ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕಿಸ್ತಾನ ಉಗ್ರರ ಕ್ಯಾಂಪುಗಳಲ್ಲಿ ಕರ್ನಾಟಕದ ಯುವಕರು..! (Karnataka | Pakistan | Terror camps | PoK)
Bookmark and Share Feedback Print
 
ಕರ್ನಾಟಕ, ಕೇರಳ ಮತ್ತು ಆಂಧ್ರಪ್ರದೇಶಗಳಿಗೆ ಸೇರಿದ ಹಲವು ಮುಸ್ಲಿಂ ಯುವಕರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಕಚರ್ಬಾನ್ ಪ್ರದೇಶದಲ್ಲಿ ಭಯೋತ್ಪಾದನಾ ತರಬೇತಿ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಹಿಜ್ಬುಲ್ ಮುಜಾಹಿದೀನ್ ಉಗ್ರನೊಬ್ಬ ಪೊಲೀಸರಲ್ಲಿ ಬಾಯ್ಬಿಟ್ಟಿದ್ದಾನೆ.

ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯ ಮಂಡಿ ಉಪವಿಭಾಗದ ನಲ್ಲಾ ಬಾನ್ ಪೋಸ್ಟ್ ಮೂಲಕ ಇದೇ ವರ್ಷದ ಮೇ ತಿಂಗಳಲ್ಲಿ ಭಾರತ ಪ್ರವೇಶಿಸಲು ಯತ್ನಿಸುತ್ತಿದ್ದಾಗ ರಾಷ್ಟ್ರೀಯ ರೈಫಲ್ಸ್ ಪಡೆಗೆ ಸಿಕ್ಕಿಬಿದ್ದಿದ್ದ ಹಿಜ್ಬುಲ್ ಮುಜಾಹಿದೀನ್ ಉಗ್ರ ಮುಹಮ್ಮದ್ ಅಶ್ರಫ್ ಎಂಬಾತನೇ ಇದನ್ನು ಬಹಿರಂಗಪಡಿಸಿರುವುದು.

ಭಾರತದವನೇ ಆಗಿರುವ ಅಶ್ರಫ್ ತನ್ನ 13ರ ಹರೆಯದಲ್ಲಿ ಮನೆಯಿಂದ ಹೊರಬಿದ್ದು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಪ್ರವೇಶಿಸಿದ್ದ. ಅಲ್ಲಿ ಭಯೋತ್ಪಾದಕರ ಕ್ಯಾಂಪ್‌ನಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ ತಪ್ಪಿಸಿಕೊಂಡು ನಂತರ ಸ್ಥಳೀಯ ಹುಡುಗಿ ಆಸಿಮಾ ಎಂಬಾಕೆಯನ್ನು ವಿವಾಹವಾಗಿದ್ದ. ಬಳಿಕ ಇದೀಗ ಪಾಕಿಸ್ತಾನದ ಐಎಸ್ಐ ಮತ್ತು ಭಯೋತ್ಪಾದಕ ಕಮಾಂಡರುಗಳಿಂದ ತಪ್ಪಿಸಿಕೊಳ್ಳಲು ಮರಳಿ ದೇಶಕ್ಕೆ ಬರುವ ನಿರ್ಧಾರಕ್ಕೆ ಬಂದು ಭಾರತೀಯ ಭದ್ರತಾ ಪಡೆಗಳಿಗೆ ಸಿಕ್ಕಿ ಬಿದ್ದಿದ್ದಾನೆ.

ಆತ ನೀಡಿರುವ ಮಾಹಿತಿಗಳ ಪ್ರಕಾರ ದಕ್ಷಿಣ ಭಾರತದ ರಾಜ್ಯಗಳಿಗೆ ಸೇರಿದ ಸುಮಾರು 24 ಯುವಕರಿಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದನಾ ತರಬೇತಿಗಳನ್ನು ನೀಡಲಾಗುತ್ತಿದೆ.

ಅವರೆಲ್ಲರೂ ಡೆಕ್ಕನ್‌ಗೆ (ದಕ್ಷಿಣ ಭಾರತ) ಸೇರಿದವರಾಗಿದ್ದು, ಕಚರ್ಬಾನ್ ಪ್ರದೇಶದಲ್ಲಿ ಲಷ್ಕರ್ ಇ ತೋಯ್ಬಾ ಪ್ರತ್ಯೇಕವಾಗಿ ತರಬೇತಿ ನೀಡುತ್ತಿದೆ. ಉಗ್ರ ತರಬೇತಿಗೆಂದು ಜಮ್ಮು-ಕಾಶ್ಮೀರದಿಂದ ಬಂದಿರುವ ಭಾರೀ ಪ್ರಮಾಣದ ಯುವಕರಿಗೆ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಗುತ್ತಿಲ್ಲ. ಅವರಿಗೆ ಉನ್ನತ ತರಬೇತಿಯನ್ನು ಐವರು ಲಷ್ಕರ್ ಕಮಾಂಡರುಗಳು ನೀಡುತ್ತಿದ್ದಾರೆ ಎಂದು ಆಶ್ರಫ್ ಹೇಳಿದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಅದೇ ಹೊತ್ತಿಗೆ ಕಳೆದ ಹಲವು ವರ್ಷಗಳಿಂದ ವಿವಿಧ ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡಿರುವ ಆಶ್ರಫ್ ತನ್ನನ್ನು ನಿಯಂತ್ರಿಸುತ್ತಿದ್ದ ಕೆಲವು ವ್ಯಕ್ತಿಗಳು ದಕ್ಷಿಣ ಭಾರತದವರು ಮತ್ತು ನಿಷೇಧಿತ ಉಗ್ರಗಾಮಿ ಸಂಘಟನೆ 'ಸಿಮಿ'ಯೊಂದಿಗೆ ಸಂಬಂಧ ಹೊಂದಿದವರು ಎಂಬುದನ್ನು ತಿಳಿದುಕೊಂಡಿದ್ದಾನೆ.

ಆತನ ಪ್ರಕಾರ ಕರ್ನಾಟಕ, ಕೇರಳ ಮತ್ತು ಆಂಧ್ರಪ್ರದೇಶಗಳ 18ರಿಂದ 28 ವರ್ಷಗಳ ನಡುವಿನ ಯುವಕರು ನೇಪಾಳ ಅಥವಾ ಬಾಂಗ್ಲಾದೇಶಗಳ ಮೂಲಕ ಪಾಕ್ ಆಕ್ರಮಿತ ಕಾಶ್ಮೀರ ತಲುಪಿದ್ದಾರೆ. ಇವರಿಗೆ ಆಧುನಿಕ ಶಸ್ತ್ರಾಸ್ತ್ರ ಬಳಕೆ ಮತ್ತು ಬಾಂಬ್ ತಯಾರಿಕೆ ಕುರಿತು ತರಬೇತಿ ನೀಡಲಾಗುತ್ತಿದೆ.

ಗುಜರಾತ್ ಮತ್ತು ಮಹಾರಾಷ್ಟ್ರಗಳಿಂದಲೂ ಸುಮಾರು 20ರಷ್ಟು ಯುವಕರು ತರಬೇತಿಗೆಂದು ಬಂದಿದ್ದಾರೆ. ತಾನು 1999ರಲ್ಲಿ ಇತರ 20 ಮಂದಿಯ ಜತೆ ಕಾಶ್ಮೀರದಿಂದ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಗಿದ್ದೆ ಎಂದು ಅಶ್ರಫ್ ವಿವರಣೆ ನೀಡಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