ಆದರೆ ಹಿಂದೂ ವಿವಾಹ ಕಾಯ್ದೆ 1955ನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವ ಕಾನೂನು ಬಾಹಿರವಾದ ಮದುವೆಗೆ ಸಂಬಂಧಿಸಿದಂತೆ 57ರ ಮದುಮಗ ಹಾಗೂ ಬಾಲಕಿಯ ತಾಯಿ ಮತ್ತು ಇಬ್ಬರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ರಾಜಮಂಡ್ರಿಯ ಎಪಿಎಸ್‌ಆರ್‌ಟಿಸಿ ಡಿಪೋದಲ್ಲಿ ಮೆಕ್ಯಾನಿಕಲ್ ಹೆಲ್ಪರ್ ಆಗಿರುವ 57 ವರ್ಷದ ಪಿ.ಬಾಲಗಂಗಾಧರ್ ತಿಲಕ್ ಆರ್ಯಪುರಂ ಎಂಬಲ್ಲಿನ ಸತ್ಯನಾರಾಯಣ ಮೂರ್ತಿಸ್ವಾಮಿ ದೇವಾಲಯದಲ್ಲಿ 17ರ ಹರೆಯದ ಗುಡಿವಾಡ ಜ್ಯೋತಿ ಎಂಬಾಕೆಯೊಂದಿಗೆ ಹಸೆಮಣೆ ಏರಿದ್ದ. ಯವತಿಯ ಮನೆಯವರು ಮತ್ತು ಸಂಬಂಧಿಗಳು ತಿಲಕ್ ಜೊತೆಗೆ ಬಲವಂತವಾಗಿ ಮದುವೆ ಮಾಡಿಸಿದ ವಿಷಯ ಊರೆಲ್ಲಾ ಹಬ್ಬಿ, ವಿಷಯ ಪೊಲೀಸರಿಗೂ ತಲುಪಿತ್ತು. ಸಂಜೆ ವಧು-ವರರು ಮನೆಗೆ ಹಿಂತಿರುಗುತ್ತಿರುವ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ತಿಲಕ್, ಯುವತಿಯ ತಾಯಿ ಹಾಗೂ ಇಬ್ಬರು ಸಂಬಂಧಿಗಳನ್ನು ವಶಕ್ಕೆ ತೆಗೆದುಕೊಂಡರು.
ತಿಲಕ್‌ಗೆ ಈ ಮೊದಲು ಮದುವೆಯಾಗಿತ್ತು, ಹೆಂಡತಿ ತೀರಿಕೊಂಡಿದ್ದಳು. ಆದರೆ ಚಪಲ ಚನ್ನಿಗರಾಯ ತನ್ನ ಮೊಮ್ಮಗಳ ವಯಸ್ಸಿನ ಬಾಲಕಿ ಜೊತೆ ಹಸೆಮಣೆ ಏರುತ್ತಿರುವ ಬಗ್ಗೆ ಅಲ್ಲಿನ ಹಲವು ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಡುವೆಯೂ ವಿವಾಹ ಕಾರ್ಯ ನೆರವೇರಿಸಿದ್ದರು.
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಜ್ಯೋತಿಯ ಶಾಲಾ ದಾಖಲೆಗಳನ್ನು ಪರಿಶೀಲಿಸಿರುವುದಾಗಿ ತಿಳಿಸಿರುವ ಡಿಎಸ್ಪಿ ಹರ್ಷವರ್ಧನ್ ರಾವ್, ಜ್ಯೋತಿ ಏಳನೇ ತರಗತಿಗೆ ತನ್ನ ವಿದ್ಯಾಭ್ಯಾಸವನ್ನು ಅಂತ್ಯಗೊಳಿಸಿದ್ದಳು. ಆಕೆಗೆ 17 ವರ್ಷ ಎಂಬುದು ಶಾಲಾ ದಾಖಲಾತಿ ಪ್ರಕಾರ ಖಚಿತವಾಗಿದೆ. ಏತನ್ಮಧ್ಯೆ ಜ್ಯೋತಿಯ ವಯಸ್ಸು 20 ವರ್ಷ ಎಂದು ಸರ್ಟಿಫೈ ಮಾಡಿದ್ದ ಗ್ರಾಮಲೆಕ್ಕಾಧಿಕಾರಿ ವಿರುದ್ಧವೂ ದೂರು ದಾಖಲಿಸಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.