ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿ ಬೆಂಬಲ- ಮಲ್ಯ ರಾಜ್ಯಸಭೆಗೆ; ಕಾಂಗ್ರೆಸ್‌ಗೆ ನಿರಾಸೆ (Oscar Fernandis | Ayanoor Manjunath | Vijaya Mallya | Rajya sabha)
Bookmark and Share Feedback Print
 
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದಿರುವ ನಾಲ್ಕು ಸ್ಥಾನಗಳ ಚುನಾವಣೆಗಳಲ್ಲಿ ಆಯನೂರು ಮಂಜುನಾಥ್, ವೆಂಕಯ್ಯ ನಾಯ್ಡು, ಆಸ್ಕರ್ ಫೆರ್ನಾಂಡಿಸ್ ಮತ್ತು ವಿಜಯ ಮಲ್ಯ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಟಿ.ವಿ. ಮಾರುತಿ ನಿರೀಕ್ಷೆಯಂತೆ ಸೋಲುಂಡಿದ್ದಾರೆ. ಇಂದು ಒಟ್ಟು 18 ರಾಜ್ಯಸಭಾ ಸ್ಥಾನಗಳಿಗೆ ಐದು ರಾಜ್ಯಗಳಲ್ಲಿ ಚುನಾವಣೆ ನಡೆದಿತ್ತು.

ಜೆಡಿಎಸ್ ಬೆಂಬಲ ಪಡೆದುಕೊಂಡಿದ್ದ ಮದ್ಯ ದೊರೆ ವಿಜಯ ಮಲ್ಯರಿಗೆ ಬಿಜೆಪಿ ತನ್ನ ಎರಡನೇ ಪ್ರಾಶಸ್ತ್ಯದ ಮತಗಳನ್ನು ನೀಡಿದ್ದರಿಂದ ಅವರು ಸುಲಭವಾಗಿ ಜಯ ಸಾಧಿಸಿದ್ದು, ಸತತ ಎರಡನೇ ಬಾರಿ ರಾಜ್ಯಸಭೆ ಪ್ರವೇಶಿಸಿದ್ದಾರೆ. ಮಲ್ಯ ಜಯ ಕನಸು ಎಂದೇ ಹೇಳುತ್ತಾ ಬಂದಿದ್ದ ಕಾಂಗ್ರೆಸ್ ಇದರಿಂದ ತೀವ್ರ ನಿರಾಸೆಗೊಳಗಾಗಿದೆ.

ಆಯನೂರು ಮಂಜುನಾಥ್ ಮತ್ತು ವೆಂಕಯ್ಯ ನಾಯ್ಡು ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾದ ಇಬ್ಬರು ಅಭ್ಯರ್ಥಿಗಳು. ಕಾಂಗ್ರೆಸ್‌ನಿಂದ ಆಸ್ಕರ್ ಫೆರ್ನಾಂಡಿಸ್ ಒಬ್ಬರೇ ಆಯ್ಕೆಯಾಗಿದ್ದಾರೆ. ಇವರಲ್ಲಿ ನಾಯ್ಡು ಮತ್ತು ಆಸ್ಕರ್ ಪುನರಾಯ್ಕೆಗೊಂಡವರು.

ವೆಂಕಯ್ಯ ನಾಯ್ಡು ಮೊದಲ ಪ್ರಾಶಸ್ತ್ಯದ 60 ಮತ, ಆಯನೂರು ಮಂಜುನಾಥ್ ಮೊದಲ ಪ್ರಾಶಸ್ತ್ಯದ 60 ಮತಗಳನ್ನು ಬಿಜೆಪಿಯಿಂದ ಪಡೆದುಕೊಂಡಿದ್ದರೆ, ಕಾಂಗ್ರೆಸ್‌ನ ಆಸ್ಕರ್ ಫೆರ್ನಾಂಡಿಸ್ 59 ಮತಗಳನ್ನು ಗಿಟ್ಟಿಸಿ ರಾಜ್ಯಸಭೆಗೆ ರಹದಾರಿ ಪಡೆದುಕೊಂಡರು. ವಿಜಯ ಮಲ್ಯರಿಗೆ ಜೆಡಿಎಸ್‌ನ 27 ಮತಗಳು ಸೇರಿದಂತೆ ಒಟ್ಟು 59 ಮತಗಳು ಬಿದ್ದಿವೆ. ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿ ಟಿ.ವಿ. ಮಾರುತಿಯವರು ಕೇವಲ 23 ಮತಗಳನ್ನಷ್ಟೇ ಪಡೆದಿದ್ದಾರೆ.

