ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಧ್ಯವಯಸ್ಕನಿಗೆ ಮದುವೆ; ಹೆತ್ತವರ ಮೇಲೆ ಬಾಲಕಿ ಕೇಸ್! (Child marriage | Puneta village | Sawai Madhopur | Nirma Meena)
Bookmark and Share Feedback Print
 
18 ತುಂಬುವುದರೊಳಗಾಗಿ ಮಗಳಿಗೆ ಮದುವೆ ಮಾಡಿ ಬಿಡುವ ತರಾತುರಿ ಪ್ರದರ್ಶಿಸುವ ಹೆತ್ತವರಿಗೆ 21ನೇ ಶತಮಾನದಲ್ಲೂ ಕೊರತೆಯಿಲ್ಲ. ಅದೇ ರೀತಿ ನಡೆದುಕೊಂಡ ಹೆತ್ತವರ ವಿರುದ್ಧವೇ ಅಪ್ರಾಪ್ತ ಬಾಲೆಯೊಬ್ಬಳು ದೂರು ದಾಖಲಿಸುವ ಧೈರ್ಯ ಮಾಡಿದ್ದು, ಮಹಿಳಾ ಸಂಘಟನೆಗಳಿಂದ ಭಾರೀ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

ಇದು ರಾಜಸ್ತಾನದ ಸವಾಯ್ ಮಧೋಪುರ್ ಜಿಲ್ಲೆಯ ಪುನೇತಾ ಎಂಬ ಗ್ರಾಮದಲ್ಲಿ ನಡೆದಿರುವ ಘಟನೆ. 15ರ ಹರೆಯದ ಬುಡಕಟ್ಟು ಹುಡುಗಿಗೆ ಇಷ್ಟವಿಲ್ಲದಿದ್ದರೂ ಹೆತ್ತವರು ತನಗಿಂತ ಮೂರು ಪಟ್ಟು ಹೆಚ್ಚು ವಯಸ್ಸಾಗಿರುವ ವ್ಯಕ್ತಿಯ ಜತೆ ಮದುವೆ ಮಾಡಲು ಹೊರಟಿದ್ದರು. ಎಲ್ಲಾ ಅಸ್ತ್ರಗಳನ್ನು ಪ್ರಯೋಗಿಸಿದ ನಂತರ ಬಾಲೆ ಕೊನೆಗೆ ಬಳಸಿದ್ದು ಅನಿವಾರ್ಯ ಮಾರ್ಗ ಪೊಲೀಸರಿಗೆ ದೂರು ನೀಡುವುದು. ಅದರಲ್ಲಿ ಯಶಸ್ಸನ್ನೂ ಕಂಡಿದ್ದಾಳೆ.

ಆಕೆ 10ನೇ ತರಗತಿಯ ಹುಡುಗಿ. ಹೆಸರು ನಿರ್ಮಾ ಮೀನಾ. ಇಲ್ಲೇ ಪಕ್ಕದ ಗಂಗಾಪುರ ನಗರದ ಮುಖೇಶ್ ಎಂಬಾತನ ಜತೆ ತಂದೆ-ತಾಯಿ ಮತ್ತು ಸಂಬಂಧಿಕರು ಸೇರಿಕೊಂಡು ಮದುವೆ ನಡೆಸಲು ಸಿದ್ಧತೆ ನಡೆಸಿದ್ದರು. ಈ ಸಂಬಂಧ ಜೂನ್ 10ರಂದು ನಿಶ್ಚಿತಾರ್ಥವೆಂದೂ ನಿಗದಿಯಾಗಿತ್ತು. ಆದರೆ ಅದಕ್ಕೂ ಮೊದಲು ನಿರ್ಮಾ ಪೊಲೀಸರಿಗೆ ದೂರು ನೀಡಿರುವುದರಿಂದ ಇದೀಗ ಮದುವೆ-ನಿಶ್ಚಿತಾರ್ಥ ರದ್ದುಪಡಿಸಲಾಗಿದೆ.

ತಾನು ವಿದ್ಯಾಭ್ಯಾಸವನ್ನು ಮುಂದುವರಿಸಬೇಕೆಂಬ ತನ್ನ ಅಭಿಲಾಷೆಯನ್ನು ತೋಡಿಕೊಂಡರೂ ಹೆತ್ತವರು ಮಧ್ಯವಯಸ್ಕನ ಜತೆ ನನಗೆ ಮದುವೆ ಮಾಡಿಸಲು ಯತ್ನಿಸಿದ್ದರು. ಅಲ್ಲದೆ ತನ್ನ ತಂದೆ ಕುಡುಕನಾಗಿದ್ದು, ಕುಟುಂಬದ ಬಗ್ಗೆ ಯಾವುದೇ ಜವಾಬ್ದಾರಿ ಹೊಂದಿರುವ ಮನುಷ್ಯನಲ್ಲ ಎಂದೂ ದೂರಿಕೊಂಡಿದ್ದಾಳೆ.

ನನಗೀಗಲೇ ಮದುವೆ ಬೇಕಾಗಿಲ್ಲ. ಆ ವಯಸ್ಸೂ ನನಗೆ ತುಂಬಿಲ್ಲ. ಆದರೆ ನನಗೆ ಮದುವೆ ಬೇಡ ಎಂದೆಲ್ಲ ಮನೆಯವರ ಮುಂದೆ ಹೇಳಿದಾಗಲೆಲ್ಲಾ ನನಗೆ ಹೊಡೆಯುವುದು-ಬಡಿಯುವುದು ಮಾಡುತ್ತಿದ್ದರು. ಅಲ್ಲದೆ ಕೊಂದೇ ಹಾಕುವ ಬೆದರಿಕೆಯನ್ನೂ ಹಾಕಿದ್ದರು. ಪೊಲೀಸರು ಮತ್ತು ಜಿಲ್ಲಾಡಳಿತ ಸಹಾಯ ಮಾಡದೇ ಇರುತ್ತಿದ್ದರೆ ನನ್ನ ಬದುಕು ನರಕವಾಗಿ ಹೋಗುತ್ತಿತ್ತು ಎಂದು ನಿರ್ಮಾ ವಿವರಣೆ ನೀಡಿದ್ದಾಳೆ.

ಇಲ್ಲಿನ ಪೊಲೀಸ್ ಉಪ ವರಿಷ್ಠಾಧಿಕಾರಿ ಕರ್ನಿ ಸಿಂಗ್ ರಾಥೋಡ್ ದೂರು ಸ್ವೀಕರಿಸಿದ ನಂತರ ಆಕೆಯ ಗ್ರಾಮಕ್ಕೆ ಪೊಲೀಸರನ್ನು ಕಳುಹಿಸಿದ್ದರು. ಬಾಲ್ಯವಿವಾಹ ನಡೆಸಲು ಸಿದ್ಧತೆ ನಡೆಸುತ್ತಿರುವುದನ್ನು ಖಚಿತಪಡಿಸಿಕೊಂಡ ನಂತರ ಅದನ್ನು ತಡೆಯಲಾಯಿತು ಎಂದು ರಾಥೋಡ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