ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರ್ನಾಟಕ ಹೈಕೋರ್ಟ್ ಜಡ್ಜ್‌ಗಳ ಜಗಳಕ್ಕೆ ಸುಪ್ರೀಂ ಬ್ರೇಕ್!
(PD Dinakaran | Karnataka HC | D V Shylendra Kumar | Karnakata CJ)
ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸಿದ್ದ ವಿಭಾಗೀಯ ಪೀಠದ ನ್ಯಾಯಮೂರ್ತಿ ಶೈಲೇಂದ್ರ ಕುಮಾರ್ ತರಾಟೆಗೆ ತೆಗೆದುಕೊಂಡಿರುವ ಸರ್ವೋಚ್ಛ ನ್ಯಾಯಾಲಯ, ಸಿಜೆ ತೀರ್ಪನ್ನು ಬಹಿರಂಗವಾಗಿ ಪ್ರಶ್ನಿಸುವುದು ಕೆಟ್ಟ ಸಂಪ್ರದಾಯ ಎಂದು ಹೇಳಿದೆ.
ಅಲ್ಲದೆ ನ್ಯಾಯಮೂರ್ತಿ ಶೈಲೇಂದ್ರ ಕುಮಾರ್ ನೀಡಿದ್ದ ಜೂನ್ 11ರ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಶೈಲೇಂದ್ರ ಆದೇಶ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ಸೂಚನೆಯಂತೆ ರಿಜಿಸ್ಟ್ರಾರ್ ಜನರಲ್ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿ, ಆದೇಶಕ್ಕೆ ತಡೆ ನೀಡುವಂತೆ ಮೇಲ್ಮನವಿ ಸಲ್ಲಿಸಿದ್ದರು.
ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನಕರನ್ ಅವರ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸುವ ಅಧಿಕಾರ ಇತರ ನ್ಯಾಯಮೂರ್ತಿಗಳಿಗಿಲ್ಲ. ಅವರ ತೀರ್ಪನ್ನು ಬಹಿರಂಗವಾಗಿ ಪ್ರಶ್ನಿಸುವುದು ಕೆಟ್ಟ ಸಂಪ್ರದಾಯ ಎಂದು ಹೇಳಿದ್ದಲ್ಲದೆ, ಶೈಲೇಂದ್ರ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆರ್.ಬಿ. ಬೂದಿಹಾಳ್ ದಾಖಲಿಸಿದ್ದ ಪ್ರಕರಣವನ್ನು ನ್ಯಾಯಮೂರ್ತಿ ರಾಧಾಕೃಷ್ಣನ್ ಮತ್ತು ದೀಪಕ್ ವರ್ಮಾ ನೇತೃತ್ವದ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ವಿಚಾರಣೆಗೆ ಸ್ವೀಕರಿಸಿತ್ತು.
ಏನಿದು ಪ್ರಕರಣ? ತೆರಿಗೆ ಪ್ರಕರಣವೊಂದರ ಮೇಲ್ಮನವಿ ವಿಚಾರಣೆಗೆ ಸಂಬಂಧಿಸಿದಂತೆ ಸಿಜೆ ಮತ್ತು ನ್ಯಾಯಮೂರ್ತಿ ಶೈಲೇಂದ್ರ ನಡುವೆ ಶೀತಲ ಸಮರ ನಡೆದಿತ್ತು.
ಈ ಪ್ರಕರಣವನ್ನು ಮೊದಲು ಮಾರ್ಚ್ ನಾಲ್ಕರಂದು ಶೈಲೇಂದ್ರ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಏಪ್ರಿಲ್ ಎಂಟಕ್ಕೆ ಮುಂದೂಡಿತ್ತು. ಆ ಹೊತ್ತಿಗೆ ಶೈಲೇಂದ್ರ ಅವರನ್ನು ಧಾರವಾಡದ ಸಂಚಾರಿ ಪೀಠಕ್ಕೆ ವರ್ಗಾಯಿಸಲಾಗಿತ್ತು.
