ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಂಡರ್ಸನ್ ಬಿಡುಗಡೆಗೆ ರಾಜೀವ್ ಗಾಂಧಿ ಡೀಲ್? (Rajiv Gandhi | Warren Anderson | Union Carbide | Bhopal Gas Tragedy)
Bookmark and Share Feedback Print
 
ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಂಪನಿಯ ಮುಖ್ಯಸ್ಥ ವಾರೆನ್ ಆಂಡರ್ಸನ್ ಬಿಡುಗಡೆಗೆ ಅಮೆರಿಕಾ ಸರಕಾರವು ಭಾರತದ ಆಗಿನ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಜತೆ ವ್ಯವಹಾರ ಕುದುರಿಸಿತ್ತು ಎಂಬರ್ಥದ ಮಾತುಗಳನ್ನು ಇದೀಗ ಅಮೆರಿಕಾದ ಮಾಜಿ ರಾಯಭಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ವಾರೆನ್ ಆಂಡರ್ಸನ್ ಬಿಡುಗಡೆಗೆ ರಾಜೀವ್ ಗಾಂಧಿಯವರ ಕೇಂದ್ರ ಸರಕಾರ ಮತ್ತು ಅರ್ಜುನ್ ಸಿಂಗ್‌ರ ಮಧ್ಯಪ್ರದೇಶ ಸರಕಾರ (ಎರಡೂ ಕಡೆ ಕಾಂಗ್ರೆಸ್ ಅಧಿಕಾರದಲ್ಲಿತ್ತು) ಕಾರಣ ಎಂದು ಇದುವರೆಗೆ ಆರೋಪಿಸಿಕೊಂಡು ಬರಲಾಗಿತ್ತು. ಆದರೆ ಭಾರತದೊಂದಿಗೆ ಪೂರ್ವ ಒಪ್ಪಂದ ನಡೆದಿತ್ತು ಎಂದು ಅಮೆರಿಕಾ ಮಾಜಿ ರಾಯಭಾರಿ ಗೋರ್ಡನ್ ಸ್ಟ್ರೀಬ್ ಹೇಳುವುದರೊಂದಿಗೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

1984ರ ಡಿಸೆಂಬರ್ 3ರಂದು ಭೋಪಾಲ್ ಅನಿಲ ದುರಂತ ಸಂಭವಿಸುವಾಗ 'ಯೂನಿಯನ್ ಕಾರ್ಬೈಡ್' ಸಿಇಒ ವಾರೆನ್ ಆಂಡರ್ಸನ್ ಅಮೆರಿಕಾದಲ್ಲಿದ್ದರು. ದುರಂತ ನಡೆಯುತ್ತಿದ್ದಂತೆ ಆಂಡರ್ಸನ್ ಭೋಪಾಲ್ ಬಲಿಪಶುಗಳಿಗೆ ಸಮಾಧಾನ ಹೇಳುವ ನಿಟ್ಟಿನಲ್ಲಿ ಭಾರತಕ್ಕೆ ಹೋಗಲು ಬಯಸಿದ್ದರು. ಆದರೆ ಕಾನೂನು ಸಮಸ್ಯೆಗಳು ಅಡ್ಡಿಯಾಗಬಹುದು, ಇದು ಅಪಾಯಕಾರಿ ಎಂದು ಯೂನಿಯನ್ ಕಾರ್ಬೈಡ್ ಮತ್ತು ನನಗೆ ತಿಳಿದಿತ್ತು ಎಂದು ಗೋರ್ಡನ್ ತಿಳಿಸಿದ್ದಾರೆ.

ನಂತರ ನಾನು ಭಾರತದ ವಿದೇಶಾಂಗ ಸಚಿವಾಲಯದ (ವಿದೇಶಾಂಗ ಸಚಿವ ಸ್ಥಾನವೂ ರಾಜೀವ್ ಗಾಂಧಿಯವರಲ್ಲಿತ್ತು) ಜತೆ ಮಾತುಕತೆ ನಡೆಸಿ, ಪರಿಸ್ಥಿತಿಯನ್ನು ವಿವರಿಸಿದ್ದೆ. ಆಗ ಆಂಡರ್ಸನ್ ಭೇಟಿಯನ್ನು ಸ್ವಾಗತಿಸಿದ ಭಾರತ ಸರಕಾರವು, ಅವರ ವಿರುದ್ಧ ಯಾವುದೇ ಕಾನೂನು ಕ್ರಮವನ್ನು ಕೈಗೊಳ್ಳುವುದಿಲ್ಲ ಎಂಬ ಭರವಸೆಯನ್ನು ನೀಡಿತ್ತು. ಅದರಂತೆ ಆಂಡರ್ಸನ್ ಭಾರತಕ್ಕೆ ತೆರಳಿದ್ದರು ಎಂದು ವಾರ್ತಾವಾಹಿನಿಯೊಂದರ ಜತೆ ಮಾತನಾಡುತ್ತಾ ವಿವರಣೆ ನೀಡಿದ್ದಾರೆ.

