ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಾಲೆಯಲ್ಲೇ ಹೆಣ್ಮಗುವಿಗೆ ಜನ್ಮವಿತ್ತ 15ರ ತಮಿಳು ಪೋರಿ!
(Ramanathapuram | Tamil Nadu | Teen delivers in school toilet | Balasubramanian)
ಬ್ರಿಟನ್, ಅಮೆರಿಕಾ ಮುಂತಾದ ಮುಂದುವರಿದ ರಾಷ್ಟ್ರಗಳಲ್ಲಿನ ಶಾಲಾ ಬಾಲಕಿಯರು ಗರ್ಭಿಣಿಯರಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಸುದ್ದಿ ಕೇಳಿದ್ದವರಿಗೆ ಇದೀಗ ಭಾರತದಲ್ಲೇ, ಅದರಲ್ಲೂ ನಮ್ಮ ಪಕ್ಕದ ರಾಜ್ಯದಲ್ಲಿ ಅಂತಹ ಘಟನೆಯೊಂದು ನಡೆದಿದೆ ಎನ್ನುವುದು ತೀರಾ ಅಚ್ಚರಿಯ ಸುದ್ದಿಯೇ.
ಹೌದು, ಈಕೆ ಹತ್ತನೇ ತರಗತಿ ಹುಡುಗಿ. ಅದಕ್ಕಿಂತಲೂ ಮಹತ್ವದ ವಿಚಾರವೆಂದರೆ ಜನ್ಮ ನೀಡಿರುವುದು ಶಾಲೆಯ ಶೌಚಾಲಯದಲ್ಲಿ ಎನ್ನುವುದು. ಹೆರಿಗೆಯಾದ ನಂತರ ಏನೂ ಆಗಿಲ್ಲವೆಂಬಂತೆ ಮನೆಗೆ ಹೊರಟು ಹೋಗಿದ್ದ ಪೋರಿಯೀಕೆ. ಮಗು ಅಳುತ್ತಿದ್ದುದನ್ನು ಕೇಳಿಸಿಕೊಂಡಿದ್ದ ಸಹಪಾಠಿಗಳು ನೋಡಿದಾಗ ಹಸುಗೂಸು ಪತ್ತೆಯಾಗಿತ್ತು. ಅಂದ ಹಾಗೆ ಈಕೆ ಜನ್ಮ ನೀಡಿದ್ದು ಹೆಣ್ಮಗುವಿಗೆ.
ಇದು ಚಾಕಲೇಟಿನ ಮಹಿಮೆ... ಮೊದಲೇ ಬಲಿಷ್ಠವಾಗಿ ಮತ್ತು ದುಂಡುದುಂಡಾಗಿ ಮೈತುಂಬಿಕೊಂಡಿದ್ದರಿಂದ ತಿಂಗಳು ಒಂಬತ್ತು ಕಳೆದರೂ ಯಾರಿಗೂ ಅಷ್ಟೊಂದು ಸಂಶಯ ಬಂದಿರಲಿಲ್ಲ. ಆದರೂ ಇತ್ತೀಚಿನ ಬೇಸಿಗೆ ರಜೆ ಮುಗಿಸಿಕೊಂಡು ಶಾಲೆಗೆ ಮರಳಿದ ನಂತರ ಆಕೆಯ ಹೊಟ್ಟೆಯ ಗಾತ್ರ ಏರಿದ್ದನ್ನು ಕಂಡಿದ್ದನ್ನು ಪ್ರಶ್ನಿಸಿದ ಗೆಳತಿಯರಿಗೆ ಆಕೆ ನೀಡಿದ್ದ ಉತ್ತರ, 'ನನ್ನ ತಂದೆ ಕಳುಹಿಸಿದ್ದ ಫಾರಿನ್ ಚಾಕಲೇಟ್ ತಿಂದಿದ್ದೆ, ಅದಕ್ಕೆ ಹೀಗಾಗಿದೆ..' ಎಂದು.
ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿ ತಾಯಿಯ ಜತೆ ವಾಸಿಸುತ್ತಿರುವ ಈ 10ನೇ ತರಗತಿ ಬಾಲಕಿಯ ವಯಸ್ಸು ಕೇವಲ 15. ಆಕೆಯ ತಂದೆ ದುಬೈಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಮಗುವನ್ನು ಕೊಲ್ಲಲು ಯತ್ನಿಸಿದ್ದಳು... ಎಂದಿನಂತೆ ಕಳೆದ ಶುಕ್ರವಾರವೂ ಶಾಲೆಗೆ ಬಂದಿದ್ದ ಬಾಲಕಿ ತರಗತಿಯ ಮಧ್ಯದಲ್ಲಿ ಹೊಟ್ಟೆ ನೋವಿನ ಕಾರಣ ನೀಡಿ ಶೌಚಾಲಯಕ್ಕೆ ತೆರಳಿದ್ದಳು. ಅಲ್ಲೇ ಮಗುವಿಗೆ ಜನ್ಮ ನೀಡಿದ ನಂತರ ಹೊಕ್ಕಳ ಬಳ್ಳಿಯನ್ನು ಗಾಜಿನ ತುಂಡಿನಿಂದ ಕತ್ತರಿಸಿದ್ದಲ್ಲದೆ, ಹಸುಳೆಯನ್ನು ಶೌಚಾಲಯದ ಗೋಡೆಗೆ ಬಡಿದು ಸಾಯಿಸಲು ಯತ್ನಿಸಿದ್ದಳು. ಆದರೆ ಆ ಯತ್ನ ವಿಫಲವಾಗಿತ್ತು.
