ಮುಂದೆ ನಡೆಯಲಿರುವ ಘಟನೆಗಳ ಕುರಿತು ಚಾಚೂ ತಪ್ಪದೆ ಭವಿಷ್ಯ ಹೇಳುತ್ತಿರುವ, ಹಿಂದಿನ ಜನ್ಮದಲ್ಲಿ ತಾನು ಬೌದ್ಧ ಧರ್ಮಗುರು ದಲೈ ಲಾಮಾ ಅವರ ಶಿಷ್ಯನಾಗಿದ್ದೆ ಎಂದು ಹೇಳುತ್ತಿರುವ ಎಂಟರ ಹರೆಯದ ಅಚ್ಚರಿಯ ಕೂಸು 'ಬಾಲದೇವತೆ' ಆಧ್ಯಾತ್ಮಿಕತೆ ಸೇರಿದಂತೆ ಅಪಾರ ಜ್ಞಾನ ಸಂಪಾದಿಸಿದ್ದರೂ ಶಾಲೆಗೆ ಸೇರಿಸಲೇಬೇಕು ಎಂದು ಮಾನವ ಹಕ್ಕುಗಳ ಆಯೋಗ ಕ್ಯಾತೆ ತೆಗೆದಿದ್ದು, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.
ಅಗಾಧ ಬುದ್ಧಿಮತ್ತೆಯನ್ನು ಪ್ರದರ್ಶಿಸುತ್ತಿರುವ ಈ ಮಗುವಿನ ಹೆಸರು ಶಾಂಭವಿ. ನೂರಾರು ಘಟನೆಗಳ ಕುರಿತು ಭವಿಷ್ಯ ಹೇಳಿ ಅಚ್ಚರಿಗೆ ಕಾರಣಳಾಗಿರುವ ಈ ಪೋರಿ ದೇಶ-ವಿದೇಶಗಳಲ್ಲಿ ಪ್ರಸಿದ್ಧಿಯಾಗಿ ಹಲವು ವರ್ಷಗಳೇ ಕಳೆದಿವೆ. ಈಕೆಯ ದರ್ಶನಕ್ಕೆಂದೇ ಜನ ಸಾಲುಗಟ್ಟಿ ಹಗಲು-ರಾತ್ರಿ ನಿಲ್ಲುವಷ್ಟು ಪ್ರಸಿದ್ಧಿ ಪಡೆದಿದ್ದಾಳೆ. ಜನ ಆಕೆಯನ್ನು ದೇವತೆಯೆಂದೇ ಪೂಜಿಸುತ್ತಾ ಉಘೇ ಉಘೇ ಎನ್ನುತ್ತಿದ್ದಾರೆ.
ಆದರೆ ಇದಕ್ಕೆಲ್ಲ ಆಕ್ಷೇಪಿಸುತ್ತಿರುವ ಆಂಧ್ರಪ್ರದೇಶ ಮಾನವ ಹಕ್ಕುಗಳ ಆಯೋಗ, ಶಾಂಭವಿಯನ್ನು ದೇವತೆಯೆಂದು ಬಿಂಬಿಸುವ ಕಾರ್ಯಕ್ರಮಗಳನ್ನು ನಡೆಸುವುದಾಗಲೀ, ಆಕೆಯನ್ನು ಪೂಜಿಸುವುದಾಗಲಿ ಮಾಡಕೂಡದು ಎಂದು ಹೇಳಿದೆ. ಅಲ್ಲದೆ ಆಕೆಯನ್ನು ಸರಕಾರಿ ನಿಯಮಗಳ ಪ್ರಕಾರ ಶಾಲೆಗೆ ಕಳುಹಿಸಲೇ ಬೇಕು ಎಂದು ಆದೇಶಿಸಿದೆ.