ರಾಜೀವ್ ಗಾಂಧಿ ಸರಕಾರದ ಭರವಸೆಯಂತೆ ಆಂಡರ್ಸನ್ ಭೋಪಾಲ್‌ಗೆ ತೆರಳುತ್ತಿದ್ದಂತೆ ಮಧ್ಯಪ್ರದೇಶ ಸರಕಾರವು ಅವರನ್ನು ಗೃಹಬಂಧನಕ್ಕೊಳಪಡಿಸಿತು. ಆದರೆ ಭಾರತ ಸರಕಾರವು ಆಂಡರ್ಸನ್ ಬಿಡುಗಡೆ ಮಾಡಲಾಗುತ್ತದೆ ಎಂಬ ಭರವಸೆಯನ್ನು ನೀಡಿತು. ಅದರಂತೆ ಅವರನ್ನು ದೆಹಲಿಯ ಮೂಲಕ ತಕ್ಷಣವೇ ಅಮೆರಿಕಾಕ್ಕೆ ತೆರಳಲು ಅವಕಾಶ ಒದಗಿಸಿತು ಎಂದು ಗೋರ್ಡನ್ ತಿಳಿಸಿದ್ದಾರೆ.

ರಾಜೀವ್ ದೂಷಕರು ದೇಶಭಕ್ತರಲ್ಲ....
ಹೀಗೆಂದು ಎರಡು ದಿನಗಳ ಹಿಂದೆ ಹೇಳಿರುವುದು ಕಾಂಗ್ರೆಸ್. 'ಭಾರತ ರತ್ನ' ರಾಜೀವ್ ಗಾಂಧಿ ಅಥವಾ ಅವರ ಸರಕಾರ ಭೋಪಾಲ್ ಅನಿಲ ದುರಂತ ಪ್ರಕರಣದ ಆರೋಪಿ ಆಂಡರ್ಸನ್ ಪರಾರಿಯಲ್ಲಿ ಯಾವುದೇ ಪಾತ್ರ ವಹಿಸಿಲ್ಲ. ತಿಂಗಳ ಹಿಂದಷ್ಟೇ ತನ್ನ ತಾಯಿಯನ್ನು ಕಳೆದುಕೊಂಡಿದ್ದ ರಾಜೀವ್ ಗಾಂಧಿಯನ್ನು ದೂಷಿಸುವವರು ದೇಶಭಕ್ತರೇ ಅಲ್ಲ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ವಾಗ್ದಾಳಿ ನಡೆಸಿದ್ದರು.

ಆಂಡರ್ಸನ್ ದೇಶ ಬಿಟ್ಟು ಹೋದದ್ದು ವಿದೇಶಾಂಗ ಸಚಿವಾಲಯದ ಉಸ್ತುವಾರಿಯನ್ನೂ ಹೊತ್ತಿದ್ದ ರಾಜೀವ್ ಗಾಂಧಿ ಅರಿವಿಗೆ ಬಂದಿರಲಿಲ್ಲ ಎನ್ನುವುದು ನಂಬಲಸಾಧ್ಯ ವಿಚಾರ ಎಂದು ಬಿಜೆಪಿ ದೂಷಿಸಿದ್ದ ನಂತರ ಕಾಂಗ್ರೆಸ್ ಈ ಪ್ರತಿಕ್ರಿಯೆ ನೀಡಿತ್ತು.

ರಾಜೀವ್ ಗಾಂಧಿಯವರ ಸರಕಾರದ ಜತೆ ನಡೆಸಲಾಗಿದ್ದ ಒಪ್ಪಂದದಂತೆ ಆಂಡರ್ಸನ್ ಅಮೆರಿಕಾಕ್ಕೆ ಮರಳಿದ್ದರು ಎಂದು ಇದೀಗ ಅಮೆರಿಕಾ ಮಾಜಿ ರಾಯಭಾರಿ ಹೇಳುವುದರೊಂದಿಗೆ ಕಾಂಗ್ರೆಸ್ ಮತ್ತೆ ಪೇಚಿಗೆ ಸಿಲುಕಿದೆ.
ಸಂಬಂಧಿತ ಮಾಹಿತಿ ಹುಡುಕಿ