ಬಿಜೆಪಿಯ 115, ಕಾಂಗ್ರೆಸ್‌ನ 73, ಜೆಡಿಎಸ್‌ನ 27 ಹಾಗೂ ಆರು ಪಕ್ಷೇತರರು ಸೇರಿದಂತೆ ರಾಜ್ಯ ವಿಧಾನಸಭೆಯ 221 ಶಾಸಕರು ಇಂದು ಮತ ಚಲಾಯಿಸಿದ್ದರು. ಎರಡನೇ ಪ್ರಾಶಸ್ತ್ಯದ ಮತಗಳನ್ನು ಮಲ್ಯರಿಗೆ ಹಾಕಬೇಕೆಂದು ಬಿಜೆಪಿಯು ತನ್ನ ಶಾಸಕರಿಗೆ ವಿಪ್ ಜಾರಿಗೊಳಿಸಿತ್ತು.

ಮಲ್ಯರನ್ನು ಬೆಂಬಲಿಸುವ ಸಂಬಂಧ ಬಿಜೆಪಿಯಲ್ಲಿ ಅಪಸ್ವರಗಳು ಕಾಣಿಸಿಕೊಂಡಿತ್ತಾದರೂ, ಕಾಂಗ್ರೆಸ್ ಅಭ್ಯರ್ಥಿ ಟಿ.ವಿ. ಮಾರುತಿಯವರನ್ನು ಸೋಲಿಸುವ ನಿಟ್ಟಿನಲ್ಲಿ ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಮಲ್ಯರನ್ನು ಬೆಂಬಲಿಸುವ ಈ ತೀರ್ಮಾನಕ್ಕೆ ಮುಖಂಡರು ಬಂದಿದ್ದರು.

ಪಾಸ್ವಾನ್, ಜೇಠ್ಮಲಾನಿಗೆ ಜಯ...
ಇಂದು ಬಿಹಾರ (5), ರಾಜಸ್ತಾನ (4), ಕರ್ನಾಟಕ (4), ಒರಿಸ್ಸಾ (3) ಮತ್ತು ಜಾರ್ಖಂಡ್ (2) ವಿಧಾನಸಭೆಯಿಂದ ರಾಜ್ಯಸಭೆಗೆ ಒಟ್ಟು 18 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇವುಗಳಲ್ಲಿ ಪ್ರಮುಖರಾದ ರಾಮ್ ಜೇಠ್ಮಲಾನಿ, ರಾಮ್ ವಿಲಾಸ್ ಪಾಸ್ವಾನ್, ರಾಜೀವ್ ಪ್ರತಾಪ್ ರೂಢಿ ಸೇರಿದಂತೆ ಪ್ರಮುಖರು ರಾಜ್ಯಸಭೆಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್, ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಢಿ, ಆರ್‌ಜೆಡಿಯ ರಾಮ್ ಕೃಪಾಲ್ ಯಾದವ್, ಜನತಾದಳದ ಆರ್.ಪಿ. ಸಿಂಗ್ ಮತ್ತು ಜೆಡಿಯುನ ಉಪೇಂದ್ರ ಕುಶ್ವಾಹಾ ಬಿಹಾರದಿಂದ ಜಯಗಳಿಸಿದ್ದಾರೆ.

ರಾಜಸ್ತಾನದಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ. ರಾಮ್ ಜೇಠ್ಮಲಾನಿ ಮತ್ತು ವಿ.ಪಿ. ಸಿಂಗ್ ಬಿಜೆಪಿಯಿಂದ ಗೆದ್ದರೆ, ಆನಂದ್ ಶರ್ಮಾ ಮತ್ತು ಅಶೋಕ್ ಆಲಿ ತಕ್ ಕಾಂಗ್ರೆಸ್ ಬೆಂಬಲದಿಂದ ರಾಜ್ಯಸಭೆ ಪ್ರವೇಶಿಸಿದ್ದಾರೆ.

ಜಾರ್ಖಂಡ್‌ನ ಎರಡು ಸ್ಥಾನಗಳು ಜೆಎಂಎಂ ಮತ್ತು ಕಾಂಗ್ರೆಸ್ ಪಾಲಾಗಿವೆ. ಜೆಎಂಎಂನ ಕೆ.ಡಿ. ಸಿಂಗ್ ಮತ್ತು ಕಾಂಗ್ರೆಸ್‌ನ ಧೀರಜ್ ಪ್ರಸಾದ್ ಸಾಹು ಇಲ್ಲಿ ಗೆಲುವು ಸಾಧಿಸಿದ್ದಾರೆ.

ಒರಿಸ್ಸಾದಲ್ಲಿ ಬಿಜೆಡಿಯ ಮೂರೂ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಪ್ಯಾರಿಮೋಹನ್ ಮೋಹಪತ್ರ, ಶಶಿ ಭೂಷಣ್ ಬೆಹೆರಾ ಮತ್ತು ಬೈಸ್ನಾಬ್ ಚರಣ್ ಪರೀದಾ ಎಂಬವರೇ ರಾಜ್ಯಸಭೆ ಪ್ರವೇಶಿಸಿದವರು.
ಸಂಬಂಧಿತ ಮಾಹಿತಿ ಹುಡುಕಿ