ಪತ್ನಿ ಮೇಲೆ ಯಾರದೇ ಕಣ್ಣು ಬಿದ್ದರೂ ಕಿಡಿಯಾಗುವ ಗಂಡಂದಿರು ಒಂದು ಕಡೆಯಾದರೆ, ಹೆಂಡತಿಯನ್ನು ತನ್ನ ಸಹೋದರ, ಬಾವ ಮತ್ತು ಗೆಳೆಯನ ಜತೆ ಸಮೂಹ ಲೈಂಗಿಕ ಸಂಬಂಧ ಬೆಳೆಸುವಂತೆ ಬಲವಂತಪಡಿಸಿದ ತದ್ವಿರುದ್ಧ ಪ್ರಸಂಗವಿದು. ಇದೀಗ ಕೀಚಕ ಪತಿರಾಯನನ್ನು ಧರ್ಮಪತ್ನಿಯ ದೂರಿನ ಆಧಾರದಲ್ಲಿ ಬಂಧಿಸಿ ಜೈಲಿಗಟ್ಟಲಾಗಿದೆ.
ಗುಜರಾತ್‌ನ ಸೂರತ್ ಮೂಲದ ಈ ಮಹಿಳೆ ಅಲ್ಲೇ ತನ್ನ ಗಂಡನ ವಿರುದ್ಧ ದೂರು ನೀಡಿದ್ದಾಳೆ. ಅದರಂತೆ ಕಾರ್ಯಪ್ರವೃತ್ತರಾದ ಪೊಲೀಸರು ಉದ್ಯಮಿ ಗಂಡ ಕುಲದೀಪಕ್ ಅರೋರಾನನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಅರೋರಾ ಕುಟುಂಬ ನೀಡಿದ್ದ ವೈವಾಹಿಕ ಜಾಹೀರಾತೊಂದನ್ನು ನೋಡಿದ್ದ ಸೂರತ್‌ನ ಮಹಿಳೆ 2003ರಲ್ಲಿ ಲಂಡನ್‌ನಲ್ಲಿ ಕುಲದೀಪಕ್‌ನನ್ನು ಮೊದಲು ಭೇಟಿಯಾಗಿದ್ದಳು. ಆ ಹೊತ್ತಿನಲ್ಲಿ ಸಂಬಂಧಿಕರ ಜತೆ ಲಂಡನ್‌ನಲ್ಲಿ ನೆಲೆಸಿದ್ದಾಕೆ 2004ರ ಏಪ್ರಿಲ್‌ನಲ್ಲಿ ಸೂರತ್‌ನಲ್ಲಿ ಕುಲದೀಪಕ್‌ನನ್ನು ಮದುವೆಯಾಗಿದ್ದಳು.
ಪ್ರಕರಣ ದಾಖಲಾಗುತ್ತಿದ್ದಂತೆ ತಪ್ಪಿಸಿಕೊಳ್ಳಲು ಯತ್ನಿಸಿದ ಗಂಡ ಕುಲದೀಪಕ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇದೀಗ ಅರೋರಾ ಕುಟುಂಬ ಮತ್ತು ಅವರ ಗೆಳೆಯನಿಗೂ ನೊಟೀಸ್ ಜಾರಿ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸಕ್ತ ಅವರೆಲ್ಲರೂ ತಲೆ ಮರೆಸಿಕೊಂಡಿದ್ದಾರೆ.
ಕುಲದೀಪಕ್‌ಗಿದು ಎರಡನೇ ಮದುವೆ... ಸೂರತ್ ಮಹಿಳೆಯ ಪ್ರಕಾರ ಇದು ಕುಲದೀಪಕ್‌ಗೆ ಎರಡನೇ ಮದುವೆ. ಮೊದಲ ಪತ್ನಿಗೆ ವಿಚ್ಛೇದನ ನೀಡದಿದ್ದರೂ, ಅದನ್ನು ಮುಚ್ಚಿಡಲಾಗಿತ್ತು. ತನ್ನನ್ನು ಮದುವೆಯಾದ ನಂತರದ ಕೆಲ ವರ್ಷಗಳ ಕಾಲ ಯಾವುದೇ ಸಮಸ್ಯೆ ಉದ್ಭವಿಸಿರಲಿಲ್ಲ. ಆದರೆ ನಂತರ ಅತ್ತೆ-ಮಾವ ವರದಕ್ಷಿಣೆ ಬೇಡಿಕೆಯಿಟ್ಟಿದ್ದರು ಎಂದು ಕುಲದೀಪಕ್ ಪತ್ನಿ ವಿವರಿಸಿದ್ದಾಳೆ.
