ಒಂದು ಕಾಲದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದರೂ ನಂತರದ ದಿನಗಳಲ್ಲಿ ತಾವೇ ಸೃಷ್ಟಿಸಿಕೊಂಡ ಆವಾಂತರಗಳ ಕಾರಣಗಳಿಂದಾಗಿ ಪಕ್ಷದಿಂದ ಹೊರಗೆ ಹೋಗಿದ್ದ ಮೂಲನಿವಾಸಿಗಳು ಮರಳಿ ಗೂಡು ಸೇರುತ್ತಿರುವುದು ಖಾತ್ರಿಯಾಗುತ್ತಿದೆ. ಕೆಲಸ ಸಮಯದ ಹಿಂದೆ ಹೊರದಬ್ಬಿಸಿಕೊಂಡಿದ್ದ ಹಿರಿಯ ನಾಯಕ ಜಸ್ವಂತ್ ಸಿಂಗ್‌ರ ನಂತರ ಇದೀಗ ಉಮಾ ಭಾರತಿಯವರೂ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನದ ನಿರ್ಮಾತೃ ಮುಹಮ್ಮದ್ ಆಲಿ ಜಿನ್ನಾರನ್ನು ಹೊಗಳುವ ಮೂಲಕ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದ ಜಸ್ವಂತ್‌ರನ್ನು ಮರಳಿ ಪಕ್ಷಕ್ಕೆ ತೆಗೆದುಕೊಳ್ಳುವ ನಿರ್ಧಾರವನ್ನು ಬಿಜೆಪಿ ತೆಗೆದುಕೊಂಡಿದೆ ಎಂದು ನಿನ್ನೆಯಷ್ಟೇ ವರದಿಗಳು ಹೇಳಿದ್ದವು. ಅದರ ಬೆನ್ನಿಗೆ ಇದೀಗ ಎಲ್.ಕೆ. ಅಡ್ವಾಣಿಯವರು ಉಮಾ ಭಾರತಿಯವರ ಜತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಇದಕ್ಕೆ ಪುಷ್ಠಿಯೆಂಬಂತೆ ನವದೆಹಲಿಯಿಂದ ಅಡ್ವಾಣಿಯವರು ಛತ್ತೀಸ್‌ಗಢಕ್ಕೆ ಹೊರಟಿದ್ದ ವಿಶೇಷ ವಿಮಾನದಲ್ಲಿ ಉಮಾ ಭಾರತಿಯವರು ಪ್ರಯಾಣಿಸಿರುವುದು. ರಾಯ್ಪುರದ ಮಾನಾ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಅಡ್ವಾಣಿ, ರಾಜನಾಥ್ ಸಿಂಗ್ ಮತ್ತು ರವಿಶಂಕರ್ ಪ್ರಸಾದ್ ಅವರೊಂದಿಗೆ ಉಮಾ ಭಾರತಿ ಕೂಡ ವಿಮಾನದಿಂದ ಇಳಿದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಬಿಜೆಪಿ ಮೂಲಗಳ ಪ್ರಕಾರ ಈ ನಾಲ್ವರು ಮುಖಂಡರು ಸುಮಾರು 40 ನಿಮಿಷಗಳ ಕಾಲ ರಾಜ್ಯ ರಾಜಧಾನಿಯಲ್ಲಿದ್ದರು. ಬೆಳಗ್ಗಿನ ಉಪಹಾರವನ್ನು ಜತೆಗೆ ಮುಗಿಸಿದ ನಂತರ ಅವರು ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್ ತಂದೆಯವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ತೆರಳಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ನಂತರ ಬಿಜೆಪಿ ಪುನರ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಗತಕಾಲದ ವೈಭವವನ್ನು ಮರುಕಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿತ್ತು. ಇದೇ ನಿಟ್ಟಿನಲ್ಲಿ ಅಧ್ಯಕ್ಷ ಹುದ್ದೆಯನ್ನು ಮಹಾರಾಷ್ಟ್ರದ ನಿತಿನ್ ಗಡ್ಕರಿಯವರಿಗೆ ನೀಡಲಾಗಿತ್ತು.
ಅವರು ಅಧ್ಯಕ್ಷರಾದ ನಂತರ ವರುಣ್ ಗಾಂಧಿಯಂತಹ ಫೈರ್ ಬ್ರಾಂಡ್ ರಾಜಕಾರಣಿಯನ್ನು ರಾಷ್ಟ್ರೀಯ ಸಮಿತಿಗೆ ಸೇರಿಸಿಕೊಳ್ಳಲಾಗಿತ್ತು. ಅದೇ ರೀತಿಯಲ್ಲಿ ಜಸ್ವಂತ್ ಸಿಂಗ್ ಅವರನ್ನೂ ಸೇರಿಸಿಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ. ಮುಂದಿನ ಸರದಿ ಉಮಾ ಭಾರತಿ ಮತ್ತು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್‌ರದ್ದು ಎಂದು ಬಿಜೆಪಿ ವಲಯದಿಂದಲೇ ಸುದ್ದಿ ಬರುತ್ತಿದೆ.
ಭಿನ್ನಮತಗಳನ್ನು ಪಕ್ಷದ ವೇದಿಕೆಯಲ್ಲೇ ಪರಿಹರಿಸಿಕೊಂಡು, ಈಗಾಗಲೇ ನಡೆದು ಹೋಗಿರುವ ಅಪಾರ ನಷ್ಟವನ್ನು ತುಂಬಿಸಿಕೊಳ್ಳುವ ಯೋಜನೆ ಗಡ್ಕರಿಯವರದ್ದು, ಇದೇ ನಿಟ್ಟಿನಲ್ಲಿ ಪಕ್ಷ ಕಾರ್ಯಪ್ರವೃತ್ತವಾಗಿದೆ. ಆ ಮೂಲಕ ಮುಂದಿನ ಮಹಾ ಚುನಾವಣೆಗಳಿಗೆ ಪಕ್ಷವು ಈಗಲೇ ಸಿದ್ಧತೆ ನಡೆಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.