ಇದರ ವಿರುದ್ಧ ಆಕೆಯ ಪೋಷಕರು ನ್ಯಾಯಾಯಲಯಕ್ಕೆ ತೆರಳಿದ್ದಾರೆ. ನಮ್ಮ ಪುತ್ರಿಗೆ ಫ್ರೆಂಚ್, ಇಂಗ್ಲೀಷ್ ಸೇರಿದಂತೆ ಹಲವು ಭಾಷೆಗಳು ಸರಾಗ. ಆಕೆಗೆ ವೇದಗಳು ಗೊತ್ತು, ಜ್ಯೋತಿಷ್ಯಶಾಸ್ತ್ರವೂ ಗೊತ್ತು. ನಾವು ಆಕೆಯನ್ನು ಆಶ್ರಮದಲ್ಲೇ ಓದಿಸುತ್ತಿದ್ದೇವೆ ಎಂದು ವಾದಿಸುತ್ತಿದ್ದಾರೆ.
ಯಾರೀ ಶಾಂಭವಿ..? ಈಕೆ ಹುಟ್ಟಿದ್ದು 2002ರಲ್ಲಿ, ದೇವಳಗಳ ನಗರಿ ತಿರುಪತಿಯಲ್ಲಿ. ತಾಯಿಯ ಹೆಸರು ಉಷಾ ರಾಣಿ. ತಂದೆ ಯೋಗ ಗುರು ಸೌಮ್ಯ ಆಚಾರ್ಯ. ಬೆಂಗಾಲಿ ಬ್ರಾಹ್ಮಣರ ಹುಡುಗಿಯಾಗಿರುವ ಈಕೆ ನಾಲ್ಕು ವರ್ಷವಾಗುವವರೆಗೆ ಬೆಳೆದದ್ದು ವಾರಣಾಸಿಯಲ್ಲಿ.
ಶಾಂಭವಿಯ ತಾಯಿ ಉಷಾ ರಾಣಿ ಆಂಧ್ರಪ್ರದೇಶದವರು. ಮೊದಮೊದಲು ತಾನು ಕೇವಲ ಪೋಷಕಿ ಎನ್ನುತ್ತಿದ್ದ ಉಷಾರಾಣಿ, ಮಾನವ ಹಕ್ಕುಗಳ ಆಯೋಗವು ಶಾಂಭವಿಯನ್ನು ಬಿಡುಗಡೆ ಮಾಡಬೇಕೆಂದು ಕೋರ್ಟ್‌ಗೆ ಹೋದ ನಂತರ 'ನಾನೇ ಅವಳ ತಾಯಿ' ಎಂದು ಘೋಷಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಮೊದಲ ಗಂಡ ಸಾವನ್ನಪ್ಪಿದ ನಂತರ ತಾನು ವಾರಣಾಸಿಯ ಆಶ್ರಮಕ್ಕೆ ತೆರಳಿದ್ದೆ. ಆ ಸಂದರ್ಭದಲ್ಲಿ ಯೋಗ ಗುರು ಸೌಮ್ಯ ಆಚಾರ್ಯ ಅವರನ್ನು ಮದುವೆಯಾಗಿದ್ದೆ. ಅವರಿಗೆ ಹುಟ್ಟಿದ ಮಗುವೇ ಶಾಂಭವಿ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನಾನು ದಲೈ ಲಾಮಾ ಶಿಷ್ಯನಾಗಿದ್ದೆ... ನಾನು ಈ ಹಿಂದಿನ ದಲೈ ಲಾಮಾ ಅವರ ಗೆಳೆಯನಾಗಿದ್ದೆ ಎಂದು ಹೇಳುತ್ತಿರುವ ಶಾಂಭವಿ ಪ್ರಚಂಡ ಶಿಶು ಎನ್ನುವುದರಲ್ಲಿ ಯಾವುದೇ ಸಂಶಯಗಳಿಲ್ಲ. ಈಗಾಗಲೇ ಹತ್ತು ಹಲವು ವಿಚಾರಗಳನ್ನು ತಿಳಿದುಕೊಂಡು ವಯಸ್ಸಿಗೆ ಮೀರಿದ ಪ್ರೌಢಿಮೆ ಮೆರೆಯುತ್ತಿರುವ ಈ ಕೂಸನ್ನು ಕಳೆದ ವರ್ಷವಷ್ಟೇ ಈಗಿನ ದಲೈ ಲಾಮಾ (14ನೇ ದಲೈ ಲಾಮಾ - ತೆಂಜಿನ್ ಗಿತ್ಸೋ) ಭೇಟಿಯಾಗಿದ್ದರು.