ವರದಕ್ಷಿಣೆ ಬೇಡಿಕೆ ನಿಧಾನವಾಗಿ ಕಿರುಕುಳಕ್ಕೆ ತಿರುಗಿತ್ತು. ಇದೇ ಸಂಬಂಧ ಗಂಡನ ಮನೆಯಲ್ಲಿ ದಿನಾ ಪೆಟ್ಟು ತಿನ್ನಬೇಕಾದ ಪರಿಸ್ಥಿತಿ ಮಹಿಳೆಯದ್ದಾಗಿತ್ತು. ಪರಿಣಾಮ ಒಂದು ಬಾರಿ ಗರ್ಭಪಾತವೂ ನಡೆದಿತ್ತು.
ನಂತರ ಗಂಡನ ಬಲವಂತದ ಪರಿಣಾಮ ಆತನ ಸಹೋದರ, ಬಾವ ಮತ್ತು ಉದ್ಯಮಿ ಗೆಳೆಯನೊಬ್ಬನ ಜತೆಗೆ ಅನಿವಾರ್ಯವಾಗಿ ದೈಹಿಕ ಸಂಬಂಧ ಬೆಳೆಸಬೇಕಾಗಿತ್ತು. ಆಕೆಯನ್ನು ಅನೈತಿಕ ಸಂಬಂಧಕ್ಕೆ ಒಳಪಡಿಸಿದ ಕುರಿತು ಮತ್ತು ಅದಕ್ಕಾಗಿ ಒತ್ತಾಯಿಸಿದ್ದಕ್ಕೆ ನಮ್ಮಲ್ಲಿ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ಸುರೇಂದ್ರ ಗಾಲಾ ಎಂಬ ಸೂರತ್ ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಇದು ನಡೆಯುತ್ತಾ ಬಂದಿತ್ತು. ಆದರೂ ಇದುವರೆಗೆ ಮಹಿಳೆ ಎಲ್ಲವನ್ನೂ ಸಹಿಸಿಕೊಂಡಿದ್ದರು. ಕೊನೆಗೂ ಸಂಬಂಧಿಕರ ಸಲಹೆಯಂತೆ ದೂರು ನೀಡಿದ್ದಾರೆ. ಕುಲದೀಪಕ್ ಸಂಬಂಧಿಕರೆಲ್ಲರ ವಿಚಾರಣೆ ನಡೆಸಲಿದ್ದು, ಆರೋಪಿಗಳನ್ನು ಬಂಧಿಸುತ್ತೇವೆ. ಯಾರನ್ನೂ ದೇಶ ಬಿಟ್ಟು ಹೋಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವಾಹಿತ ಮಹಿಳೆಗೆ ಹಿಂಸೆ, ಹತ್ಯೆ ಯತ್ನ, ಅಸಹಜ ಕೃತ್ಯಗಳು, ಜೀವ ಬೆದರಿಕೆ, ಕ್ರಿಮಿನಲ್ ಪ್ರಚೋದನೆ, ವರದಕ್ಷಿಣೆ ಕಾಯ್ದೆ ಸೇರಿದಂತೆ ಹಲವು ಪ್ರಕರಣಗಳನ್ನು ಕುಲದೀಪಕ್ ಮತ್ತು ಈ ಕೃತ್ಯದಲ್ಲಿ ಪಾಲ್ಗೊಂಡ ಇತರರ ಮೇಲೆ ದಾಖಲಿಸಲಾಗಿದೆ.