ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಣ್ಣಗಾದ ಜಿನ್ನಾ ವಿವಾದ: ಜಸ್ವಂತ್ ಸಿಂಗ್ ಮರಳಿ ಬಿಜೆಪಿಗೆ (BJP | Jaswant Singh | Sardar Patel | Mohammad Ali Jinnah)
ಪಾಕಿಸ್ತಾನದ ಜನಕ ಮಹಮ್ಮದ್ ಅಲಿ ಜಿನ್ನಾ ಅವರ ಕುರಿತು ತಮ್ಮ ಪುಸ್ತಕದಲ್ಲಿ ಹೊಗಳಿದ್ದಕ್ಕೆ 9ತಿಂಗಳ ಹಿಂದೆ ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದ ಕೇಂದ್ರ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಜಸ್ವಂತ್ ಸಿಂಗ್ ಮರಳಿ ಬಿಜೆಪಿಗೆ ಸೇರಲಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ.
ಜಸ್ವಂತ್ ಅವರು ತಮ್ಮ ಪುಸ್ತಕದಲ್ಲಿ, ಮಹಮ್ಮದ್ ಅಲಿ ಜಿನ್ನಾ ಅವರು ಜಾತ್ಯತೀತವಾದಿಯಾಗಿದ್ದರು. ಅಲ್ಲದೇ ಭಾರತ ಮತ್ತು ಪಾಕ್ ಇಬ್ಭಾಗವಾಗಲು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪಾತ್ರವೂ ಇತ್ತೂ ಎಂಬುದಾಗಿ ಉಲ್ಲೇಖಿಸಿರುವುದು ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿತ್ತು. ಆ ಕಾರಣಕ್ಕಾಗಿ ಜಸ್ವಂತ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ಇದೀಗ ಜಸ್ವಂತ್ ಸಿಂಗ್ ಅವರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಕಳೆದ ವಾರ ಜಸ್ವಂತ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಹಾಗಾಗಿ ಜಸ್ವಂತ್ ಶೀಘ್ರದಲ್ಲೇ ಬಿಜೆಪಿಗೆ ಮರಳಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.
ಈ ಕುರಿತು ಪಕ್ಷದ ಹಿರಿಯ ಮುಖಂಡರು ಚರ್ಚೆ ನಡೆಸಿದ್ದು, ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಲು ತೀರ್ಮಾನಿಸಿದ್ದಾರೆ ಎಂದು ತಿಳಿಸಿದೆ.ಇನ್ನು ಎರಡು-ಮೂರು ದಿನಗಳಲ್ಲಿ ಜಸ್ವಂತ್ ಸೇರ್ಪಡೆಯಾಗಲಿದ್ದು, ಈ ಬಗ್ಗೆ ಪಕ್ಷದ ಅಧ್ಯಕ್ಷರೇ ಮಾಧ್ಯಮಗಳಿಗೆ ಹೇಳಿಕೆ ನೀಡಲಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡ ಅನಂತ್ ಕುಮಾರ್ ತಿಳಿಸಿದ್ದಾರೆ.
ಪಕ್ಷ ತನ್ನ ತತ್ವ-ಸಿದ್ದಾಂತಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲ್ಲ ಎಂದು 2009, ಆಗೋಸ್ಟ್ 19ರಂದು ಜಸ್ವಂತ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ ಸಂದರ್ಭದಲ್ಲಿ ಬಿಜೆಪಿ ಸ್ಪಷ್ಟವಾಗಿ ತಿಳಿಸಿತ್ತು.
ಆದರೆ ತಾನು ಕಳೆದ 30 ವರ್ಷಗಳಿಂದ ಬಿಜೆಪಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ಪುಸ್ತಕದಲ್ಲಿನ ವಿಷಯವನ್ನೇ ಗಂಭೀರವಾಗಿ ತೆಗೆದುಕೊಂಡು ಏಕಾಏಕಿ ಪಕ್ಷದಿಂದ ಉಚ್ಛಾಟಿಸಿದ್ದು ಸರಿಯೇ ಎಂದು ಜಸ್ವಂತ್ ಮಾಧ್ಯಮಗಳ ಮುಂದೆ ಭಾವುಕರಾಗಿ ಪ್ರಶ್ನಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.