ತಾನು ಮಹಾನ್ ಸಾಧಕ ಕ್ರಿಯಾ ಯೋಗಿ ಲಹಿರಿ ಮಹಾಸಾಯ ಅವರ ಅವತಾರ ಎಂದು ಶಾಂಭವಿ ಹೇಳುತ್ತಿದ್ದಾಳೆ. ಉತ್ತರ ಪ್ರದೇಶದ ವಾರಣಾಸಿಯ ಲಹಿರಿ ಮಹಾಸಾಯ ಅವರು 1828ರಿಂದ 1895ರವರೆಗೆ ಬದುಕಿದ್ದರು. ಎಲ್ಲರಂತೆ ಸನ್ಯಾಸಿಯಾಗಿರುವ ಬದಲು ಸಂಸಾರಸ್ಥರಾಗಿದ್ದುಕೊಂಡೇ ಕ್ರಿಯಾ ಯೋಗವನ್ನು ಸಿದ್ಧಿಸಿಕೊಂಡಿದ್ದ ಮಹಾಸಾಯ ಆಂಗ್ಲ ಸರಕಾರದ ಮಿಲಿಟರಿ ಇಂಜಿನಿಯರಿಂಗ್ ಇಲಾಖೆಯಲ್ಲಿ ಅಕೌಂಟೆಂಟ್ ಆಗಿ ಕಾರ್ಯ ನಿರ್ವಹಿಸಿದ್ದವರು.
ಇದೇ ಮಹಾಸಾಯ ಆಗಿನ ದಲೈ ಲಾಮಾ (10ರಿಂದ 13ನೇ ದಲೈ ಲಾಮಾಗಳು) ಶಿಷ್ಯರಾಗಿದ್ದರು ಎಂದು ಹೇಳಲಾಗುತ್ತಿದೆ. ತಾನು ಹಿಂದಿನ ಜನ್ಮದಲ್ಲಿ ದಲೈ ಲಾಮಾ ಅವರ ಸ್ನೇಹಿತನಾಗಿದ್ದೆ, ಅವರು ಗುರುವಾಗಿದ್ದರು ಎಂದೆಲ್ಲಾ ಬಾಲಕಿ ಶಾಂಭವಿ ಹೇಳುತ್ತಿದ್ದಾಳೆ.
ಈ ಮಗು ಅದ್ಭುತ ಎಂದಿದ್ದರು... ವಾರಣಾಸಿಯಲ್ಲೇ ಬೆಳೆದಿದ್ದ ಶಾಂಭವಿ ವರ್ಷ ಎರಡಾದರೂ ಮಾತನಾಡದೆ, ನಡೆಯದೆ ಮನೆಯವರಿಗೆ ಚಿಂತೆ ಹುಟ್ಟಿಸಿದ್ದಳು. ಈ ಸಂದರ್ಭದಲ್ಲಿ ಜ್ಯೋತಿಷಿಗಳಿಗೆ ಆಕೆಯ ಜಾತಕವನ್ನು ತೋರಿಸಲಾಗಿತ್ತು. ಅದನ್ನು ನೋಡಿದ ಜ್ಯೋತಿಷಿಗಳು, ಈ ಮಗು ವಿಶೇಷ ಶಕ್ತಿಯುಳ್ಳದ್ದಾಗಿದೆ ಎಂದು ಹೇಳಿದ್ದರು.
