ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈಯುತ್ತಿರುವ ಭಾರತ ಶುಕ್ರವಾರ ಮತ್ತೊಂದು ಮೈಲುಗಲ್ಲನ್ನು ಸ್ಥಾಪಿಸಿದೆ. ಅಣ್ವಸ್ತ್ರ ಕೊಂಡೊಯ್ಯುವ ದೇಶೀಯ ನಿರ್ಮಿತ ಪೃಥ್ವಿ-II ಕ್ಷಿಪಣಿಯನ್ನು ಒರಿಸ್ಸಾ ಕರಾವಳಿಯಿಂದ 15 ಕಿಲೋ ಮೀಟರ್ ದೂರದ ಚಾಂದಿಪುರದಲ್ಲಿನ ಸಮಗ್ರ ಪರೀಕ್ಷಾ ವಲಯದಿಂದ (ಐಟಿಆರ್) ಯಶಸ್ವಿಯಾಗಿ ಪ್ರಯೋಗಿಸಲಾಗಿದೆ.
ಸಮುದ್ರದ ಮೇಲಿನ ಕಾಂಪ್ಲೆಕ್ಸ್-3ನ ಸಮಗ್ರ ಪ್ರಾಯೋಗಿಕಾ ವಲಯದ ಮೊಬೈಲ್ ಲಾಂಚರ್‌ನಿಂದ ಮುಂಜಾನೆ 6.50ಕ್ಕೆ ಹಾರಿಸಲಾಗಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.
ಪೃಥ್ವಿ-II ಕ್ಷಿಪಣಿಯ ಪ್ರಯೋಗವನ್ನು ಭಾರತೀಯ ಸೇನೆಯು ಕೈಗೊಂಡಿದ್ದು, ಸಂಪೂರ್ಣ ಯಶಸ್ವಿಯಾಗಿದೆ ಎಂದು ಐಟಿಆರ್ ನಿರ್ದೇಶಕ ಎಸ್.ಪಿ. ದಾಸ್ ತಿಳಿಸಿದ್ದಾರೆ.
350 ಕಿಲೋ ಮೀಟರ್ ಗರಿಷ್ಠ ದೂರ ಸಾಗುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿ ಸುಮಾರು 500 ಕೆ.ಜಿ. ಭಾರವನ್ನು ಹೊತ್ತು 483 ಸೆಕುಂಡುಗಳಲ್ಲಿ 43.5 ಕಿಲೋ ಮೀಟರ್ ಎತ್ತರಕ್ಕೆ ಚಿಮ್ಮುವ ಶಕ್ತಿಯನ್ನೂ ಹೊಂದಿದೆ. ಅಲ್ಲದೆ ಖಂಡಾಂತರ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವೂ ಈ ಕ್ಷಿಪಣಿಗಿದೆ.
ಈಗಾಗಲೇ ಭಾರತೀಯ ಸೇನಾ ಪಡೆಗೆ ಸೇರಲ್ಪಟ್ಟಿರುವ ನೆಲದಿಂದ ನೆಲಕ್ಕೆ ಹಾರುವ ಸಾಮರ್ಥ್ಯವುಳ್ಳ ಪೃಥ್ವಿ-II ಕ್ಷಿಪಣಿಯನ್ನು ಮಿಲಿಯರಿಯ ವಿಶೇಷ ತಜ್ಞರು ಪ್ರಯೋಗಿಸಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಭಾರತದ ಪ್ರತಿಷ್ಠಿತ ಸಮಗ್ರ ನಿರ್ದೇಶಿತ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ (ಐಜಿಎಂಡಿಪಿ) ನಿರ್ಮಿಸಲಾದ ಮೊತ್ತ ಮೊದಲ ಬ್ಯಾಲಿಸ್ಟಿಕ್ ಕ್ಷಿಪಣಿ ಪೃಥ್ವಿ ದ್ರವ ಪದಾರ್ಥಗಳ ಮೂಲಕ ಇಂಧನ ಪಡೆದುಕೊಂಡು ಎರಡು ಇಂಜಿನ್‌ಗಳು ಚಾಲನೆಗೊಳಗಾಗುತ್ತದೆ.
ಈ ಹಿಂದೆ 2010ರ ಮಾರ್ಚ್ 27ರಂದು ಇದೇ ಸ್ಥಳದಲ್ಲಿ ಪೃಥ್ವಿ-II ಕ್ಷಿಪಣಿಯನ್ನು ಯಶಸ್ವಿಯಾಗಿ ಪ್ರಯೋಗ ನಡೆಸಲಾಗಿತ್ತು. ಆಗಲೂ ಭಾರತೀಯ ಸೇನೆಯೇ ಪ್ರಯೋಗದ ಮುಂದಾಳುತ್ವ ವಹಿಸಿತ್ತು.
ಕ್ಷಿಪಣಿಗಳನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಬಳಿಕ, ಅದನ್ನು ಸೇನೆಗೆ ಸೇರ್ಪಡೆಗೊಳಿಸುವ ಮೊದಲು ಹಲವಾರು ಬಾರಿ ಪ್ರಯೋಗ ನಡೆಸಲಾಗುತ್ತದೆ. ನಂತರವೂ ಆಗಿಂದಾಗ್ಗೆ ಪ್ರಯೋಗಗಳನ್ನು ನಡೆಸುತ್ತಾ, ಅದರ ಕಾರ್ಯಕ್ಷಮತೆಯನ್ನು ಪರೀಕ್ಷಿಸಲಾಗುತ್ತಿರುತ್ತದೆ. ಅದರಂತೆ ಇಂದೂ ಕ್ಷಿಪಣಿ ಪರೀಕ್ಷೆ ನಡೆದಿದೆ.