ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲ್ ಕಾರ್ಯಾಚರಣೆಗಾಗಿ 60,000 ಸೈನಿಕರಿಗೆ ತರಬೇತಿ? (Maoists | Army | anti-Naxal operations | Army against Naxals)
Bookmark and Share Feedback Print
 
ನಕ್ಸಲ್ ಸಮಸ್ಯೆಯಂತಹ ಆಂತರಿಕ ಸಂಘರ್ಷಗಳನ್ನು ಹತ್ತಿಕ್ಕಲು ಮಿಲಿಟರಿಯನ್ನು ಬಳಸುವ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿರುವ ಹೊರತಾಗಿಯೂ ಭಾರತೀಯ ಸೇನೆಯು ನಕ್ಸಲ್ ನಿಗ್ರಹಕ್ಕಾಗಿ 50,000ದಿಂದ 60,000 ಸೈನಿಕರಿಗೆ ವಿಶೇಷ ತರಬೇತಿ ನೀಡುತ್ತಿದೆ ಎಂದು ಹೇಳಲಾಗಿದೆ.

ಮಾವೋವಾದಿಗಳ ದಮನಕ್ಕೆ ಮಿಲಿಟರಿ ಬಳಕೆಯನ್ನು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಸದ್ಯಕ್ಕೆ ತಳ್ಳಿ ಹಾಕಿದ್ದರೂ, ಮುಂದಿನ ದಿನಗಳಲ್ಲಿ ಬಳಕೆ ಮಾಡದೇ ಇರುವ ಸಾಧ್ಯತೆಗಳಿಲ್ಲ. ಅದಕ್ಕಾಗಿ ಈಗಲೇ ಪೂರ್ವತಯಾರಿ ನಡೆಸುವ ನಿರ್ಧಾರಕ್ಕೆ ಮಿಲಿಟರಿ ಪ್ರಧಾನ ಕಚೇರಿ ಬಂದಿದ್ದು, ಇದೇ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯ ಸೈನಿಕರಿಗೆ ವಿಶೇಷ ತರಬೇತಿ ನೀಡುತ್ತಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಇತ್ತೀಚಿನ ಕೆಲ ತಿಂಗಳುಗಳಲ್ಲಿ 300ಕ್ಕೂ ಹೆಚ್ಚು ನಾಗರಿಕರು ಹಾಗೂ ಭದ್ರತಾ ಸಿಬ್ಬಂದಿಗಳ ಸಾವಿಗೆ ಕಾರಣರಾಗಿರುವ ಮಾವೋವಾದಿಗಳು ದಿನದಿಂದ ದಿನಕ್ಕೆ ತಮ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ. ಕೇಂದ್ರ ಸರಕಾರವು ತನ್ನ ಮೈತ್ರಿಕೂಟದ ಸದಸ್ಯ ಪಕ್ಷಗಳ ಹಿತರಕ್ಷಣೆಗೆ ಹೆಚ್ಚು ಒತ್ತುಕೊಡುತ್ತಾ ಒಕ್ಕೂಟ ವ್ಯವಸ್ಥೆಗೆ ಮಾರಕವಾಗುತ್ತಿರುವ ನಕ್ಸಲ್ ಸಮಸ್ಯೆ ನಿವಾರಣೆಯನ್ನು ಮೂಲೆಗುಂಪು ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವ ನಡುವೆಯೇ ಇಂತಹ ಬೆಳವಣಿಗೆಯೊಂದು ಕಂಡು ಬಂದಿದೆ.

ಮಾವೋವಾದಿಗಳ ಆಟೋಪಗಳು ತಾರಕ ಸ್ಥಿತಿಯಲ್ಲೇ ಮುಂದುವರಿದಲ್ಲಿ ಸರಕಾರವು ಮಿಲಿಟರಿ ಬಳಕೆಗೆ ತರಾತುರಿಯ ನಿರ್ಧಾರ ಕೈಗೊಂಡರೆ ಆಗ ಕೈಕಟ್ಟಿದಂತಾಗಬಾರದು ಎನ್ನುವ ಉದ್ದೇಶದಿಂದ ಸೈನಿಕರಿಗೆ ತರಬೇತಿ ನೀಡುವ ಕೈಂಕರ್ಯಕ್ಕೆ ಸೇನೆ ಕೈ ಹಾಕಿದೆ. ಸಾಂಪ್ರದಾಯಿಕ ಯುದ್ಧಕ್ಕಿಂತ ಭಿನ್ನವಾಗಿರುವ ನಕ್ಸಲ್ ದಮನಕ್ಕೆ ಭಿನ್ನ ಕಾರ್ಯತಂತ್ರದ ಅಗತ್ಯವಿರುವುದರಿಂದ ಆ ನಿಟ್ಟಿನಲ್ಲಿ ಮಿಲಿಟರಿ ತರಬೇತಿ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

ಪ್ರಸಕ್ತ ಅರೆ ಸೇನಾಪಡೆಗಳು ನಕ್ಸಲರ ಅಡಗುದಾಣಗಳಿರುವ ಅರಣ್ಯ ಪ್ರದೇಶಕ್ಕೆ ನಡೆಸುತ್ತಿರುವ ಗೊತ್ತುಗುರಿಯಿಲ್ಲದ ಅಪಾಯಕಾರಿ ದಾಳಿಗಳ ಬದಲು ಭಿನ್ನ ಮಾದರಿಯನ್ನು ಅನುಸರಿಸುವ ನಿಟ್ಟಿನಲ್ಲಿ ಮುಂದಡಿಯಿಡುತ್ತಿರುವ ಸೇನೆ, ನಾಗರಿಕರಿಗೆ ತೊಂದರೆಯಾಗದಂತೆ ಮತ್ತು ಒಟ್ಟಾರೆ ಹಾನಿಯನ್ನು ಮಿತಿಗೊಳಿಸುವ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಆ ಮೂಲಕ ಯಾವುದೇ ಕ್ಷಣದಲ್ಲಿ ಕರೆ ಬಂದರೂ ಕಾರ್ಯಾಚರಣೆಗೆ ಸೈನಿಕರನ್ನು ಸೇನೆ ಸನ್ನದ್ಧಗೊಳಿಸುತ್ತಿದೆ.

ಲಕ್ನೋದಲ್ಲಿನ ಸೇನೆಯ ಪ್ರಧಾನ ಕಚೇರಿಯಲ್ಲಿ ಸೈನಿಕರಿಗೆ ನಕ್ಸಲ್ ನಿಗ್ರಹ ತರಬೇತಿ ನೀಡಲಾಗುತ್ತಿದೆ ಎಂಬ ವರದಿಗಳನ್ನು ಮಿಲಿಟರಿ ಸಂಪೂರ್ಣವಾಗಿ ತಳ್ಳಿ ಹಾಕಿದೆ. ಆದರೂ ತರಬೇತಿ ಕಾರ್ಯಗಾರ ಜಾರಿಯಲ್ಲಿರುವುದನ್ನು ಹೆಸರು ಹೇಳಲಿಚ್ಛಿಸದ ಮೂಲಗಳು ಖಚಿತಪಡಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