ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲ್ ಎನ್‌ಕೌಂಟರ್; ಮಹಿಳೆಯರ ಸಹಿತ ಎಂಟು ಬಲಿ (Eight Maoists killed | police encounter | Maoists | Naxals)
Bookmark and Share Feedback Print
 
ಮಿತಿಮೀರುತ್ತಿರುವ ನಕ್ಸಲರ ಆಟೋಪಗಳಿಗೆ ಕಡಿವಾಣ ಹಾಕುವಲ್ಲಿ ಮಹತ್ವದ ಮುನ್ನಡೆ ಸಾಧಿಸಿರುವ ಭದ್ರತಾ ಪಡೆಗಳು ಪಶ್ಚಿಮ ಬಂಗಾಲದ ಪಶ್ಚಿಮ ಮಿಡ್ನಾಪುರದಲ್ಲಿ ಮೂವರು ಮಹಿಳೆಯರು ಸೇರಿದಂತೆ ಎಂಟು ಮಾವೋವಾದಿಗಳ ಹುಟ್ಟಡಗಿಸಿದ್ದಾರೆ.

ಇಲ್ಲಿನ ದೂಲಿ ಅರಣ್ಯ ಪ್ರದೇಶದಲ್ಲಿ ಕಳೆದ ರಾತೋರಾತ್ರಿ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಕೋಬ್ರಾ ಪಡೆಗಳು ಮತ್ತು ರಾಜ್ಯ ಪೊಲೀಸರು ಪಾಲ್ಗೊಂಡಿದ್ದರು.

ಮಿಡ್ನಾಪುರದಿಂದ 30 ಕಿಲೋ ಮೀಟರ್ ದೂರದಲ್ಲಿರುವ ಲಾಲ್‌ಗಢ ಸಮೀಪ ಅರಣ್ಯ ಪ್ರದೇಶದಲ್ಲಿ ಬಂಡುಕೋರರ ಇರುವಿಕೆಯನ್ನು ತಿಳಿದುಕೊಂಡಿದ್ದ ಭದ್ರತಾ ಪಡೆಗಳು ದಾಳಿ ಮಾಡಿದ್ದವು. ಘಟನೆಯಲ್ಲಿ ಮಾವೋವಾದಿ ನಾಯಕರು ಕೂಡ ಗಂಭೀರವಾಗಿ ಗಾಯಗೊಂಡಿರುವುದರಿಂದ ಇನ್ನೂ ಹೆಚ್ಚು ಮಂದಿ ಸಾವನ್ನಪ್ಪಿರುವ ಸಾಧ್ಯತೆಗಳಿವೆ ಎಂದು ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ವರ್ಮಾ ತಿಳಿಸಿದ್ದಾರೆ.

ಲಾಲ್‌ಗಢ ಮತ್ತು ಸಲ್ಬೋನಿ ಪ್ರದೇಶಗಳ ನಡುವೆ ಕಳೆದ ಹಲವು ಸಮಯಗಳಿಂದ ಮಾವೋವಾದಿಗಳು ಸಕ್ರಿಯರಾಗಿದ್ದರು. ಇಲ್ಲಿನ ಅರಣ್ಯ ಪ್ರದೇಶವೊಂದರ ನಿರ್ದಿಷ್ಟ ಸ್ಥಳದಲ್ಲಿ ಭಾರೀ ಸಂಖ್ಯೆಯ ನಕ್ಸಲರು ಸಭೆ ಸೇರಿದ್ದಾರೆಂಬ ಮಾಹಿತಿ ನಮಗೆ ಲಭಿಸಿತ್ತು. ಸಮೀಪದ ಸುಮಾರು 13 ಮಂದಿ ಗ್ರಾಮಸ್ಥರನ್ನು ವಿಚಾರಣೆ ನಡೆಸಿದ ನಂತರ ಇನ್ನೂ ಹೆಚ್ಚಿನ ನಿಖರ ಮಾಹಿತಿಗಳು ನಮಗೆ ಬಂದಿದ್ದವು ಎಂದು ಅವರು ವಿವರಣೆ ನೀಡಿದ್ದಾರೆ.

ಪ್ರಸಕ್ತ ದುಷ್ಕತ್ಯಗಳಲ್ಲಿ ತೊಡಗಿಸಿಕೊಂಡಿರುವ 'ಪೊಲೀಸ್ ದೌರ್ಜನ್ಯ ವಿರೋಧಿ ಸಮಿತಿ'ಗೆ ಸೇರಿದ ಕೊಲ್ಕತ್ತಾದ ಒಬ್ಬ ವಿಜ್ಞಾನಿ, ಪ್ರಾಧ್ಯಾಪಕ ಮತ್ತು ಲೇಖಕ ಸೇರಿದಂತೆ ಒಟ್ಟು 10 ಮಂದಿಯನ್ನು ಈಗಾಗಲೇ ನಕ್ಸಲ್ ನಿಗ್ರಹ ಪಡೆಗಳು ವಶಕ್ಕೆ ತೆಗೆದುಕೊಂಡಿವೆ. ಇವರೆಲ್ಲರೂ ನಕ್ಸಲರಿಗೆ ಬೆಂಬಲ ನೀಡುತ್ತಿದ್ದವರು ಎಂದು ಪೊಲೀಸರು ಆರೋಪಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