ಹಾಗಾಗಿ ಏಪ್ರಿಲ್ ಎಂಟರಂದು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಬೇಕಿದ್ದ ಪ್ರಕರಣಗಳಿಗೆ ಬದಲಿ ದಿನ ನಿಗದಿಪಡಿಸಲು ಕಡತಗಳನ್ನು ದಿನಕರನ್ ಮುಂದೆ ರಿಜಿಸ್ಟ್ರಾರ್ ಮುಂದಿಟ್ಟಿದ್ದರು.
ಅದರಂತೆ ದಿನಕರನ್ ಏಪ್ರಿಲ್ ಎಂಟರ ಬದಲಿಗೆ ಬೇರೆ ದಿನ ನಿಗದಿಪಡಿಸಿದ್ದರು. ಇದೇ ಶೈಲೇಂದ್ರ ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಅದೇ ದಿನದಂದು ವಿಚಾರಣೆ ನಡೆಸುವ ಸಲುವಾಗಿ ತನ್ನನ್ನು ಧಾರವಾಡದಿಂದ ಬೆಂಗಳೂರಿಗೆ ಕರೆಸುವ ಬದಲು, ತನ್ನನ್ನು ಕೇಳದೆ ದಿನಾಂಕ ಬದಲಾವಣೆ ಮಾಡಿರುವುದು ಸರಿಯಲ್ಲ ಎನ್ನುವುದು ಅವರ ವಾದವಾಗಿತ್ತು.
ಇದೇ ಪ್ರಕರಣವನ್ನು ಮುಂದಿಟ್ಟುಕೊಂಡ ಶೈಲೇಂದ್ರ ಅವರು, ಈ ಹಿಂದೆ ಸಂಚಾರಿ ಪೀಠದಲ್ಲಿ ಕಾರ್ಯನಿರ್ವಹಿಸಿದ್ದ ಎಷ್ಟು ನ್ಯಾಯಮೂರ್ತಿಗಳು ನಿಗದಿತ ದಿನದಂದು ಬೆಂಗಳೂರು ಪೀಠಕ್ಕೆ ಆಗಮಿಸಿ ಪ್ರಕರಣಗಳನ್ನು ವಿಚಾರಣೆ ನಡೆಸಿದ್ದಾರೆ ಮತ್ತು ಮುಖ್ಯ ನ್ಯಾಯಮೂರ್ತಿಗಳು ನೀಡಿರುವ ಆದೇಶದ ಪ್ರತಿಗಳನ್ನು ನೀಡುವಂತೆ ಜೂನ್ 9ರಂದು ರಿಜಿಸ್ಟ್ರಾರ್ ಜನರಲ್ ಅವರಿಗೆ ಆದೇಶ ನೀಡಿದ್ದರು.
ಎರಡು ದಿನಗಳ ನಂತರ ವಿಭಾಗೀಯ ಪೀಠದ ಮುಂದೆ ಹಾಜರಾದ ರಿಜಿಸ್ಟ್ರಾರ್, ಪೀಠ ಬಯಸಿರುವ ಮಾಹಿತಿಗೆ ಒಂದು ವಾರ ಕಾಲಾವಕಾಶ ಬೇಕು ಎಂದಿದ್ದರು. ಆಗ ಆಕ್ರೋಶಗೊಂಡ ಶೈಲೇಂದ್ರ ಕುಮಾರ್, ರಿಜಿಸ್ಟ್ರಾರ್ ಮೇಲೆ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ನೀಡಿದ್ದರು.
ಮುಖ್ಯ ನ್ಯಾಯಮೂರ್ತಿಗಳ ಆದೇಶವನ್ನು ಪ್ರಶ್ನಿಸುವ ಯಾವುದೇ ಅಧಿಕಾರ ನ್ಯಾಯಮೂರ್ತಿಗಳಿಗೆ ಇಲ್ಲದೇ ಇರುವುದರಿಂದ ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.