2008ರ ಮುಂಬೈ ಮಾರಣ ಹೋಮ ನಡೆಸಿದ್ದು ಪಾಕಿಸ್ತಾನ ಎಂದು ಜಗತ್ತಿಗೇ ತಿಳಿದಿದ್ದರೂ, ರೂವಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಕ್ಷ್ಯಗಳ ಕೊರತೆಯಿದೆ ಎಂದು ಕಾರಣ ನೀಡುತ್ತಿರುವ ದೇಶಕ್ಕೆ ಭಾರತ ಮತ್ತೆ ದಾಖಲೆಗಳನ್ನು ಹಸ್ತಾಂತರಿಸಿದೆ.
ವಿದೇಶಾಂಗ ಕಾರ್ಯದರ್ಶಿಗಳ ನಡುವಿನ ಮಾತುಕತೆ ಹಿನ್ನೆಲೆಯಲ್ಲಿ ಭಾರತವು ಮುಂಬೈ ಭಯೋತ್ಪಾದನಾ ದಾಳಿಯ ಸಂಬಂಧ ಪಾಕಿಸ್ತಾನ ಕೋರಿದ್ದ ಹೆಚ್ಚುವರಿ ಮಾಹಿತಿಯಾಗಿ 11ನೇ ದಾಖಲೆಯನ್ನು ಶುಕ್ರವಾರ ಇಸ್ಲಾಮಾಬಾದ್‌ಗೆ ಹಸ್ತಾಂತರಿಸಿದೆ.
ಏಪ್ರಿಲ್ ತಿಂಗಳಲ್ಲಿ ಭಾರತಕ್ಕೆ ಪಾಕಿಸ್ತಾನ ನೀಡಿದ್ದ ಆರು ದಾಖಲೆಗಳಿಗೆ ಸಂಬಂಧಪಟ್ಟಂತೆ ಪ್ರಸಕ್ತ ಉತ್ತರವಾಗಿ 11ನೇ ದಾಖಲೆಯನ್ನು ಭಾರತ ಹಸ್ತಾಂತರಿಸಿದೆ ಎಂದು ವರದಿಗಳು ಹೇಳಿವೆ. ಈ ದಾಖಲೆಯು ಯಾವ ಪುರಾವೆಯನ್ನು ಒಳಗೊಂಡಿದೆ ಎಂಬುದು ಬಹಿರಂಗವಾಗಿಲ್ಲ.
ಇದೇ ಜೂನ್ 24ರಂದು ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್ ಜತೆ ಭಾರತದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಮಾತುಕತೆ ನಡೆಸಲಿರುವ ಹಿನ್ನೆಲೆಯಲ್ಲಿ ಇದೀಗ ಮುಂಬೈ ದಾಳಿ ಸಂಬಂಧ ಪುರಾವೆ ಹಸ್ತಾಂತರಿಸಿರುವುದು ಮಹತ್ವ ಪಡೆದುಕೊಂಡಿದೆ.
ಮುಂಬೈ ಭಯೋತ್ಪಾದನಾ ದಾಳಿಗಳ ಕುರಿತಂತೆ ಪಾಕಿಸ್ತಾನವು ಏಪ್ರಿಲ್ 25ರಂದು ನೀಡಿದ್ದ ಆರು ಪುರಾವೆಗಳಿಗೆ ಉತ್ತರವಾಗಿ ಈಗ ಭಾರತವು ತನ್ನ ದಾಖಲೆಯನ್ನು ಪಾಕಿಸ್ತಾನದ ಉಪ ರಾಯಭಾರಿಯನ್ನು ಕರೆಸಿ ಹಸ್ತಾಂತರಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಷ್ಣುಪ್ರಕಾಶ್ ತಿಳಿಸಿದ್ದಾರೆ.
ಪಾಕಿಸ್ತಾನದ ಭಾರತಕ್ಕಾಗಿನ ಉಪ ರಾಯಭಾರಿ ರಫೀತ್ ಮಸೂದ್ ಅವರಿಗೆ ಪಾಕಿಸ್ತಾನ, ಇರಾನ್ ಮತ್ತು ಅಫಘಾನಿಸ್ತಾನದ ಉಸ್ತುವಾರಿ ಜಂಟಿ ಕಾರ್ಯದರ್ಶಿ ವೈ.ಕೆ. ಸಿನ್ಹಾ ದಾಖಲೆಯನ್ನು ಹಸ್ತಾಂತರಿಸಿದರು.
ಪಾಕಿಸ್ತಾನವು ಲಷ್ಕರ್ ಇ ತೋಯ್ಬಾ ಸಂಸ್ಥಾಪಕ ಹಾಗೂ ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇರುವುದರ ಕುರಿತು ಈ ಸಂದರ್ಭದಲ್ಲಿ ತೀವ್ರ ಅಸಮಾಧಾನವನ್ನು ಕೂಡ ರವಾನಿಸಿದೆ.