತಿಳಿದಿರುವವಳು ಆಕೆಯೊಬ್ಬಳೇ. ತನ್ನ ಇಬ್ಬರು ತಂಗಿಯನ್ನು ಮಡಿಲಲ್ಲಿ ಮಲಗಿಸಿಕೊಂಡಿರುವ ಪ್ರೀತಿ ಸಾರ್ವಜನಿಕರಿಂದ, ಸರಕಾರದಿಂದ ಸಹಕಾರದ ನಿರೀಕ್ಷೆಯಲ್ಲಿದ್ದಾಳೆ.

ಸಂಬಂಧಿಕರೇ ಇಲ್ಲದ ಮೃತ ಮೀನಾಕ್ಷಿಯ ಪಕ್ಕದ ಮನೆಯವರೆಲ್ಲ ಸೇರಿ ಮಕ್ಕಳನ್ನು ಸರಕಾರ ನಡೆಸುವ ಮಕ್ಕಳ ಪಾಲನಾ ಕೇಂದ್ರಕ್ಕೆ ಸೇರಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ರಕ್ಷಣೆಯ ಭರವಸೆ ನೀಡಿದ್ದಾರೆ.

ಅಪಘಾತಕ್ಕೆ ಕಾರಣನಾದ ಕಾಂಗ್ರೆಸ್ ಮುಖಂಡನ ಮಗ ಆರಾಮವಾಗಿ ವಿದೇಶದಲ್ಲಿ ಮಜಾ ಮಾಡುತ್ತಿದ್ದಾನೆ ಎಂಬುದು ನಮ್ಮ ವ್ಯವಸ್ಥೆ ಹೇಗೆ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ ಎಂಬುದನ್ನು ಬಿಂಬಿಸುತ್ತಿದ್ದರೆ, ಇತ್ತ ಅಪ್ಪನ ಪ್ರೀತಿಯಿಂದ ಮೊದಲೇ ದೂರವಾಗಿದ್ದ, ಇದ್ದ ಅಮ್ಮನನ್ನೂ ಕಳೆದುಕೊಂಡಿರುವ ಪುಟ್ಟ ಮಕ್ಕಳಿಗಿನ್ನು ತುತ್ತು ಕೊಡುತ್ತೇವೆ ಎನ್ನುವವರು ನಿಜವಾಗಿಯೂ ಕೊಡುತ್ತಾರೆ ಎಂದು ನಿಮ್ಮಲ್ಲೂ ಆಶಾಭಾವನೆಗಳಿವೆಯೇ?

ಪ್ರೀತಿ ಮತ್ತು ಆಕೆಯ ಸಹೋದರಿಯರಿಗೆ ಸಹಾಯಹಸ್ತ ಚಾಚುವಷ್ಟು ಶಕ್ತರು ನೀವಾಗಿದ್ದರೆ ಕೆಳಗಿನ ವಿಳಾಸಕ್ಕೆ ಚೆಕ್ ಕಳುಹಿಸಿಕೊಡಬಹುದು:

Preeti and Her Sisters
c/o The Hope Trust
207, Okhla Industrial Estate, Phase - III New Delhi - 110020.
ಸಂಬಂಧಿತ ಮಾಹಿತಿ ಹುಡುಕಿ