ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚರ್ಚ್ ಶಾಲೆಯ ಶಿಸ್ತಿನ ಚಟ; ದಿಕ್ಕೆಟ್ಟ ಬಾಲಕ ಆತ್ಮಹತ್ಯೆ (Sunirmal Chakraborty | La Martiniere for Boys | Rouvanjit Rawla | Suicide)
Bookmark and Share Feedback Print
 
ಕ್ಲಾಸಿಗೆ ಚಕ್ಕರ್ ಹಾಕಿದ್ದನ್ನೇ ಮುಂದಿಟ್ಟುಕೊಂಡ ಚರ್ಚ್ ಶಾಲೆಯ ಶಿಕ್ಷಕರು ಎಂಟನೇ ತರಗತಿ ಬಾಲಕನಿಗೆ ಮನಬಂದಂತೆ ಥಳಿಸಿದ್ದದೆ, ತರಗತಿಯಲ್ಲಿ ಪಟಾಕಿ ಸುಟ್ಟದ್ದು ಯಾರೆಂದು 16 ನಿಮಿಷದ ಒಳಗೆ ಹೇಳು ಎಂದು ಮತ್ತೆ ಮಾನಸಿಕ ಹಿಂಸೆ ನೀಡಿದ್ದರು. ಪರಿಣಾಮ ಮನೆಗೆ ಹೋದ ಪೋರ ಹಿಂದೆ ಮುಂದೆ ಯೋಚನೆ ಮಾಡದೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇದು ನಡೆದಿರುವುದು ಕೊಲ್ಕತ್ತಾದಲ್ಲಿ. ಇಲ್ಲಿನ ಲಾ ಮಾರ್ಟಿನೈರ್ ಬಾಲಕರ ಶಾಲೆಯಲ್ಲಿ ಓದುತ್ತಿದ್ದ ರಾವಣ್‌ಜಿತ್ ರಾವ್ಲಾ ಎಂಬ 13ರ ಹರೆಯದ ಬಾಲಕನಿಗೆ ಪ್ರಿನ್ಸಿಪಾಲ್ ಮತ್ತು ಶಿಕ್ಷಕರು ನೀಡಿದ ದೈಹಿಕ ಮತ್ತು ಮಾನಸಿಕ ಕಿರುಕುಳ ಇಷ್ಟು ಪರಿಣಾಮಕಾರಿ ಫಲಿತಾಂಶವನ್ನು ಹೊರಗೆ ತರುತ್ತದೆ ಎಂದು ಯಾರಿಗೆ ತಾನೇ ಗೊತ್ತಿತ್ತು.

ಅದೇ ರೀತಿಯಲ್ಲಿ ಇದೀಗ ಶಾಲೆ ಕ್ಷಮೆ ಯಾಚಿಸುತ್ತಿದೆ. ನಿಮ್ಮ ಕ್ಷಮೆಗೆ ನನ್ನ ಮಗುವಿನ ಜೀವ ವಾಪಸ್ ಮಾಡುವ ಶಕ್ತಿ ಇದೆಯೇ ಎಂದು ಬಾಲಕ ಅಪ್ಪ ಕೇಳುತ್ತಿದ್ದಾರೆ. ಇದಕ್ಕೆ ಯಾರು ತಾನೇ ಉತ್ತರ ಕೊಡಬಲ್ಲರು?

ನಾಲ್ಕು ದಿನಗಳ ನಂತರ ಆತ್ಮಹತ್ಯೆ...
ರಾವಣ್‌ಜಿತ್ ರಾವ್ಲಾ ಮತ್ತು ಆತನ ಇನ್ನಿಬ್ಬರು ಸ್ನೇಹಿತರು ಶಾಲೆಯ ಶೌಚಾಲಯದಲ್ಲಿ ಅಡಗಿಕೊಂಡು, ತಾವು ತಮ್ಮ ಶಿಕ್ಷಕರಿಗೆ ಏನೋ ಹಸ್ತಾಂತರಿಸುವುದಿದೆ ಎಂದಿದ್ದರು ಎನ್ನುವುದು ಆರೋಪ. ಅದೇ ಕಾರಣದಿಂದ ಅವರು ತರಗತಿಗಳಿಗೆ ಹಾಜರಾಗಿರಲಿಲ್ಲ.

ತರಗತಿಗೆ ಗೈರು ಹಾಜರಾಗಿದ್ದ ಎಂಬ ಕಾರಣ ನೀಡಿದ ಶಾಲೆಯ ಪ್ರಾಂಶುಪಾಲ ಸುನಿರ್ಮಲ್ ಚಕ್ರವರ್ತಿ, ಫೆಬ್ರವರಿ 8ರಂದು ಬೆತ್ತ ತೆಗೆದುಕೊಂಡು ಬಾಲಕ ರಾವ್ಲಾನಿಗೆ ಮನಬಂದಂತೆ ಥಳಿಸಿದ್ದರು.

ಆ ಬಳಿಕ ಫೆಬ್ರವರಿ 9, 10 ಮತ್ತು 11ರಂದು ಬಾಲಕ ಶಾಲೆಗೆ ಬಂದಿರಲಿಲ್ಲ. 12ರಂದು ಶಾಲೆಗೆ ಬಂದಿದ್ದ. ಅಂದು ಮತ್ತೆ ತರಗತಿಯಲ್ಲಿ ಕೀಟಲೆ ಮಾಡಿದ್ದ, ತರಗತಿಯಲ್ಲಿ ಪಟಾಕಿ ಸುಟ್ಟಿದ್ದ ಎನ್ನುವುದು ಪ್ರಾಂಶುಪಾಲರ ಆರೋಪ.

'..ನಿನಗೆ 16 ನಿಮಿಷಗಳ ಕಾಲಾವಕಾಶವನ್ನು ನೀಡುತ್ತೇನೆ.. ತರಗತಿಯಲ್ಲಿ ಪಟಾಕಿ ಸುಟ್ಟದ್ದು ಯಾರು ಎಂದು ಹೇಳು. ಅಷ್ಟು ಹೇಳಿದರೆ ನಿನ್ನನ್ನು ಬಿಟ್ಟು ಬಿಡುತ್ತೇನೆ...' ಎಂದು ಪ್ರಾಂಶುಪಾಲರು ಹೇಳಿದ್ದರು. ಉತ್ತರ ಹೇಳಲು ರಾವ್ಲಾ ವಿಫಲನಾಗಿದ್ದ. ಅದೊಂದು ವಿಚಾರ ನನ್ನಲ್ಲಿ ಈಗ ಕೇಳಬೇಡಿ, ಹೇಳುವ ಸ್ಥಿತಿಯಲ್ಲಿ ನಾನಿಲ್ಲ ಎಂದಿದ್ದ.

ಇದ್ಯಾವುದನ್ನೂ ಪರಿಗಣಿಸದ ಪ್ರಾಂಶುಪಾಲರು, ಸುಮಾರು ಎರಡು ಪೀರಿಯೆಡ್‌ಗಳಿಗೆ ತರಗತಿಗೆ ಹಾಜರಾಗಲು ಅವಕಾಶ ನೀಡಿರಲಿಲ್ಲ. ಶಾಲೆಯ ಇತರ ಶಿಕ್ಷಕರು ಕೂಡ ಪ್ರಾಂಶುಪಾಲರ ಆದೇಶವನ್ನು ಪಾಲಿಸುತ್ತಾ, ರಾವ್ಲಾನನ್ನು ತರಗತಿಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದರು.

ಬಾಲಕ ರಾವ್ಲಾ ಅಳುತ್ತಲೇ ಹಲವು ಗಂಟೆ ಹೊರಗೆ ನಿಂತುಕೊಂಡಿದ್ದ. ಕೊನೆಗೂ ಆತನನ್ನು ತರಗತಿಗೆ ಸೇರಿಸಿಕೊಳ್ಳಲಾಯಿತು. ನಾಳೆ ಬರುವಾಗ ತಂದೆಯನ್ನು ಕರೆದುಕೊಂಡು ಬಾ ಎಂದು ಹೇಳಲಾಗಿತ್ತು.

ವೈನ್ ಕುಡಿದಿದ್ದ ಬಾಲಕ..?
ತಂದೆಯನ್ನು ಶಾಲೆಗೆ ಕರೆದುಕೊಂಡು ಬರಬೇಕೆಂಬ ಪ್ರಾಂಶುಪಾಲರ ಕಟ್ಟಪ್ಪಣೆಗೆ ಬಾಲಕ ಬೆವತು ಹೋಗಿದ್ದ. ಅಲ್ಲದೆ ಹಲವು ದಿನಗಳಿಂದ ತಾನು ಅನುಭವಿಸುತ್ತಿದ್ದ ಯಾತನೆಯಿಂದ ಆತನಿಗೆ ಮುಕ್ತಿ ದೊರಕುವ ದಾರಿಗಳು ಕಂಡಿರಲಿಲ್ಲ. ಶಾಲೆಯಲ್ಲಿ ಮಧ್ಯಾಹ್ನದ ಬೆಲ್ ಹೊಡೆಯುತ್ತಿದ್ದಂತೆ ಮನೆಗೆ ದೌಡಾಯಿಸಿದ್ದ.

ಆ ಹೊತ್ತಿಗೆ ತಂದೆ ಅಜಯ್ ರಾವ್ಲಾ ನೆನಪಾಗಿದ್ದಾರೆ. ಕರೆಯನ್ನೂ ಮಾಡಿದ್ದಾನೆ. ಯಾವುದೋ ಕೆಲಸದಲ್ಲಿ ವ್ಯಸ್ತರಾಗಿದ್ದ ತಂದೆಗೆ ಮಗನ ತರಾತುರಿ ಅರ್ಥವಾಗಿಲ್ಲ. ಅರ್ಧಂಬರ್ಧ ಮಾತನಾಡಿದ್ದ ಬಾಲಕನಿಗೆ ಸಮಾಧಾನವಾಗಿರಲಿಲ್ಲ ಎಂದೆನಿಸುತ್ತದೆ.

'ಫಾಂಟಾ' ಪೇಯಕ್ಕೆ ಮನೆಯಲ್ಲಿನ ಫ್ರಿಡ್ಜ್‌ನಲ್ಲಿದ್ದ 'ಬಕಾರ್ದಿ ಬ್ರೀಜರ್' ವೈನ್ ಬೆರೆಸಿಕೊಂಡು ಕುಡಿದ ನಂತರ ನೇಣು ಹಾಕಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಮರಣೋತ್ತರ ಪರೀಕ್ಷೆ ವರದಿಯನ್ನು ಉಲ್ಲೇಖಿಸಿ ಟಿವಿ ಮಾಧ್ಯಮಗಳು ವರದಿ ಮಾಡಿವೆ.

ಏನು ಹೇಳುತ್ತಿದ್ದಾರೆ ಶಿಕ್ಷಕರು..?
ಆಗಿರುವ ಘಟನೆಗೆ ನಾವು ವಿಷಾದಿಸುತ್ತಿದ್ದೇವೆ. ಆದರೆ ನಾವೇನೂ ತಪ್ಪು ಮಾಡಿಲ್ಲ. ಮಗುವಿಗೆ ಸಣ್ಣ ಏಟುಗಳನ್ನಷ್ಟೇ ಕೊಟ್ಟಿದ್ದೇವೆ. ಅದರ ಉದ್ದೇಶ ಶಿಸ್ತನ್ನು ಪಾಲಿಸಬೇಕೆಂಬುದಾಗಿತ್ತು. ಖಂಡಿತಾ ಇದರಿಂದ ನಾವು ಪಾಠ ಕಲಿಯುತ್ತೇವೆ. ಇನ್ನು ಯಾವುದೇ ಮಕ್ಕಳಿಗೆ ನಾವು ಥಳಿಸುವುದಿಲ್ಲ ಎಂದು ಪ್ರಾಂಶುಪಾಲರು ಪ್ರತಿಕ್ರಿಯೆ ನೀಡಿದ್ದಾರೆ.

ಬಾಲಕನ ಆತ್ಮಹತ್ಯೆ ಪ್ರಕರಣಕ್ಕೆ ಶಿಕ್ಷಕರ ಕಿರುಕುಳವೇ ಕಾರಣ ಎಂಬ ಆರೋಪದ ಹಿನ್ನೆಲೆಯಲ್ಲಿ ಇದೀಗ ಮಾನವ ಹಕ್ಕುಗಳ ಆಯೋಗ, ಮಕ್ಕಳ ಹಕ್ಕುಗಳ ರಕ್ಷಣಾ ಸಂಘಟನೆಗಳು ಮತ್ತು ಪೊಲೀಸರಿಂದ ತನಿಖೆ ನಡೆಯುತ್ತಿದೆ.

ಅವರು ಕೇಳಿರುವ ಕ್ಷಮೆಯಿಂದ ನನ್ನ ಮಗುವಿನ ಜೀವ ಮರಳಿ ಬರುವುದೇ? ನನಗೀಗ ಬೇಕಾಗಿರುವುದು ನ್ಯಾಯ. ಪ್ರಾಂಶುಪಾಲರು ರಾಜೀನಾಮೆ ನೀಡಬೇಕು ಮತ್ತು ಅವರನ್ನು ಬಂಧಿಸಿ ತನಿಖೆ ನಡೆಸಬೇಕು ಎಂದು ಬಾಲಕನ ತಂದೆ ಒತ್ತಾಯಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಾಂಶುಪಾಲರು, ನಾನ್ಯಾಕೆ ರಾಜೀನಾಮೆ ನೀಡಲಿ? ನಾನೊಬ್ಬ ಶಿಕ್ಷಕನೇ ಹೊರತು, ಕ್ರಿಮಿನಲ್ ಅಲ್ಲ. ನಾನು ಬಾಲಕನಿಗೆ ಹೊಡೆದಿರುವುದಕ್ಕೂ, ಆತನ ಸಾವಿಗೂ ಯಾವುದೇ ಸಂಬಂಧವಿದ್ದಂತೆ ಕಾಣಿಸುತ್ತಿಲ್ಲ ಎಂದಿದ್ದಾರೆ.

ವೈಯಕ್ತಿಕ ಹಗೆ ಬೇಡ..
ಲಾ ಮಾರ್ಟಿನೈರ್ ಶಾಲೆಯನ್ನು ನಡೆಸುತ್ತಿರುವ 'ಚರ್ಚ್ ಆಫ್ ನಾರ್ತ್ ಇಂಡಿಯಾ' (ಸಿಎನ್ಐ) ಕೂಡ ಪ್ರಾಂಶುಪಾಲರು ಮತ್ತು ಶಿಕ್ಷಕರನ್ನು ಸಮರ್ಥಿಸಿಕೊಂಡಿದ್ದು, ಥಳಿತಕ್ಕೂ ಆತ್ಮಹತ್ಯೆಗೂ ಯಾವುದೇ ಸಂಬಂಧವಿಲ್ಲ ಎಂದಿದೆ.

ನಡೆದದ್ದು ನಡೆದು ಹೋಗಿದೆ. ದಯವಿಟ್ಟು ಬಾಲಕನ ಆತ್ಮಹತ್ಯೆಗೂ, ಆತನನ್ನು ಥಳಿಸಿದ್ದಕ್ಕೂ ಯಾವುದೇ ಸಂಬಂಧ ಕಲ್ಪಿಸಬೇಡಿ ಎಂದು ಮಾಧ್ಯಮಗಳಲ್ಲಿ ನಾವು ವಿನಂತಿ ಮಾಡಿಕೊಳ್ಳುತ್ತಿದ್ದೇವೆ ಎಂದು ಸಿಎನ್ಐ ವಕ್ತಾರರು ಮನವಿ ಮಾಡಿದ್ದಾರೆ.

ಕೆಲವು ವ್ಯಕ್ತಿಗಳು ತಮ್ಮ ವೈಯಕ್ತಿಕ ದ್ವೇಷವನ್ನು ಸಾಧಿಸಲು ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ. ದಯವಿಟ್ಟು ಹಾಗೆ ಮಾಡಬೇಡಿ. ನಿಮ್ಮ ವೈಯಕ್ತಿಕ ವಿಚಾರಕ್ಕೆ ಈ ಪ್ರಕರಣವನ್ನು ಸಂಬಂಧ ಕಲ್ಪಿಸಿ ಆವಾಂತರ ಸೃಷ್ಟಿಸಬೇಡಿ. ಇದರಿಂದ ಸಾವನ್ನಪ್ಪಿರುವ ಬಾಲಕನ ಕುಟುಂಬದ ವೇದನೆ ಹೆಚ್ಚಬಹುದು ಎಂದೂ ಸಿಎನ್ಐ ಬಿಷಪ್ ರೆವೆಡೆಂಟ್ ಅಶೋಕ್ ಬಿಸ್ವಾಸ್ ಕೇಳಿಕೊಂಡಿದ್ದಾರೆ.

ಸಂಬಂಧಿತ ಮಾಹಿತಿ ಹುಡುಕಿ