ಅವರ ಸಲಹೆಯಂತೆ ಶಾಂಭವಿಯನ್ನು ತಮಿಳುನಾಡಿನ ಕುಂಭಕೋಣಂನಲ್ಲಿನ ಮಾಸ್ಟರ್ ಸಿವಿವಿ ಆಶ್ರಮಕ್ಕೆ ಕರೆದುಕೊಂಡು ಹೋಗಲಾಗಿತ್ತು. ಆಶ್ರಮಕ್ಕೆ ಬರುತ್ತಿದ್ದಂತೆ, 'ಎಂಗ ಮ್ಯಾಂಗೋ ಟ್ರೀ ಎಂಗ ಪಯಿಡ್ಚೀ..?' (ಇಲ್ಲಿ ಮಾವಿನ ಮರ ಎಲ್ಲಿದೆ?) ಎಂದು ಇದ್ದಕ್ಕಿದ್ದಂತೆ ಮಾತು ಆರಂಭಿಸಿದ್ದಳು. ಮಾತೇ ಆಡದ ಶಾಂಭವಿ ತಮಿಳು ಕಲಿತದ್ದು ಹೇಗೆ ಎಂದು ಹೆತ್ತವರು ಈ ಸಂದರ್ಭದಲ್ಲಿ ದಿಗ್ಮೂಢರಾಗಿದ್ದರು.
ಪ್ರಸಕ್ತ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಹಾನಂದಿ ಸಮೀಪದ ಸೂರ್ಯನಂದಿ ಎಂಬ ಪುರಾತನ ದೇವಸ್ಥಾನದಲ್ಲಿದ್ದಾಳೆ ಶಾಂಭವಿ. ಆಗಾಗ ವಾರಣಾಸಿಗೂ ಹೋಗಿ ಬರುತ್ತಿದ್ದಾಳೆ. ಆಕೆಯ ದರ್ಶನಕ್ಕೆ ದೇವಳದಲ್ಲಿ ಭಾರೀ ಸಂಖ್ಯೆಯ ಜನ ಸೇರುತ್ತಿದ್ದಾರೆ.
2012ರಲ್ಲಿ ಟಿಬೆಟ್‌ಗೆ ಸ್ವಾತಂತ್ರ್ಯ? ಶಾಂಭವಿಯ ಪ್ರಕಾರ ಇದೀಗ ಚೀನಾ ಕಪಿಮುಷ್ಠಿಯಲ್ಲಿರುವ ಟಿಬೆಟ್‌ಗೆ 2012ರಲ್ಲಿ ಸ್ವಾತಂತ್ರ್ಯ ದೊರಕುತ್ತದೆ. ಹಾಗೆಂದು ಭವಿಷ್ಯ ನುಡಿದಿದ್ದಾಳೆ. ಈಗಾಗಲೇ ಆಕೆ ಹೇಳಿರುವ ಹತ್ತು ಹಲವು ಭವಿಷ್ಯಗಳು ನಿಜವಾಗಿವೆ.
ಅದೇ ಹೊತ್ತಿಗೆ ಆಕೆಯ ಭವಿಷ್ಯಗಳು ನಿಜವಲ್ಲ ಎಂದೂ ವಾದಿಸಲಾಗುತ್ತಿದೆ. ಇತ್ತೀಚೆಗಷ್ಟೇ ಆಂಧ್ರದಲ್ಲಿ ಮಗುವೊಂದು ಕೊಳವೆ ಬಾವಿಗೆ ಬಿದ್ದಿದ್ದಾಗ, ಆತ ಬದುಕುತ್ತಾನಾ ಎಂದು ಶಾಂಭವಿಯಲ್ಲಿ ಕೇಳಲಾಗಿತ್ತು. ಖಂಡಿತಾ ಆತ ಜೀವಂತವಾಗಿ ಬಾವಿಯಿಂದ ಹೊರಗೆ ಬರುತ್ತಾನೆ ಎಂದು ಶಾಂಭವಿ ಹೇಳಿದ್ದಳು.
ಆದರೆ ಬಾಲಕ ಬದುಕಿರಲಿಲ್ಲ. ಆತನ ಹೆಣವನ್ನಷ್ಟೇ ಬಾವಿಯಿಂದ ತೆಗೆಯಲಾಗಿತ್ತು ಎಂದು ಟೀಕಾಕಾರರು ಉದಾಹರಣೆ ಸಹಿತ ವಿವರಿಸುತ್ತಾರೆ. ಅವರ ಪ್ರಕಾರ ಹೆತ್ತವರು ಮಗುವಿನ ಅಪಾರ ಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.