ನಂತರ ಏನೂ ಆಗಿಲ್ಲವೆಂಬಂತೆ ತರಗತಿಗೆ ವಾಪಸ್ಸಾದರೂ, ಸಮವಸ್ತ್ರದಲ್ಲಿ ಅಲ್ಲಲ್ಲಿ ರಕ್ತದ ಕಲೆಗಳಾಗಿರುವುದನ್ನು ಸಹಪಾಠಿಗಳು ಗಮನಕ್ಕೆ ತಂದಿದ್ದರು. 'ಮಾಸಿಕ ಸ್ರಾವ ಹೆಚ್ಚಾಗಿದೆ' ಎಂಬ ಸಬೂಬು ನೀಡಿದ್ದಲ್ಲದೆ, ತಾನು ಮನೆಗೆ ಹೋಗಬೇಕೆಂದು ಶಿಕ್ಷಕರಿಂದ ಅನುಮತಿ ಪಡೆದುಕೊಂಡು ಅಲ್ಲಿಂದ ಕಳಚಿಕೊಂಡಿದ್ದಳು.
ಸ್ವಲ್ಪ ಹೊತ್ತಿನ ಬಳಿಕ ಮಗು ಅಳುತ್ತಿರುವ ಸದ್ದು ಕೇಳಿದ ಹುಡುಗಿಯರು ಶೌಚಾಲಯದಲ್ಲಿ ಆಗಷ್ಟೇ ಕಣ್ಣು ಬಿಟ್ಟಿದ್ದ ಹಸುಗೂಸನ್ನು ಕಂಡಿದ್ದರು. ಮಗು ಆರೋಗ್ಯದಿಂದ ಕೂಡಿದ್ದರೂ ನಿರ್ಲಕ್ಷ್ಯ ವಹಿಸದ ಶಿಕ್ಷಕಿಯರು ತಕ್ಷಣವೇ ಪಕ್ಕದ ಆಸ್ಪತ್ರೆಗೆ ರಿಕ್ಷಾದಲ್ಲಿ ಸಾಗಿಸಿ, ಪೂರಕ ಚಿಕಿತ್ಸೆ ಕೊಡಿಸಿದ ನಂತರ ಬಾಲಕಿಗೆ ಹಸ್ತಾಂತರಿಸಿದ್ದಾರೆ.
ಬಾಲಕಿ ಶಾಲೆಯಿಂದ ವಜಾ... ಘಟನೆ ನಡೆಯುತ್ತಿದ್ದಂತೆ ಶಾಲೆಗೆ ಕೆಟ್ಟ ಹೆಸರು ಬರುತ್ತಿದೆ ಎಂಬುದನ್ನು ಮನಗಂಡ ಮುಖ್ಯೋಪಾಧ್ಯಾಯರು ಬಾಲಕಿ ಮತ್ತು ಆಕೆಯ ಹೆತ್ತವರನ್ನು ಸೋಮವಾರ ಶಾಲೆಗೆ ಬರಹೇಳಿ ವರ್ಗಾವಣೆ ಪತ್ರ ಕೊಟ್ಟು ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ಮಗು ಜೀವಂತವಾಗಿತ್ತು ಎಂದು ವರದಿಗಳು ಹೇಳಿವೆ.
ಆದರೆ ಇದನ್ನು ಮುಖ್ಯ ಶಿಕ್ಷಣಾಧಿಕಾರಿ ಬಾಲಸುಬ್ರಹ್ಮಣ್ಯಂ ತೀವ್ರವಾಗಿ ಖಂಡಿಸಿದ್ದಾರೆ. ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದಾಳೆಂಬ ಕಾರಣಕ್ಕಾಗಿ ಆಕೆಯ ಒಪ್ಪಿಗೆಯಿಲ್ಲದೆ ಟಿಸಿ ಕೊಟ್ಟಿರುವುದು ತಪ್ಪು. ವಿದ್ಯಾರ್ಥಿನಿಯ ಭವಿಷ್ಯಕ್ಕೆ ತೊಂದರೆಯಾಗದಂತೆ ವಿದ್ಯಾಭ್ಯಾಸ ಮುಂದುವರಿಸಲು ಸಹಕಾರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇಷ್ಟಾದರೂ ತಾನು ಗರ್ಭಿಣಿಯಾಗಲು ಕಾರಣರು ಯಾರು, ಹುಟ್ಟಿರುವ ಮಗುವಿನ ತಂದೆ ಯಾರು ಎಂದು ಹೇಳಲು ವಿದ್ಯಾರ್ಥಿನಿ ನಿರಾಕರಿಸಿದ್ದಾಳೆ. ತಮಿಳುನಾಡು ಪ್ರೌಢ ಶಿಕ್ಷಣ ಇಲಾಖೆಯು ಇದೀಗ ಪ್ರಕರಣದ ತನಿಖೆ ನಡೆಸುತ್ತಿದೆ.