ಮಂಗಳೂರು ವಿಮಾನ ದುರಂತದ ನಂತರ ದಿನಕ್ಕೊಂದರಂತೆ ಅಪಾಯಗಳು ಎದುರಾಗುತ್ತಿದೆ. ನೂರಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತಿದ್ದ ಏರ್ ಇಂಡಿಯಾ ವಿಮಾನವೊಂದು ಇಂದು ರಾಜಧಾನಿಯಲ್ಲಿ ಇಳಿಯುತ್ತಿದ್ದಂತೆ ಚಕ್ರಗಳು ಸ್ಫೋಟಗೊಂಡಿದ್ದು, ಭಾರೀ ಅಪಾಯದಿಂದ ಪಾರಾಗಿರುವ ಸುದ್ದಿ ಬಂದಿದೆ.
ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ 10.58ರ ಸುಮಾರಿಗೆ 100 ಪ್ರಯಾಣಿಕರು ಹಾಗೂ ಆರು ಮಂದಿ ಸಿಬ್ಬಂದಿಯನ್ನು ಹೊತ್ತಿದ್ದ 'ಏರ್ ಇಂಡಿಯಾ'ದ ಮುಂಬೈ-ಭೋಪಾಲ್-ಇಂದೋರ್-ದೆಹಲಿ ವಿಮಾನವು ಇಳಿಯುತ್ತಿದ್ದ ಹೊತ್ತಿನಲ್ಲಿ ಎರಡು ಚಕ್ರಗಳು ಸ್ಫೋಟಗೊಂಡಿದೆ.
ವಿಮಾನವು ನೆಲದಲ್ಲಿ ಪಾರ್ಕಿಂಗ್‌ನತ್ತ ಚಲಿಸುತ್ತಿದ್ದ ವೇಳೆ ಎರಡು ಟೈರುಗಳು ಭಗ್ನಗೊಂಡಿರುವುದನ್ನು ನಿಲ್ದಾಣದಲ್ಲಿನ ಇಂಜಿನಿಯರುಗಳು ಪೈಲಟ್‌ಗೆ ತಿಳಿಸಿದ ತಕ್ಷಣವೇ ಆತ ಏರ್‌ಬಸ್-320 ವಿಮಾನವನ್ನು ತಡೆ ಹಿಡಿದಿದ್ದಾನೆ. ಈ ಕಾರಣದಿಂದ ಭಾರೀ ಅಪಾಯವು ತಪ್ಪಿ ಹೋಗಿದೆ ಎಂದು ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಚಕ್ರಗಳು ಸ್ಫೋಟಗೊಂಡಿದ್ದರಿಂದ ತಕ್ಷಣವೇ ನೀರು ಮತ್ತು ಬುರುಗಿನ ಮೂಲಕ ಯಾವುದೇ ರೀತಿಯಲ್ಲಿ ಅಗ್ನಿ ಅನಾಹುತ ಸಂಭಾವ್ಯತೆಯನ್ನು ತಪ್ಪಿಸಲಾಯಿತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಇಳಿದಿದ್ದಾರೆ.
ಮೂಲಗಳ ಪ್ರಕಾರ ಪೈಲಟ್ ಒಮ್ಮಿಂದೊಮ್ಮೆಲೆ ವಿಮಾನವನ್ನು ಲ್ಯಾಂಡಿಂಗ್ ಮಾಡಿರದ ಕಾರಣ ಇಲ್ಲಿ ಚಕ್ರ ಸ್ಫೋಟ ಸಂಭವಿಸಿಲ್ಲ. ಆದರೆ ವಿಮಾನ ಕೆಳಗಿಳಿದ ನಂತರ ಚಕ್ರಗಳು ಸಂಪೂರ್ಣ ಕುಗ್ಗಿ ಹೋಗಿದ್ದವು.
ಇತ್ತೀಚೆಗಷ್ಟೇ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನವೊಂದು ಲ್ಯಾಂಡಿಂಗ್ ವೇಳೆ ದುರಂತಕ್ಕೀಡಾಗಿದ್ದರಿಂದ 158 ಮಂದಿ ಸಾವನ್ನಪ್ಪಿದ್ದರು. ಬಳಿಕ ವಿಮಾನಗಳು ಇಳಿಯುವ ಹೊತ್ತಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತಿದೆ.