ರಾಜ್ಯಸಭಾ ಚುನಾವಣೆಯಲ್ಲಿ ಹಾದಿ ತಪ್ಪುವ ಸಂಶಯವಿದ್ದ ಶಾಸಕರನ್ನು ಐಷಾರಾಮಿ ರೆಸಾರ್ಟ್ ಒಂದರಲ್ಲಿ ಕೂಡಿ ಹಾಕಿದ್ದ ಬಿಜೆಪಿ ಅವರಿಗೆ ಇತ್ತೀಚಿನ ಬಾಲಿವುಡ್ ಚಿತ್ರ 'ರಾಜನೀತಿ'ಯ ನಕಲಿ ಸಿಡಿ ತೋರಿಸಿದ್ದನ್ನೇ ಮುಂದೆ ಮಾಡಿಕೊಂಡಿರುವ ಚಿತ್ರದ ನಿರ್ದೇಶಕರು ನಾಯಕರ ಮೇಲೆ ಕೇಸು ಜಡಿದಿದ್ದಾರೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ನೇತೃತ್ವದಲ್ಲಿ ರಾಜಸ್ತಾನದ 79 ಬಿಜೆಪಿ ಶಾಸಕರು ಜೈಪುರದ ಹೊಟೋಲೊಂದರಲ್ಲಿ ತಂಗಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ ಕುದುರೆ ವ್ಯಾಪಾರ ನಡೆಯಬಾರದೆಂಬ ಕಾರಣಕ್ಕೆ ಬಿಜೆಪಿ ತನ್ನ ಶಾಸಕರನ್ನು ಈ ರೀತಿ ರೆಸಾರ್ಟ್‌ನಲ್ಲಿ ಕೂಡಿ ಹಾಕಿತ್ತು.
ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ, ಸೋನಿಯಾ ಗಾಂಧಿಯ ಕಥೆಯೆಂದೇ ಬಿಂಬಿಸಲಾಗಿದ್ದ ಸಿನಿಮಾ 'ರಾಜನೀತಿ'ಯನ್ನು ಹೊಟೇಲಿನಲ್ಲಿ ತಂಗಿದ್ದ ಶಾಸಕರಿಗೆ ಪ್ರದರ್ಶಿಸಲಾಗಿತ್ತು. ಆದರೆ ಅದಕ್ಕಾಗಿ ಬಳಸಿದ್ದು ನಕಲಿ ಡಿವಿಡಿ.
ಇದು ಬಹಿರಂಗವಾಗುತ್ತಿದ್ದಂತೆ 'ರಾಜನೀತಿ' ನಿರ್ದೇಶಕ ಪ್ರಕಾಶ್ ಝಾ ನ್ಯಾಯಾಲಯದ ಮೊರೆ ಹೋಗಿದ್ದು, ರಾಜಸ್ತಾನ ಬಿಜೆಪಿ ಮುಖ್ಯ ಸಚೇತಕ ರಾಜೇಂದ್ರ ಸಿಂಗ್ ರಾಥೋಡ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆದೇಶ ನೀಡಿದೆ.
ಪ್ರಕರಣದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ನಿರ್ದೇಶಕ ಝಾ, ಇದು ನಿಜಕ್ಕೂ ನಾಚಿಕೆಗೇಡು; ಕಾನೂನು ರಚಿಸುವವರೇ ಈ ರೀತಿ ಕಾನೂನನ್ನು ಕೈಗೆತ್ತಿಕೊಂಡರೆ ಗತಿಯೇನು? ಇತರರು ದುರ್ಮಾರ್ಗದಲ್ಲಿ ತೆರಳುತ್ತಿದ್ದರೆ ಅವರಿಗೆ ಮಾದರಿಯಾಗಬೇಕಾದವರು ನಮ್ಮ ಪ್ರತಿನಿಧಿಗಳು. ಆದರೆ ಅವರೇ ಕಾನೂನನ್ನು ಉಲ್ಲಂಘಿಸಿದ್ದಾರೆ. ಇದು ನನಗೆ ತೀರಾ ಬೇಸರ ತಂದಿದೆ ಎಂದಿದ್ದಾರೆ.
ಬಿಜೆಪಿ ಶಾಸಕರಿಗೆ ನಕಲಿ ಡಿವಿಡಿ ತೋರಿಸಿದ ಪಂಚತಾರಾ ಹೊಟೇಲ್ ಮೇಲೂ ಕೇಸು ಜಡಿಯಲಾಗಿದೆ. ಘಟನೆಯಿಂದ ತೀವ್ರ ಮುಜುಗರ ಅನುಭವಿಸಿರುವ ರಾಜಸ್ತಾನ ಬಿಜೆಪಿ ಘಟಕವು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.